ಮಡಿಕೇರಿ, ಏ.11 : ಕೊಡವರ ಹೊಸ ವರ್ಷ ಎಡಮ್ಯಾರ್ನ್ನು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್ಸಿ) ಸಂಘಟನೆ ವತಿಯಿಂದ ಪ್ರತೀವರ್ಷದಂತೆ ಈ ಬಾರಿಯೂ ಸಾರ್ವತ್ರಿಕವಾಗಿ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ತಾ. 14ರ ಸಂಜೆ 6.30ಕ್ಕೆ ಗೋಣಿಕೊಪ್ಪದಲ್ಲಿ 22ನೇ ವರ್ಷದ ಬೃಹತ್ ಪಂಜಿನ ಮೆರವಣಿಗೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಪಂಚಾಂಗದ ಎಡಮ್ಯಾರ್ ಚಂಗ್ರಾಂದಿ (ಸೌರಮಾನ ಯುಗಾದಿ)ಯು ಕೊಡವರ ಹೊಸ ವರ್ಷವನ್ನು ಬಿಂಬಿಸುವ ಪವಿತ್ರ ಉತ್ಸವವಾಗಿದ್ದು, ಇದಕ್ಕೆ ವಿಶೇಷವಾದಂತಹ ಮಹತ್ವ ನೀಡಿರುವದು ಕೊಡವ ಜನಪದೀಯ ಚರಿತ್ರೆ ಮತ್ತು ಕಾವ್ಯಗಳಲ್ಲಿ ಕಂಡು ಬರುತ್ತದೆ. ಎಡಮ್ಯಾರ್ ಹಬ್ಬವು ವರ್ಷದ 6 ಮಾಸಗಳಲ್ಲಿ ಅತ್ಯಂತ ವರ್ಣ ರಂಜಿತ ಮತ್ತು ವಿಶೇಷವಾದ ವಸಂತ ಕಾಲದ ಅಂತಿಮ ಪರ್ವವಾಗಿದ್ದು, ಈ ‘ಎಡಮ್ಯಾರ್ ನಮ್ಮೆ’ ಕೃಷಿ ಪರ್ವದ ಆರಂಭಿಕ ಅಧ್ಯಾಯವಾಗಿದೆ. ಹಬ್ಬ ಹರಿದಿನಗಳಲ್ಲಿ ಬಿಡುವು ಪಡೆದುಕೊಂಡ ಕೊಡವ ಬುಡಕಟ್ಟು ಕುಲ ಮುಂದೆ ಕೃಷಿ ಚಟುವಟಿಕೆ ಪ್ರಾರಂಭಿಸುವ ಕಾಲ ಇದಾಗಿದ್ದು, ಎಡಮ್ಯಾರ್ ನಂತರ ಮುಂದಿನ ಮುಂಗಾರು ಬಿತ್ತನೆಗೆ, ಕೃಷಿ ಚಟುವಟಿಕೆಗೆ ಕೊಡವ ರೈತರು ತಯಾರಿ ನಡೆಸುತ್ತಾರೆ. ಪ್ರಕೃತಿಯ ವರ್ಷ ಚಕ್ರದ ಪ್ರಕಾರ ಕೊಡವರ 5 ಪ್ರಮುಖ ಹಬ್ಬಗಳಲ್ಲಿ ಎಡಮ್ಯಾರ್ ಮೊದಲನೆಯದಾಗಿದೆ ಎಂದು ವಿವರಿಸಿದರು.
ಭೂಮಿ ತಾಯಿಗೂ ಕೊಡವರಿಗೂ ಇರುವ ಉನ್ನತ, ಪಾರಂಪರಿಕ ಮತ್ತು ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವದರ ಮೂಲಕ ಮುಂದಿನ ಪೀಳಿಗೆಗೆ ಕೊಡವರ ಶ್ರೇಷ್ಠ ಆದರ್ಶ ಸಂಸ್ಕøತಿ ಮತ್ತು ನಾಗರಿಕತೆಯ ಹೆಗ್ಗುರುತುಗಳನ್ನು ಬಳುವಳಿಯಾಗಿ ವರ್ಗಾಯಿಸುವ ಸಂದೇಶ ಸಾರುವದು ಸಿಎನ್ಸಿ ಉದ್ದೇಶವಾಗಿದೆ ಎಂದು ನಾಚಪ್ಪ ತಿಳಿಸಿದರು.
ಹಕ್ಕೋತ್ತಾಯ : ಕೊಡವ ಲ್ಯಾಂಡ್ ಸ್ವಾಯತ್ತತೆ ಹಾಗೂ ಹಕ್ಕೊತ್ತಾಯಗಳಾದ ಕೇಂದ್ರಾಡಳಿತ ಪ್ರದೇಶ ರಚನೆ, ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ 244 ನೇ ವಿಧಿ ಪ್ರಕಾರ ಸಂವಿಧಾನ ಭದ್ರತೆ, ಕೊಡವರ ನರಮೇಧ ನಡೆದ ದೇವಟ್ಪರಂಬ್ ದುರಂತ ಸ್ಥಳದಲ್ಲಿ ಜಾಗತಿಕ ಸ್ಮಾರಕ ನಿರ್ಮಾಣ, ಜಾಗತಿಕ ಹೋಲೊಕಾಸ್ಟ್ ಮ್ಯೂಸಿಯಂ, ವಿಶ್ವ ಸಂಸ್ಥೆಯ ಹೋಲೊಕಾಸ್ಟ್ ರಿಮೆಂಬರೆನ್ಸ್ ಪಟ್ಟಿಯಲ್ಲಿ ಸೇರಿಸುವದು, ಕೊಡವರ ನರಮೇಧಕ್ಕೆ ಟಿಪ್ಪುವಿನೊಂದಿಗೆ ಸಹಕರಿಸಿದ ಫ್ರೆಂಚ್ ಮಿತ್ರ ಪಡೆಯ ಪಾಶವಿ ಕೃತ್ಯಕ್ಕಾಗಿ ಫ್ರಾನ್ಸ್ ಕೊಡವರ ಬಹಿರಂಗ ಕ್ಷಮೆಯಾಚಿಸುವದು, ಕೊಡವ ಭಾಷೆಯನ್ನು ಸಂವಿಧಾನದ 8ನೇ ಶೆಡ್ಯೂಲ್ಗೆ ಸೇರ್ಪಡೆಗೊಳಿಸುವದೂ ಸೇರಿದಂತೆ ಕೊಡವ ನ್ಯಾಷನಲ್ ಕೌನ್ಸಿಲ್ ನಡೆಸುತ್ತಿರುವ ಶಾಸನ ಬದ್ಧ ಹಕ್ಕೊತ್ತಾಯದ ಬದ್ಧತೆ ಮತ್ತು ತೀವ್ರತೆಯ ಸಂದೇಶವನ್ನು ಲೋಕಕ್ಕೆ ಬಿತ್ತರಿಸುವದು ಮತ್ತು ಸರಕಾರಕ್ಕೆ ತಲಪಿಸುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಅಂದು ಮುಂಜಾನೆ 6.30 ಗಂಟೆಗೆ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪ ಅವರ ಭತ್ತದ ಗದ್ದೆಯಲ್ಲಿ ಹೊಸ ವರ್ಷದ ಪ್ರಯುಕ್ತ ಜೋಡೆತ್ತಿನ ಮೂಲಕ ಭೂಮಿ ಉಳುಮೆ ಕಾರ್ಯವನ್ನು ಶಾಸ್ತ್ರೋಕ್ತವಾಗಿ ಮತ್ತು ಸಾಂಪ್ರದಾಯಿ ಕವಾಗಿ ನೆರವೇರಿಸಲಾಗುವದು ಎಂದು ನಾಚಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕಲಿಯಂಡ ಪ್ರಕಾಶ್ ಹಾಜರಿದ್ದರು.