ಮಡಿಕೇರಿ, ಏ. 11 : ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಕಲಾಭಾರತಿ ವತಿಯಿಂದ ಪ್ರಥಮ ವರ್ಷದ ವಿಶ್ವ ಕಲಾ ದಿವಸ ಆಚರಣೆ ಹಾಗೂ ಸಮೂಹ ಕಲಾ ಪ್ರದರ್ಶನ ಕಾರ್ಯಕ್ರಮ ತಾ. 15ರಂದು ಭಾರತೀಯ ವಿದ್ಯಾಭವನದಲ್ಲಿ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಲಾ ಶಿಬಿರದ ನಿರ್ದೇಶಕ ಪ್ರಸನ್ನ ಕುಮಾರ್ ಹಾಗೂ ಕಲಾವಿದ ರಾಮ್ ಗೌತಮ್ ಅವರುಗಳು ಅಂದು ಪೂರ್ವಾಹ್ನ 10 ಗಂಟೆಗೆ ವೈದ್ಯ ಡಾ|| ಎಂ.ಜಿ.ಪಾಟ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಶಿಬಿರದಲ್ಲಿ 19 ಮಂದಿ ವೃತ್ತಿ ನಿರತ ಕಲಾವಿದರು ಕ್ಯಾನ್‍ವಾಸ್‍ಗಳಲ್ಲಿ ಕಲಾಕೃತಿಗಳನ್ನು ರಚಿಸಲಿದ್ದಾರೆ. ಇದರೊಂದಿಗೆ ಕಲಾಭಾರತಿಯ 30 ಕಲಾ ವಿದ್ಯಾರ್ಥಿಗಳೂ ಇವರೊಂದಿಗೆ ಬೆರೆತು ತಮ್ಮದೇ ಆದ ಕಲಾಕೃತಿಗಳನ್ನು ರಚಿಸುವದರೊಂದಿಗೆ ವಿಚಾರ ವಿನಿಮಯ, ಕಲಾ ವಿಮರ್ಶೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.

ಭಾರತೀಯ ವಿದ್ಯಾಭವನ ಕಲೆ ಮತ್ತು ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯನಿರ್ವ ಹಿಸುತ್ತಿದ್ದು, ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಪ್ರಪಂಚದಾದ್ಯಂತ ಕ್ರಿಯಾತ್ಮಕ ಚಟುವಟಿಕೆಯ ಅರಿವನ್ನು ಮೂಡಿ ಸುವ ಸಲುವಾಗಿ ಅಂತಾರಾಷ್ಟ್ರೀಯ ಕಲಾ ಒಕ್ಕೂಟವು ಕಲಾವಿದ ಲಿಯೋನಾರ್ಡೊ ಡಾ’ವಿಂಚಿ ಅವರ ಜನ್ಮದಿನವಾದ ತಾ. 15ನ್ನು ವಿಶ್ವ ಕಲಾ ದಿನವನ್ನಾಗಿ 2012ರಲ್ಲಿ ಘೋಷಿಸಿದ್ದು, ಸೃಜನಾತ್ಮಕ ಸಮಾಲೋಚನೆಗಳು ಕ್ರಿಯಾತ್ಮಕ ಚಟುವಟಿಕೆಗಳು, ಕಲಾ ಶಿಬಿರಗಳು, ಕಲಾ ಪ್ರದರ್ಶನಗಳು ವಿಶ್ವ ಕಲಾ ದಿನದ ಆಶಯಗಳಾಗಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾಭವನ ಕಲಾ ಭಾರತಿ ಘಟಕ ಮಡಿಕೇರಿಯಲ್ಲಿ ಪ್ರಥಮ ಬಾರಿಗೆ ವಿಶ್ವ ಕಲಾ ದಿವಸವನ್ನು ಆಚರಿಸುವ ಮೂಲಕ ಹಿರಿಯ ಮತ್ತು ಕಿರಿಯ ಕಲಾವಿದರಿಗೆ ತಮ್ಮ ಕ್ರಿಯಾತ್ಮಕ ಕಲೆಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುತ್ತಿದೆ ಎಂದು ವಿವರಿಸಿದರು.

ಭಾಗವಹಿಸುವ ಕಲಾವಿದರು

ಅಂದು ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುವ ಕಲಾ ಶಿಬಿರದಲ್ಲಿ ಪಿ.ಮೋಹನ್ ಕುಮಾರ್, ಎಂ.ಇ. ದಿನೇಶ್, ಪ್ರಸನ್ನಕುಮಾರ್, ಬಾವಾ ಮಾಲ್ದಾರೆ, ಭರತ್ ಕೋಡಿ, ಉ.ರಾ. ನಾಗೇಶ್, ಜಯರಾಮ ವೈ.ಹೆಚ್. ರೂಪೇಶ್ ನಾಣಯ್ಯ, ಕೆ.ಆರ್. ಮಂಜುನಾಥ್, ರಾಮ್ ಗೌತಮ್, ಸಾಧಿಕ್ ಹಂಸ, ಚಂದ್ರಶೇಖರ್ ಬಿ.ಎನ್., ಮಹೇಶ್ ಬಿ.ಎಲ್, ಸಜಿತ್‍ಕುಮಾರ್, ಪ್ರವೀಣ್ ವರ್ಣಕುಟೀರ, ಆರತಿ ಸೋಮಯ್ಯ, ಅರುಣಾ ಗೌತಮ್, ಭುವನೇಶ್ವರಿ ಬಿ.ಎ. ಮತ್ತು ಕೆ.ಎಸ್.ಚಂದ್ರಬೋಸ್ ಅವರುಗಳು ಭಾಗವಹಿಸಲಿದ್ದು, ಇವರೊಂದಿಗೆ ಕಲಾಭಾರತಿಯ 30 ವಿದ್ಯಾರ್ಥಿಗಳೂ ಪಾಲ್ಗೊಳ್ಳಲಿದ್ದಾರೆ ಎಂದರು.

ಅಂದು ಸಂಜೆ 5 ಗಂಟೆಗೆ ಭಾಗವಹಿಸಿರುವ ಎಲ್ಲಾ ಕಲಾವಿದರ ಕೈಯ್ಯಲ್ಲಿ ಅರಳಿದ ಕಲೆಗಳ ಸಮೂಹ ಕಲಾ ಪ್ರದರ್ಶನ ನಡೆಯಲಿದ್ದು, ಕೊಡಗು ವಿದ್ಯಾಲಯದ ಅಧ್ಯಕ್ಷ ಬಿ.ಕೆ.ಸುಬ್ಬಯ್ಯ ಅವರು ಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಕಲಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಭಾರತಿಯ ವಿದ್ಯಾಭವನ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ವಹಿಸಲಿದ್ದಾರೆ. ಕಲಾ ಶಿಬಿರದಲ್ಲಿ ಕ್ರಿಯಾತ್ಮಕ ಚಿಂತನೆಯುಳ್ಳ, ಚಿತ್ರಕಲೆಯಲ್ಲಿ ಆಸಕ್ತಿಯುಳ್ಳ ಸಾರ್ವಜನಿಕರೂ ಭಾಗವಹಿಸ ಬಹುದಾಗಿದ್ದು, ಕ್ಯಾನ್‍ವಾಸ್ ಹಾಗೂ ಪರಿಕರವನ್ನು ಒದಗಿಸಲಾಗುವದು ಎಂದು ಪ್ರಸನ್ನ ಕುಮಾರ್ ತಿಳಿಸಿದರು.

ಚಿತ್ರಕಲಾ ಪ್ರದರ್ಶನ ತಾ. 15ರಿಂದ 22ರವರೆಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿ ರುತ್ತದೆ. ಮುಂದಿನ ದಿನಗಳಲ್ಲಿ ಕಲಾವಿದರ ಕಲಾಕೃತಿಗಳನ್ನು ಸಂಗ್ರಹಿಸುವ ಪ್ರಯತ್ನವೂ ಕಲಾಭಾರತಿಯಿಂದ ನಡೆಯಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ರೂಪೇಶ್ ನಾಣಯ್ಯ ಹಾಗೂ ಭರತ್ ಕೋಡಿ ಉಪಸ್ಥಿತರಿದ್ದರು.