ಗೋಣಿಕೊಪ್ಪಲು, ಏ. 10: ಗೋಣಿಕೊಪ್ಪಲು ದಿನೇ ದಿನೇ ಸೊಳ್ಳೆಗಳ ಸಂತಾನೋತ್ಪತ್ತಿಯ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಎಲ್ಲೆಂದರಲ್ಲಿ ಕೊಳಚೆ ಪ್ರದೇಶ. ಕಣ್ಣಿಗೆ ರಾಚುವ ಕಸದ ರಾಶಿ, ತ್ಯಾಜ್ಯ. ಗೋಣಿಕೊಪ್ಪಲು ನಗರ ಆಸು-ಪಾಸಿನಲ್ಲಿ ಹಾದು ಹೋಗುವ ಕೀರೆಹೊಳೆ ಹಾಗೂ ತೋಡುಗಳಲ್ಲಿ ನೀರು ಹರಿಯುತ್ತಿಲ್ಲ. ಬದಲಿಗೆ ಕೊಳಚೆ ನೀರು ಮಡುಗಟ್ಟಿ ನಿಂತಿದೆ. ಇಲ್ಲಿನ ಕಸದ ರಾಶಿ ಅರುವತ್ತೊಕ್ಕಲು ಗ್ರಾ.ಪಂ. ವ್ಯಾಪ್ತಿಯ ಸೀತಾ ಕಾಲೋನಿಯಲ್ಲಿ ವಿಲೇವಾರಿಯಾಗಬೇಕಿತ್ತು. ಆದರೆ, ವೈಜ್ಞಾನಿಕ ವಿಲೇ ಪದ್ಧತಿಯನ್ನು ಗೋಣಿಕೊಪ್ಪಲು ಗ್ರಾ.ಪಂ.ಅಳವಡಿಸಿಕೊಳ್ಳದ ಹಿನ್ನೆಲೆ ಇಲ್ಲಿ ಸಿಕ್ಕ ಸಿಕ್ಕ ಜಾಗದಲ್ಲಿ ಕಸ ವಿಲೇವಾರಿಯಾಗುತ್ತಿದೆ. ಕೆಲವು ಬಾರ್, ಹೊಟೇಲ್‍ಗಳ ಶೌಚಾಲಯ ನೀರು ತೋಡನ್ನು ಸೇರುತ್ತಿದೆ. ಒಟ್ಟಿನಲ್ಲಿ ನಗರವಾಸಿಗಳ ಆರೋಗ್ಯ ಹದಗೆಡುತ್ತಿದ್ದು, ಸಾಂಕ್ರಾಮಿಕ ರೋಗಗಳನ್ನು ಇಲ್ಲಿನ ನಾಗರಿಕರು ಬಳುವಳಿಯಾಗಿ ಹೊಂದಿಕೊಳ್ಳುವ ದಿನ ದೂರವಿಲ್ಲ.
ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ನೀರು, ಗಾಳಿ, ಆಹಾರ ಹಾಗೂ ಔಷಧಿ ಅಗತ್ಯ. ಜತೆಗೆ ಪರಿಸರ ಶುಚಿತ್ವ ಬೇಕು. ವಾಣಿಜ್ಯ ನಗರಿ ಖ್ಯಾತಿಯ ಗೋಣಿಕೊಪ್ಪಲು ಬೈಪಾಸ್ ರಸ್ತೆ, ಕೀರೆಹೊಳೆ ದಂಡೆ, ಹರಿಶ್ವಂದ್ರಪುರ ರಸ್ತೆ, ಪೆÇನ್ನಂಪೇಟೆ ರಸ್ತೆ, ಹಿಂದೂ ರುದ್ರಭೂಮಿ ಸಮೀಪ ನೀವು ಕಣ್ಣಾಡಿಸಿದರೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗುತ್ತದೆ.
ಇಲ್ಲಿನ ಕಾಂಗ್ರೆಸ್-ಬಿಜೆಪಿ ಬೆಂಬಲಿತ ಗ್ರಾ.ಪಂ. ಸದಸ್ಯರು ಕಿತ್ತಾಡುವದರಲ್ಲಿಯೇ ಕಾಲಹರಣ ಮಾಡಿದ ಪರಿಣಾಮ ನಗರದ ಸ್ವಚ್ಛತೆ ಹಿಂದೆಂದಿಗಿಂತಲೂ ಹದಗೆಟ್ಟಿದೆ. ಸ್ವತಃ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೆಲ್ವಿಯೇ ಹೇಳುತ್ತಾರೆ. ನನ್ನ ಅಧ್ಯಕ್ಷಾವಧಿಯಲ್ಲಿ ಉತ್ತಮ ಕೆಲಸ ಮಾಡಲು ಯಾರೂ ಬಿಟ್ಟಿಲ್ಲ ಎಂದು.
ಅಧ್ಯಕ್ಷೆಯಾಗಿ ಆಯ್ಕೆಯಾದ ಸೆಲ್ವಿಗೆ ಸರಿಯಾದ ಮಾರ್ಗದರ್ಶಕರು ಸಿಗದ ಹಿನ್ನೆಲೆ ಗೋಣಿಕೊಪ್ಪಲು ನಗರವನ್ನು ಫ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ಮಾರ್ಪಡಿಸಲು ಸಾಧ್ಯವಾಗಿಲ್ಲ ಎನ್ನಲಾಗುತ್ತಿದೆ. ಇಲ್ಲಿನ ಬೈಪಾಸ್ ರಸ್ತೆಯನ್ನು ಕೊಡಗಿನ ಮಾಹೆ( ಪಾಂಡಿಚೇರಿ ರಾಜ್ಯ) ಎಂದು ಕರೆಯಲಾಗುತ್ತಿದೆ. ಬಾರ್ ಮತ್ತು ವೈನ್ ಸ್ಟೋರ್‍ಗಳೆಲ್ಲಾ ಇಲ್ಲಿಯೇ ನೆಲೆನಿಂತಿದೆ. ಇಷ್ಟೇ ಆಗಿದ್ದರೆ ಪರವಾಗಿಲ್ಲ. ಮದ್ಯದ ಸೀಸೆಗಳು, ಬ್ರಾಂದಿಯ ಖಾಲಿ ಪ್ಯಾಕೆಟ್‍ಗಳ ರಾಶಿಯನ್ನೇ ನೀವಿಲ್ಲಿ ನೋಡಬಹುದು.
ಅಲ್ಲಿಯೇ ಕಸಕ್ಕೆ ಬೆಂಕಿ ಹಚ್ಚಲಾಗುತ್ತದೆ. ಆದರೆ, ಎಲ್ಲವೂ ಸುಡುವದಿಲ್ಲ. ಇಲ್ಲಿನ ಕೈಕೇರಿ ತೋಡಿನ ದಡಕ್ಕೆ ಸುರಿಯಲಾಗುತ್ತಿದೆ. ಇಲ್ಲಿನ ಗ್ರಾ.ಪಂ.ಕಸದ ಗುತ್ತಿಗೆ ಹೊಂದಿರುವವರಿಗೂ ಇಲ್ಲಿನ ತ್ಯಾಜ್ಯವನ್ನು ಸೀತಾ ಕಾಲೋನಿಗೆ ಸಾಗಿಸಲು ನಿರ್ಬಂಧವಿದೆ. ಆದ್ದರಿಂದ ದಿನೇ ದಿನೇ ಕೊಳಚೆ ಪ್ರದೇಶದ ವಿಸ್ತೀರ್ಣ ಹೆಚ್ಚಾಗುತ್ತಿದೆಯೇ ವಿನಃ ನಾಗರಿಕ ಪ್ರಜ್ಞೆ ಇಲ್ಲಿ ಮಾಯವಾಗಿಬಿಟ್ಟಿದೆ.
ಮೊದಲೆಲ್ಲಾ ಸೊಳ್ಳೆಯನ್ನು ಕೊಲ್ಲಲು ಗ್ರಾ.ಪಂ. ಒಂದಷ್ಟು ಪ್ರಯತ್ನ ಪಡುತ್ತಿತ್ತು. ಇಲ್ಲಿನ ಕೊಳಚೆ ಪ್ರದೇಶಗಳಿಗೆ ಔಷಧಿ ಸಿಂಪರಣೆ ಮಾಡುತ್ತಿತ್ತು. ಇದೀಗ ಅದೆಲ್ಲಾ ನಿಂತು ಹೋಗಿದೆ. ಇಲ್ಲಿನ ಕೀರೆ ಹೊಳೆ ಹಾಗೂ ಕೈಕೇರಿ ತೋಡು ಹೂಳೆತ್ತುವ ಕಾಮಗಾರಿಯನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆ ನೀರು ಹರಿಯುತ್ತಿಲ್ಲ. ಇಲ್ಲಿನ ಕೊಳವೆ ಬಾವಿಗಳನ್ನೇ ಗ್ರಾ.ಪಂ.ಯು ನಗರದ ಕುಡಿಯುವ ನೀರಿಗೆ ಅವಲಂಬಿಸಿದ್ದು, ವಿಷಕಾರಿ ವಸ್ತುಗಳು ಕೊಳವೆ ಬಾವಿಗೂ ಸೇರುವದರಿಂದ ಆರೋಗ್ಯದ ಮೇಲೆಯೂ ಅಡ್ಡ ಪರಿಣಾಮ ಉಂಟಾಗುತ್ತಿದೆ.
ಬೇಸಿಗೆ ಕಾಲದಲ್ಲಿ ವಿವಿಧ ಬಗೆಯ ರೋಗ ರುಜಿನಗಳು ಹರಡಲು ಇಲ್ಲಿನ ಕೊಳಚೆ ಪ್ರದೇಶಗಳೇ ಮುಖ್ಯ ಕಾರಣವಾಗುತ್ತಿದೆ.
ಕುರಿ, ಕೋಳಿ, ಹಂದಿ, ಮೀನು ಮಾರುಕಟ್ಟೆಯ ತ್ಯಾಜ್ಯಗಳೂ ಇಲ್ಲಿನ ತೋಡನ್ನೇ ಸೇರುತ್ತಿವೆ. ಈ ಬಗ್ಗೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ ಅವರನ್ನು ‘ಶಕ್ತಿ’ ಪರವಾಗಿ ಪ್ರಶ್ನಿಸಿದಾಗ ಎರಡೂ ತೋಡುಗಳ ಹೂಳೆತ್ತಲು ಅನುದಾನ ಕಾದಿರಿಸಲಾಗಿದೆ. ಚುನಾವಣೆಯ ನಂತರ ಕಾಮಗಾರಿ ಆರಂಭಿಸಲಾಗುವದು ಎನ್ನುತ್ತಾರೆ.
ಸಮೀಪದ ಪಾಲಿಬೆಟ್ಟ ಗ್ರಾ.ಪಂ. ಸ್ವಚ್ಛಗ್ರಾಮ ಪುರಸ್ಕಾರ, ವೈಜ್ಞಾನಿಕ ಕಸ ವಿಲೇವಾರಿ, ಕಂದಾಯ ವಸೂಲಾತಿಯಲ್ಲಿ ಶೇ.99 ರ ಸಾಧನೆ ಮಾಡಿರಬೇಕಾದರೆ ಗೋಣಿಕೊಪ್ಪಲು ಗ್ರಾ.ಪಂ.ಗೆ ಇದೇನೂ ಸಾಧ್ಯವಾಗುತ್ತಿಲ್ಲ. ಇಲ್ಲಿನ ಹೊಳೆದಂಡೆ, ತೋಡುಗಳು ನಿರಂತರ ಒತ್ತುವರಿಯಾಗುತ್ತಿದ್ದು, ತೆರವು ಕಾರ್ಯದೊಂದಿಗೆ ಕಸ ವಿಲೇವಾರಿಯನ್ನೂ ಕಟ್ಟುನಿಟ್ಟಾಗಿ ತೆರವು ಮಾಡಿದ್ದಲ್ಲಿ ಮಾತ್ರ ಇಲ್ಲಿನ ಅಂತರ್ಜಲಕ್ಕೆ ವಿಷಕಾರಿ ಪದಾರ್ಥಗಳು ಸೇರುವದನ್ನು ತಡೆಗಟ್ಟಬಹುದಾಗಿದೆ.
- ಟಿ.ಎಲ್. ಶ್ರೀನಿವಾಸ್