ಮಡಿಕೇರಿ, ಏ.11 :ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮೈಸೂರಿನ ದಿಶಾ ಫೌಂಡೇಷನ್ ಹಾಗೂ ಮಡಿಕೇರಿಯ ಮೌರ್ಯ ಎಜ್ಯುಕೇಷನ್ ಟ್ರಸ್ಟ್ ವತಿಯಿಂದ ತಾ. 12 ರಂದು ಪ್ರಜಾಪ್ರಭುತ್ವ ಸಬಲೀಕರಣ ಅಭಿಯಾನ ನಗರದಲ್ಲಿ ನಡೆಯಲಿದೆ ಎಂದು ಸಂಸ್ಥೆಗಳ ಪ್ರಮುಖರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಶಾ ಫೌಂಡೇಷನ್ನಿನ ಸ್ವಯಂ ಸೇವಕ ಎಂ.ಎನ್. ಹೇಮಂತ್ ಹಾಗೂ ಮೌರ್ಯ ಟ್ರಸ್ಟ್‍ನ ಅಧ್ಯಕ್ಷ ಜಿ.ಎಸ್. ವಿನಯ ಕುಮಾರ್, ಮತದಾನದ ಮಹತ್ವದ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವದಕ್ಕಾಗಿ ನಗರದಲ್ಲಿ ಜಾಗೃತಿ ಜಾಥಾ ನಡೆಸಿ, ನಂತರ ಪುಟಾಣಿ ನಗರದಲ್ಲಿ ಮನೆ ಮನೆ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ನಗರದ ಕಾವೇರಿ ಕಲಾಕ್ಷೇತ್ರದ ಬಳಿಯಿಂದ ಬೆಳಿಗ್ಗೆ 9 ಗಂಟೆಗೆ ಜಾಥಾವನ್ನು ಆರಂಭಿಸಿ ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಪುಟಾಣಿ ನಗರದಲ್ಲಿ ಅಂತಿಮ ಗೊಳಿಸ ಲಾಗುವದು.

ಈಗಾಗಲೇ ವೀರಾಜಪೇಟೆ ತಾಲೂಕಿನ 56 ಹಾಡಿಗಳಿಗೆ ಭೇಟಿ ನೀಡಿ ಮತದಾನದ ಮಹತ್ವದ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ತಾ. 14ರವರೆಗೆ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸುವ ಮಿಂಚಿನ ನೋಂದಣಿ ನಡೆಯುತ್ತಿದ್ದು, ಅತೀ ಹೆಚ್ಚು ಮತದಾನವಾಗಬೇಕು ಎನ್ನುವದು ಸಂಸ್ಥೆಯ ಉದ್ದೇಶವಾಗಿದೆ.

ಜಿ.ಪಂ. ಸಹಯೋಗದೊಂದಿಗೆ ಜಾಗೃತಿ ಜಾಥಾ ನಡೆಯುತ್ತಿದೆ ಎಂದರು. ಭಾರತೀಯ ಪ್ರಜೆಗಳಾಗಿ ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳು, ಮತದಾನವೇ ಪ್ರಜಾಪ್ರಭುತ್ವದ ತಳಹದಿ, ಮತ ಚಲಾಯಿಸುವದು ಪ್ರತಿಯೊಬ್ಬ ನಾಗರಿಕರ ಹಕ್ಕು, ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸುವದು, ಉತ್ತಮಗುಣ, ಸೇವಾ ಮನೋಭಾವನೆ ಇರುವ, ಸರ್ವರ ಕ್ಷೇಮಾಭ್ಯುದಯ ಬಯಸುವ ಪ್ರಾಮಾಣಿಕ ಅಭ್ಯರ್ಥಿಯನ್ನು ಆಯ್ಕೆ ಮಾಡುವದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುಕ್ತ, ಶಾಂತಿಯುತ ಹಾಗೂ ನ್ಯಾಯ ಸಮ್ಮತವಾದ ಚುನಾವಣೆಯನ್ನು ನಡೆಯುವಂತೆ ನೋಡಿಕೊಳ್ಳುವದು, ಭಾರತೀಯ ಸಂವಿಧಾನವನ್ನು ಅರ್ಥೈಸಿಕೊಳ್ಳು ವದು ಹಾಗೂ ಅದರ ಆದರ್ಶಗಳನ್ನು ಗೌರವಿಸಿ ಪಾಲಿಸುವದು, ಪ್ರಾಮಾಣಿಕ ವಾಗಿ ಮತದಾನ ಮಾಡುವ ಮೂಲಕ ಜವಾಬ್ದಾರಿಯುತ ಉತ್ತರದಾಯಿ ಸರ್ಕಾರದ ರಚನೆಗೆ ಬುನಾದಿ ಹಾಕುವದು ಸೇರಿದಂತೆ ಇನ್ನಿತರ ಮತದಾನದ ಕುರಿತಾದ ಮಾಹಿತಿ ಯನ್ನು ಜನರಿಗೆ ನೀಡಲಾಗುವದು ಎಂದು ಪ್ರಮುಖರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಿಶಾ ಪೌಂಡೇಷನ್‍ನ ಕಾರ್ತಿಕ್, ಮುರಳಿ ಹಾಗೂ ಮೌರ್ಯ ಟ್ರಸ್ಟ್‍ನ ಕಾರ್ಯದರ್ಶಿ ಸುಂದರೇಶ್ ಉಪಸ್ಥಿತರಿದ್ದರು.