ಮಡಿಕೇರಿ, ಏ. 9: ಬರುವ ಮೇ 12 ರಂದು ಕರ್ನಾಟಕ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಪೊಲೀಸ್ ಇಲಾಖೆಯಿಂದ ವ್ಯಾಪಕ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ದಿಸೆಯಲ್ಲಿ ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ರಾಜಧಾನಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಉನ್ನತ ಮಟ್ಟದ ಸಭೆಗಳಲ್ಲಿ ಪಾಲ್ಗೊಂಡು ಸಮನ್ವಯತೆ ಸಾಧಿಸುವ ದಿಸೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ.ಇತ್ತ ಜಿಲ್ಲೆಯಲ್ಲಿ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕರ್ನಾಟಕ - ಕೇರಳ ಗಡಿ ತಪಾಸಣಾ ಗೇಟ್‍ಗಳು ಹಾಗೂ ನೆರೆಯ ಜಿಲ್ಲೆಗಳ ಗಡಿ ತಪಾಸಣಾ ಗೇಟ್‍ಗಳಲ್ಲಿ ವ್ಯಾಪಕ ನಿಗಾವಿರಿಸಲಾಗಿದೆ. ಹೊರಗಿನಿಂದ ಕೊಡಗಿನೊಳಗೆ ಬಂದು ಹೋಗುವ ವಾಹನಗಳ ಅಪರಿಚಿತರ ಕುರಿತು ಹದ್ದುಗಣ್ಣು ಇಡಲಾಗಿದೆ.ಆ ಬೆನ್ನಲ್ಲೇ ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಮಹಿಳೆಯರು, ಯುವ ಮತದಾರರ ಸಹಿತ ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ, ಪಂಗಡದ ಜನತೆ ನಿರ್ಭಯದಿಂದ ಮತದಾನದಲ್ಲಿ ಪಾಲ್ಗೊಳ್ಳುವಂತೆ ಭರವಸೆ ಮೂಡಿಸಲು ಅಲ್ಲಲ್ಲಿ ಪಥ ಸಂಚಲನ ಏರ್ಪಡಿಸಲಾಗಿದೆ. ಈ ಮೂಲಕ ಸಮಾಜಘಾತುಕ ಶಕ್ತಿಗಳಿಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗುತ್ತಿದೆ. ಈಗಾಗಲೇ ಈ ಸಂಬಂಧ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯ ವೃತ್ತ ನಿರೀಕ್ಷಕರು, ಆಯ ಠಾಣಾಧಿಕಾರಿಗಳು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಪಥ ಸಂಚಲನ ನಡೆಸಲಾಗಿದೆ. ಇನ್ನು ವಿವಿಧ ಅಪರಾಧಗಳು, ಅಕ್ರಮ ಚಟುವಟಿಕೆ, ಕೋಮುಗಲಭೆಗಳಲ್ಲಿ ಭಾಗಿಯಾಗಿರುವ ಅಥವಾ ಅಪರಾಧ ಹಿನ್ನೆಲೆ ಇರುವವರನ್ನು ಮೇಲಧಿಕಾರಿಗಳ ಸಮಕ್ಷಮ ಪೊಲೀಸ್ ಠಾಣೆಗಳಿಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ.

ಚುನಾವಣೆ ವೇಳೆ ಯಾವದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರುವದು, ಅರಾಜಕತೆ ಸೃಷ್ಟಿಸದಿರುವದು, ಸಂಘರ್ಷಗಳನ್ನು ಹುಟ್ಟು ಹಾಕದಂತೆ ಗೂಂಡಾಗಳಿಗೆ ಎಚ್ಚರಿಸುವದರೊಂದಿಗೆ, ವೀಡಿಯೋ ಚಿತ್ರೀಕರಿಸಿಕೊಂಡು ಮುಚ್ಚಳಿಕೆಗಳನ್ನು ಬರೆಸಿಕೊಳ್ಳಲಾಗಿದೆ. ಈ ದಿಸೆಯಲ್ಲಿ ಮಡಿಕೇರಿ ಪೊಲೀಸ್ ಉಪವಿಭಾಗದಲ್ಲಿ ಡಿವೈಎಸ್‍ಪಿ ಕೆ.ಎಸ್. ಸುಂದರರಾಜ್ ಗಮನ ಹರಿಸುತ್ತಿದ್ದಾರೆ.

(ಮೊದಲ ಪುಟದಿಂದ) ವೀರಾಜಪೇಟೆ ಪೊಲೀಸ್ ಉಪವಿಭಾಗದಲ್ಲಿ ಡಿವೈಎಸ್‍ಪಿ ನಾಗಪ್ಪ ಹಾಗೂ ಸೋಮವಾರಪೇಟೆ ತಾಲೂಕು ಕುಶಾಲನಗರ ಪೊಲೀಸ್ ಉಪವಿಭಾಗದಲ್ಲಿ ಡಿವೈಎಸ್‍ಪಿ ಶ್ರೀನಿವಾಸ ಮೂರ್ತಿ ಅವರುಗಳು ಕಾರ್ಯನಿರ್ವಹಿಸುತ್ತಿದ್ದಾರೆ.

1000ಕ್ಕೂ ಅಧಿಕ : ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಚುನಾವಣೆ ವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ದಿಸೆಯಲ್ಲಿ ವಿವಿಧ ಅಪರಾಧಗಳಿಗೆ ಸಂಬಂಧಿಸಿದಂತೆ ಒಂದು ಸಾವಿರಕ್ಕೂ ಹೆಚ್ಚಿನ ಗೂಂಡಾಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಮಡಿಕೇರಿ ಪೊಲೀಸ್ ಉಪವಿಭಾಗದಲ್ಲಿ ಸುಮಾರು 298 ಮಂದಿ ಸಮಾಜಘಾತುಕ ಹಿನ್ನೆಲೆಯುಳ್ಳ ಗೂಂಡಾಗಳನ್ನು ಪಟ್ಟಿ ಮಾಡಲಾಗಿದ್ದು, ಸುಮಾರು 122 ಮಂದಿ ಕೋಮುವಾರು ಗೂಂಡಾ ಚಟುವಟಿಕೆಗಳ ಹಿನ್ನೆಲೆ ಇರುವವರ ಪಟ್ಟಿ ಸಿದ್ಧಗೊಳಿಸಿ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ.

ಇನ್ನು ವೀರಾಜಪೇಟೆ ಪೊಲೀಸ್ ಉಪವಿಭಾಗದಲ್ಲಿ ವಿವಿಧ ಹಿನ್ನೆಲೆಯ ಅಪರಾಧವೆಸಗಿರುವ 280 ಮಂದಿ ಸಾರ್ವತ್ರಿಕ ಗೂಂಡಾಗಳ ಪಟ್ಟಿ ತಯಾರಿಸಲಾಗಿದೆ. ಕೋಮು ದ್ವೇಷ ಹಿನ್ನೆಲೆಯಡಿ ಸುಮಾರು 90 ವ್ಯಕ್ತಿಗಳನ್ನು ಪಟ್ಟಿ ಮಾಡಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದ್ದು, ಇಂತಹ ಎಲ್ಲಾ ವ್ಯಕ್ತಿಗಳಿಗೆ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ.

ಅದರಂತೆ ಸೋಮವಾರಪೇಟೆ ತಾಲೂಕು ಅಥವಾ ಕುಶಾಲನಗರ ಪೊಲೀಸ್ ಉಪವಿಭಾಗದಲ್ಲಿ ಸುಮಾರು 331 ಮಂದಿ ಅಪರಾಧ ಹಿನ್ನೆಲೆಯವರನ್ನು ಗುರುತಿಸಿ, ಚುನಾವಣೆ ವೇಳೆ ಯಾವದೇ ಕಾನೂನು ಬಾಹಿರ ಕೃತ್ಯಗಳನ್ನು ಎಸಗದಂತೆ ಗಂಭೀರ ಎಚ್ಚರಿಕೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಪ್ರತಿಕ್ರಿಯಿಸಿದ್ದಾರೆ. ಜನತೆ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ಎದುರಿಸಲು ಪೊಲೀಸ್ ಇಲಾಖೆ ಸನ್ನದ್ಧವಿರುವದಾಗಿ ಅವರು ತಿಳಿಸಿದ್ದಾರೆ.

ಅಲ್ಲದೇ ಯಾವದೇ ಸಮಾಜ ಘಾತುಕ ಚಟುವಟಿಕೆಗಳ ಮಾಹಿತಿ ಲಭಿಸಿದರೆ, ಸಾರ್ವಜನಿಕರು ಪೊಲೀಸ್ ಇಲಾಖೆಗೆ ವಿಷಯ ಮುಟ್ಟಿಸುವಂತೆ ಸಲಹೆ ನೀಡಿರುವ ಅವರು, ಸಮಾಜದ ಎಲ್ಲಾ ವರ್ಗದ ಜನತೆಗೆ ಪೊಲೀಸ್ ರಕ್ಷಣೆಯ ಭರವಸೆ ನೀಡಲಾಗುವದು ಎಂದು ಆಶಯ ವ್ಯಕ್ತಪಡಿಸಿದ್ದಾರೆ.