ಸಿದ್ದಾಪುರ, ಏ. 9: ನೀರು ಕುಡಿಯಲೆಂದು ಕೆರೆಗೆ ಬಂದು ಕಾಲು ಜಾರಿ ಬಿದ್ದು, ಕೆಸರಿನಲ್ಲಿ ಸಿಲುಕಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಕೆರೆಯಿಂದ ಮೆಲಕ್ಕೆತ್ತಿ ಜೀವ ಉಳಿಸಿರುವ ಘಟನೆ ಸಮೀಪದ ಮೇಕೂರು - ಹೊಸ್ಕೇರಿ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.ಪಾಲಿಬೆಟ್ಟ ರಸ್ತೆಯಲ್ಲಿರುವ ಶಂಭುಲಿಂಗ ಎಸ್ಟೇಟ್‍ನ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡಿನಲ್ಲಿದ್ದ ಮರಿಯಾನೆಯೊಂದು ತೋಟದೊಳಗಿದ್ದ ಕೆರೆಯಲ್ಲಿ ನೀರು ಕುಡಿಯಲೆಂದು ತೆರಳಿದ್ದ ಸಂದರ್ಭ ಕಾಲು ಜಾರಿ ಬಿದ್ದಿದ್ದು, ಕೆಸರಿನಲ್ಲಿ ಸಿಲುಕಿದ ಕಾರಣ ಮೇಲೆ ಬರಲು ಸಾಧ್ಯವಾಗದೇ ಘೀಳಿಡುತ್ತಿತ್ತು ಎನ್ನಲಾಗಿದೆ. ಇದರ ವೇದನೆ ಕಂಡು ಸಮೀಪದಲ್ಲಿದ್ದ ತಾಯಿ ಆನೆ ಕೂಡ ಘೀಳಿಡುತ್ತಾ ಕೆರೆಯ ಸುತ್ತಲೂ ಓಡಾಡುತ್ತಿದ್ದುದನ್ನು ಕಂಡ ಕಾಡಾನೆಗಳ ಹಿಂಡು ಇಂದು ಬೆಳಿಗ್ಗೆ ಕೆರೆಯ ಸುತ್ತಲೂ ಘೀಳಿಡುತ್ತಿದ್ದವು ಎನ್ನಲಾಗಿದ್ದು, ಈ ಶಬ್ಧವನ್ನು ಕೇಳಿದ ತೋಟದ ಕಾರ್ಮಿಕರು ಕೆರೆಯ ಬಳಿ ತೆರಳಿ ನೋಡಿದ ಸಂದರ್ಭ ಅಂದಾಜು 8 ತಿಂಗಳ ಮರಿಯಾನೆ ಯೊಂದು ಕೆಸರಿನಲ್ಲಿ ಸಿಲುಕಿ ಒದ್ದಾಡುತ್ತಿದ್ದ ದೃಶ್ಯ ಕಂಡು ಬಂದಿದೆ.

ಕೆಸರಿನಲ್ಲಿ ಸಿಲುಕಿದ್ದ ಮರಿಯಾನೆ ಯನ್ನು ರಕ್ಷಿಸಲು ಅದರ ಸುತ್ತಲು 7 ಕಾಡಾನೆಗಳು ಸುತ್ತುವರಿದಿದ್ದ ಹಿನ್ನೆಲೆಯಲ್ಲಿ ತೋಟದ ಸಿಬ್ಬಂದಿ ಹಾಗೂ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಹಾಗೂ ಆರ್‍ಆರ್‍ಟಿ ತಂಡದವರು ಸ್ಥಳಕ್ಕೆ ಆಗಮಿಸಿ, ಕೆಸರಿನಲ್ಲಿ ಸಿಲುಕಿದ್ದ ಕಾಡಾನೆಯ ಮರಿಯನ್ನು ಸುತ್ತುವರಿದಿದ್ದ 7 ಕಾಡಾನೆಗಳನ್ನು ಪಟಾಕಿ ಸಿಡಿಸುವ ಮೂಲಕ ತೋಟಕ್ಕೆ ಅಟ್ಟಿದರು. ಅನತಿ ದೂರ ಕಾಡಾನೆಗಳು ತೆರಳಿದ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿ ಕೆರೆಗೆ ಇಳಿದು ಕಾರ್ಯಾಚರಣೆಗೆ ಮುಂದಾದರು.

ಅರಣ್ಯ ಸಿಬ್ಬಂದಿಗಳೊಂದಿಗೆ ಗ್ರಾಮಸ್ಥರು, ಕಾರ್ಮಿಕರು ಸೇರಿಕೊಂಡು ಎಳೆದರೂ ಮೇಲೆತ್ತಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹಗ್ಗದ ಸಹಾಯದಿಂದ

(ಮೊದಲ ಪುಟದಿಂದ) ಕಟ್ಟಿ ಮೇಲೆಕ್ಕೆ ಎತ್ತಲಾಯಿತು. ಕಾಡಾನೆ ಮರಿಯ ಕಾಲಿಗೆ ನೋವಾಗಿದ್ದುದು ಕಂಡು ಬಂದಿತು.

ತಾಯಿಯ ಹಾಲು ಕುಡಿದ ಮರಿಯಾನೆ

ಕೆಸರಿಗೆ ಸಿಲುಕಿ ತಾಯಿಯಿಂದ ದೂರವಾಗಿದ್ದ ಕಾಡಾನೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಯಾವದೇ ಸಾಕಾನೆ ಗಳನ್ನು ಬಳಸದೇ ತಾವೇ ಕಾರ್ಯಾಚರಣೆ ನಡೆಸಿ ಕೆಸರಿ ನಿಂದ ಮೇಲೆಕ್ಕೆ ಎತ್ತಿ ಮರಿಯಾನೆ ಜೀವ ಉಳಿಸಿದರು. ಕೆರೆಯಿಂದ ಮೇಲೆ ಬಂದ ಮರಿಯಾನೆ ಬದುಕಿದೆ ಬಡಜೀವ ಎಂದು ಸಮೀಪದಲ್ಲೇ ತನಗಾಗಿ ಕಾಯುತ್ತಿದ್ದ ತಾಯಿ ಆನೆಯ ಬಳಿ ತೆರಳಿ ಹಾಲು ಕುಡಿದು ಹಸಿವು ನೀಗಿಸಿಕೊಂಡಿತು.

6 ಗಂಟೆಗಳ ಶ್ರಮ

ಮರಿಯಾನೆಯನ್ನು ಕೆಸರಿನಿಂದ ಎಳೆದು ತರಲು ಅರಣ್ಯ ಇಲಾಖೆ ಸಿಬ್ಬಂದಿ ಸತತ 6 ಗಂಟೆಗಳ ಕಾರ್ಯಾಚರಣೆ ನಡೆಸಿ ಯಶಸ್ವಿಯಾದರು. ಇವರಿಗೆ ಕಾರ್ಮಿಕರು ಸಾಥ್ ನೀಡಿದರು. ಈತನ್ಮಧ್ಯೆ ಕೆರೆಯಿಂದ ಮೇಲೆಕ್ಕೇತ್ತುವ ಸಂದರ್ಭ ಸಮೀಪದಲ್ಲೇ ಇದ್ದ ಕಾಡಾನೆಗಳು ಕೆಲವು ಕಾರ್ಮಿಕರನ್ನು ಅಟ್ಟಿಸಿದ ಘಟನೆಯು ನಡೆಯಿತು. ಮಾತ್ರವಲ್ಲದೆ ಅರಣ್ಯ ಸಿಬ್ಬಂದಿ ಗಳನ್ನು ಅಟ್ಟಿಸಿದ ಹಿನ್ನೆಲೆಯಲ್ಲಿ ಇಬ್ಬರು ಅರಣ್ಯ ಸಿಬ್ಬಂದಿ ಓಡಿ ಮರವೇನ್ನೇರಿ ಕುಳಿತು ಕೆಲಹೊತ್ತಿನ ಬಳಿಕ ಮರಿಯಾನೆಯ ರಕ್ಷಣೆ ಮಾಡಿದರು. ಮೇಕೂರು - ಹೊಸ್ಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದು, ಇದರಿಂದಾಗಿ ಕಾರ್ಮಿಕರಿಗೆ ಕೆಲಸ ಮಾಡಲು ಭಯವಾಗುತ್ತಿದೆ. ಆದ್ದರಿಂದ ಕಾಡಾನೆಗಳನ್ನು ಕಾಡಿಗಟ್ಟಬೇಕು ಎಂದು ಬಜೆಕೊಲ್ಲಿ ನಿವಾಸಿ, ಪೈಸಲ್ ಒತ್ತಾಯಿಸಿದರು. ಕಾರ್ಯಾಚರಣೆಯ ನೇತೃತ್ವವನ್ನು ಉಪವಲಯ ಅರಣ್ಯಾಧಿಕಾರಿ ಗಳಾದ ದೇವಯ್ಯ, ಶ್ರೀನಿವಾಸ್ ವಹಿಸಿದ್ದರು. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಭೇಟಿ ನೀಡಿದ್ದರು. ಅರಣ್ಯ ಇಲಾಖೆ ಯ ಸಿಬ್ಬಂದಿಗಳು, ಆರ್‍ಆರ್‍ಟಿ ತಂಡದವರು ಹಾಗೂ ಗ್ರಾಮಸ್ಥ ರಾದ ಮಣಿ, ಕುಮಾರ್, ಮಹೇಶ್ ಇನ್ನಿತರರು ಇದ್ದರು.

-ಚಿತ್ರ, ವರದಿ: ವಾಸು