ಆಲೂರು-ಸಿದ್ದಾಪುರ, ಏ. 9: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯ 2017-18ನೇ ಸಾಲಿನಲ್ಲಿ ಶೇ. 100 ರಷ್ಟು ಕಾರ್ಯ ಸಾಧನೆ ಮಾಡಿರುವ ದಾಗಿ ಹೆಬ್ಬಾಲೆ ವಲಯದ ಮೇಲ್ವಿಚಾರಕ ಕೆ. ವಿನೋದ್ ಕುಮಾರ್ ತಿಳಿಸಿದ್ದಾರೆ.

ಕಾರ್ಯ ಸಾಧನೆ ಕುರಿತು ಮಾಹಿತಿ ನೀಡಿ, ಸೋಮವಾರಪೇಟೆ ತಾಲೂಕಿನ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯಾಪ್ತಿಯಲ್ಲಿ ಒಟ್ಟು 7 ವಲಯಗಳಿದ್ದು ಅದರಲ್ಲಿ ಹೆಬ್ಬಾಲೆ ವಲಯವೂ ಒಂದಾಗಿದೆ ಎಂದರು. ಹೆಬ್ಬಾಲೆ ವಲಯದಲ್ಲಿ ಹೆಬ್ಬಾಲೆ, ಕಣಿವೆ, ಹಳೇಕೋಟೆ, ತೊರೆನೂರು, ಚಿಕ್ಕ ಅಳುವಾರ, ಶಿರಂಗಾಲ, ಅರಶಿಣಗುಪ್ಪೆ, ಗೋಣಿಮರೂರು, ಆಲೂರು-ಸಿದ್ದಾಪುರ, ಮಾಲಂಬಿ ಗ್ರಾಮಗಳು ಕಾರ್ಯಕ್ಷೇತ್ರಗಳಾಗಿ ಕಳೆದ 9 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು, ವಲಯದಲ್ಲಿ ಒಟ್ಟು 323 ಪ್ರಗತಿಬಂಧು ಸ್ವ-ಸಹಾಯ ಸಂಘಗಳಿದ್ದು ಒಟ್ಟು 2294 ಸದಸ್ಯರುಗಳಿದ್ದಾರೆ ಎಂದರು. ಪ್ರತಿಯೊಂದು ಕಾರ್ಯ ಕ್ಷೇತ್ರಗಳಲ್ಲಿ ಸೇವಾಪ್ರತಿನಿಧಿಗಳಿದ್ದು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವದರಿಂದ ಸಂಸ್ಥೆ ಆರ್ಥಿಕವಾಗಿ, ಸಾಮಾಜಿಕ ವಾಗಿಯೂ ಅಭಿವೃದ್ಧಿ ಹೊಂದುತ್ತಿದೆ ಎಂದರು. ಹೆಬ್ಬಾಲೆ ವಲಯದಿಂದ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರೂ. 9 ಕೋಟಿ ಸಾಲವನ್ನು ಹೈನುಗಾರಿಕೆ, ಮನೆರಚನೆ, ಸ್ವ-ಉದ್ಯೋಗ, ಕೃಷಿ ಚಟುವಟಿಕೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಸಾಲವನ್ನು ನೀಡಿದ್ದು, ಶೇ. 100 ರಷ್ಟು ಸಾಲ ಮರುಪಾವತಿಯಾಗುತ್ತಿದೆ ಎಂದರು.

ವಲಯದ ಮೂಲಕ ಸ್ವಚ್ಛತಾ ಆಂದೋಲನ ಕಾರ್ಯಕ್ರಮ, ಸಾಮೂಹಿಕ ಸತ್ಯನಾರಾಯಣಸ್ವಾಮಿ ಪೂಜೆ, ಆದ್ಯಾತ್ಮಿಕ ಕಾರ್ಯಕ್ರಮ ಗಳನ್ನು ನಡೆಸಿರುವ ಮೂಲಕ ಹೆಬ್ಬಾಲೆ ವಲಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿಯೂ ಕಾರ್ಯ ಪ್ರಗತಿಯಲ್ಲಿ ಶೇ. 100 ರಷ್ಟು ಸಾಧನೆಯನ್ನು ಮಾಡಿದೆ ಎಂದರು