ಮಡಿಕೇರಿ, ಏ. 9: ದಶಕದ ಹಿಂದೆ ತೀರಾ ಕುಗ್ರಾಮಗಳಿಂದ ಕೂಡಿದ್ದ ಕಾಲೂರು, ಮುಕ್ಕೋಡ್ಲು, ಹಚ್ಚಿನಾಡು ಸುತ್ತಮುತ್ತಲಿನ ಗ್ರಾಮವಾಸಿಗಳು ನಿತ್ಯ ನೂರಾರು ದನಗಳನ್ನು ಮೇಯಿಸುತ್ತಿದ್ದ ತಾಣವಿಂದು, ಕೊಡಗಿನ ಪ್ರಕೃತಿ ರಮಣೀಯ ಭೂ ಸ್ವರ್ಗದ ಸೀಮೆಯೊಂದಿಗೆ ಸಾವಿರಾರು ಪ್ರವಾಸಿಗಳ ಕಣ್ಮನ ಸೆಳೆಯುತ್ತಿರುವ ಮಾಂದಲಪಟ್ಟಿ.

ಶತಮಾನಗಳಿಂದ ಇದೇ ಬೆಟ್ಟ ತಪ್ಪಲಿನಲ್ಲಿ ನಿತ್ಯ ಬದುಕು ಕಟ್ಟಿಕೊಂಡವರು ಇಲ್ಲಿ ಏನನ್ನೂ ಊಹಿಸಿರಲಿಲ್ಲ. ಮಾತ್ರವಲ್ಲದೆ, ತಮ್ಮ ಹಳ್ಳಿಗಾಡಿನ ನಡುವೆ ಇರುವಂತಹ ಈ ಮಾಂದಲಪಟ್ಟಿ ಕೊಡಗಿನ ಗಡಿದಾಟಿ ಜಾಗತಿಕ ಮಟ್ಟದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯಲಿದೆ ಎಂದು ಕನಸಿನಲ್ಲೂ ಊಹಿಸಿರಲಿಲ್ಲ.

ಕಾಲೂರು ಗ್ರಾಮದ ಬೆಟ್ಟ ಶ್ರೇಣಿಯಲ್ಲಿರುವ ಮಾಂದಲಪಟ್ಟಿ ಬಗ್ಗೆ. ಹುಟ್ಟೂರಿನವರೇ ಆಗಿರುವ ಶಾಸಕ ಕೆ.ಜಿ. ಬೋಪಯ್ಯ ಅವರ ಮಾತಿನಲ್ಲಿ ಹೇಳುವದಾದರೆ, ‘ನಮ್ಮ ಹಿರಿಯರು ದನಗಳನ್ನು ಮೇಯಿಸುತ್ತಿದ್ದ ಬೆಟ್ಟ; ಹುತ್ತರಿ- ಕೈಲ್ ಮುಹೂರ್ತ ಪರ್ವಗಳಲ್ಲಿ ಗ್ರಾಮಸ್ಥರು ಒಗ್ಗೂಡಿ ದಶಕಗಳ ಹಿಂದೆ ಬೇಟೆಯಾಡುತ್ತಿದ್ದ ಕಾಡುಸೀಮೆ’.

ಸ್ವತಃ ಶಾಸಕ ಬೋಪಯ್ಯ ಅವರ ಪತ್ನಿ ಈ ಊರಿನ ಸೊಸೆ ಕುಂತಿ ಬೋಪಯ್ಯ ಅವರು, ಪ್ರಪ್ರಥಮವಾಗಿ ಈಚೆಗೆ ಕೆಲವು ತಿಂಗಳ ಹಿಂದೆ ಮಾಂದಲಪಟ್ಟಿ- ಮಡಿಕೇರಿ ನಡುವೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿದ ಸಂದರ್ಭ ಈ ಮಾಂದಲಪಟ್ಟಿಯನ್ನು ಮೊದಲ ಬಾರಿ ಪ್ರತ್ಯಕ್ಷ ಕಂಡಿದ್ದಾರೆ.

ಒಂದು ದಶಕದ ಹಿಂದೆ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರಾಗಿದ್ದ ದಂಬೆಕೋಡಿ ಎ. ಚಿಣ್ಣಪ್ಪ ಅವರು, ಈ ಭಾಗದ ಗ್ರಾಮಸ್ಥರು ಆಯೋಜಿಸಿದ್ದ ಕ್ರೀಡಾಕೂಟ ಉದ್ಘಾಟನೆಗೆ ಬಂದಿದ್ದರು. ಅಂದು ಗ್ರಾಮೀಣ ಕ್ರೀಡಾಕೂಟದ ನಡುವೆ ಸುತ್ತಮುತ್ತಲಿನ ಗ್ರಾಮಸ್ಥರು ಇಲ್ಲಿಯೇ ಕಾಡಿನ ಮಧ್ಯೆ ಅಡುಗೆ ತಯಾರಿಸಿದ್ದರು. ಸ್ವತಃ ಸಚಿವರೊಂದಿಗೆ ಎಲ್ಲರು ಸೇರಿ ಅಂದು ಕಾಡುಪ್ರಾಣಿಯ ಭಕ್ಷ್ಯ ಸವಿದಿದ್ದದ್ದು ನೆನಪು.

ಆ ನಂತರದಲ್ಲಿ ಅರಣ್ಯ ಇಲಾಖೆ ಈ ಮಾಂದಲಪಟ್ಟಿ ಕಂಡಿದ್ದೇ ಗ್ರಾಮಸ್ಥರ ಮನೋಲ್ಲಾಸಕ್ಕೆ ಮುಳುವಾಯಿತು. ಅರಣ್ಯ ಪ್ರದೇಶವೆಂಬ ಕುಂಟು ನೆಪದಲ್ಲಿ ಗ್ರಾಮಸ್ಥರ ಜಾನುವಾರುಗಳ ಮೇವಿಗೆ, ಕಾಡು ಬೇಟೆ ಇತ್ಯಾದಿಗೆ ಭಂಗ ಎದುರಾಯಿತು.

ಇತ್ತ ಅರಣ್ಯ ಇಲಾಖೆಯ ಕಣ್ಗಾವಲು ಗ್ರಾಮಸ್ಥರ ಮೇಲಾದರೆ, ಭಾರತ ಸರಕಾರದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕನಸಿನ ಗ್ರಾಮ ಸಡಕ್ ರಸ್ತೆಯು, ಈ ಮಾಂದಲಪಟ್ಟಿ ಮೂಲಕವೇ ಹಚ್ಚಿನಾಡು, ಮುಕ್ಕೋಡ್ಲುವಿನತ್ತ ನಿರ್ಮಾಣವಾಯಿತು.

ಈ ನಡುವೆ ಆಗೊಮ್ಮೆ ಈಗೊಮ್ಮೆ ಮಾಂದಲಪಟ್ಟಿಯತ್ತ ಕೊಡಗಿನ ಬೇರೆ ಬೇರೆ ಕಡೆಗಳಿಂದ ಜನ ಪ್ರಕೃತಿಯ ಸೊಬಗು ಸವಿಯಲು ಬರತೊಡಗಿದ್ದರು. ದಿನಗಳು ಉರುಳಿದಂತೆ ಮಾಂದಲಪಟ್ಟಿ ಕೊಡಗಿನ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಜಾಗ ಪಡೆಯಿತು. ತಡಿಯಂಡಮೋಳ್ ಶಿಖರದ ಚಾರಣ ಮಂದಿ, ಮಾಂದಲಪಟ್ಟಿಯತ್ತ ಹೆಜ್ಜೆ ಬೆಳೆಸಿದರು. ಪರಿಣಾಮವಾಗಿ ಐತಿಹಾಸಿಕ ಹಿನ್ನೆಲೆಯುಳ್ಳ ಕೊಡಗಿನ ಕೋಟೆಬೆಟ್ಟ ಸಾಲಿನಲ್ಲಿರುವ ಈ ಮಾಂದಲಪಟ್ಟಿಗೆ ಇಂದು ಕೊಡಗಿನ ಪ್ರಪ್ರಥಮ ಸೌಂದರ್ಯ ಸಿರಿಯ ಖ್ಯಾತಿ ಬರುವಂತಾಯಿತು.

ಸಾವಿರಾರು ಪ್ರವಾಸಿಗಳು : ಮೂಲಗಳ ಪ್ರಕಾರ ಇಂದು ಈ ಮಾಂದಲಪಟ್ಟಿಯ ಸಿರಿ ಸೌಂದರ್ಯಕ್ಕೆ ಮನಸೋತು ಸಾವಿರಾರು ಮಂದಿ ಪ್ರವಾಸಿಗರು ಲಗ್ಗೆ ಇಡುತ್ತಿದ್ದಾರೆ. ಸರಕಾರಿ ರಜೆ ದಿನಗಳಲ್ಲಿ ಶನಿವಾರ, ಭಾನುವಾರಗಳಂದು ಹಾಗೂ ದಸರಾ/ ಬೇಸಿಗೆ ರಜೆಯಲ್ಲಿ ದಿನವೊಂದಕ್ಕೆ ಸಾವಿರಾರು ಸಂಖ್ಯೆಯಲ್ಲಿ ಇತ್ತ ಬಂದು ಆನಂದ ಪಡೆಯುವವರಿದ್ದಾರೆ.

ದಿನಗಟ್ಟಲೆಯ ಸೆಳೆತ: ಮಾಂದಲಪಟ್ಟಿಯ ರುದ್ರರಮಣೀಯ ಪರಿಸರದಲ್ಲಿ ದಿನಗಟ್ಟಲೆ ಪ್ರಾಕೃತಿಕ ಸೌಂದರ್ಯ ಸವಿದರೂ, ಕಣ್ಮನ ತಣಿಯದಷ್ಟು ಸೊಬಗು ಮತ್ತೆ ಮತ್ತೆ ಕೈಬೀಸಿ ಕರೆಯುತ್ತದೆ. ಒಮ್ಮೆ ತಂಗಾಳಿಗೆ ಮೈಯೊಡ್ಡಿದ ತಂಪಿನೊಳು ಅಲೆ ಅಲೆಯಾಗಿ ಬೆಟ್ಟ ಶ್ರೇಣಿಯ ಹೊದ್ದು ಮಲಗಿದ ಮೋಡಗಳು. ಪ್ರವಾಸಿಗರ ಮನದೊಳಗಿನ ಎಲ್ಲ ನೋವನ್ನು ಅರೆಕ್ಷಣದಲ್ಲಿ ಮರೆಯಾಗಿಸುತ್ತದೆ.

ಅರೆಕ್ಷಣ ಆ ಮೋಡಗಳು ಚದುರುತ್ತಲೇ ಹಸಿರು ಸಿರಿ ಸೊಬಗಿನ ಗಿರಿ ಕಂದರಗಳು ಆಕರ್ಷಿಸುತ್ತಾ ಭಾನುಭುವಿ ಒಂದಾಗಿ, ಮೋಹಕ ಸೆಳೆತದಿಂದ ಮನೋಲ್ಲಾಸ ನೀಡಲಿವೆ.

ಪ್ರಸಕ್ತ ಬಿಸಿಲಿನ ನಡು ನಡುವೆ ಮಳೆ ಹನಿಗಳ ನಡುವೆ ಬೆಟ್ಟ ಶ್ರೇಣಿಯ ಕಡಿದಾದ ಮಾರ್ಗದಲ್ಲಿ ಹೆಜ್ಜೆ ಇರಿಸಿದಷ್ಟೂ ಮುಂದೆ ಮುಂದೆ ಸಾಗುವಂತೆ ಮನ ಸೆಳೆಯುವ ಸೌಂದರ್ಯ, ಮನಸ್ಸನ್ನೂ ಈ ಸ್ಥಳದಿಂದ ವಾಪಸಾಗದಂತೆ ತಡೆಹಿಡಿಯಲಿದೆ.

ಗ್ರಾ.ಪಂ.ಗೆ ಆದಾಯ: ಈ ಪ್ರಕೃತಿ ರಮಣೀಯ ಸೊಬಗಿನ ತಾಣವಿಂದು ಗಾಳಿಬೀಡು ಗ್ರಾಮ ಪಂಚಾಯಿತಿಗೆ ವಾರ್ಷಿಕ ರೂ. 11.2 ಲಕ್ಷ ಆದಾಯ ನೀಡುತ್ತಿದೆ. ಗ್ರಾಮೀಣ ಯುವಕರಿಗೆ ಪ್ರವಾಸಿಗರನ್ನು ಕರೆದೊಯ್ಯುವ ಜೀಪುಗಳಿಂದ ಬಾಡಿಗೆ ಮೂಲಕ ಸ್ವಾಭಿಮಾನದ ಬದುಕು ಕೊಟ್ಟಿದೆ. ಅಲ್ಲಲ್ಲಿ ಸಣ್ಣ, ಪುಟ್ಟ ವ್ಯಾಪಾರ ಕಟ್ಟಿಕೊಂಡಿರುವ ಹಳ್ಳಿಮಂದಿ ಪ್ರವಾಸಿಗರಿಗೆ ಬಿಸಿಬಿಸಿ ಕಾಫಿ, ಲಘು ಉಪಹಾರ ಇತ್ಯಾದಿ ಕಲ್ಪಿಸಿ ಬದುಕು ಕಟ್ಟಿಕೊಂಡಿದ್ದಾರೆ.

ಮೋಜಿನಿಂದ ಮಾಲಿನ್ಯ: ಈ ಎಲ್ಲಾ ಸೊಬಗಿನ ನಡುವೆ ಪ್ರವಾಸಿಗರÀ ಹೆಸರಲ್ಲಿ ಕೆಲವರು ಪರಿಸರ ಜಾಗೃತಿ, ಸ್ವಚ್ಛತೆ ಮರೆತು ಮೋಜು- ಮಸ್ತಿಯಲ್ಲಿ ಮೈಮರೆತು ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಮದ್ಯಬಾಟಲಿಗಳು, ನಿರುಪಯುಕ್ತ ವಸ್ತುಗಳನ್ನು ಸೌಂದರ್ಯದ ಸೊಬಗಿನ ಒಡಲಿನೊಳು ತುಂಬುತ್ತಿರುವದು ನೈಜ ಪರಿಸರ ಪ್ರೇಮಿಗಳಲ್ಲಿ ನೋವುಂಟು ಮಾಡುತ್ತಿರುವದು ನೈಜ. ಪರಿಸರ ಪ್ರೇಮಿಗಳ, ನೋವುಂಟುಮಾಡುತ್ತಿದೆ. ಈ ದಿಸೆಯಲ್ಲಿ ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಗಾಳಿಬೀಡು ಗ್ರಾ.ಪಂ. ಜಂಟಿಯಾಗಿ ಕಾಳಜಿ ವಹಿಸಬೇಕಿದೆ.