ಸೋಮವಾರಪೇಟೆ, ಏ. 9: ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಬೆಟ್ಟದಳ್ಳಿ ಗ್ರಾ.ಪಂ. ವ್ಯಾಪ್ತಿಯ ಮಲ್ಲಳ್ಳಿ ಜಲಪಾತದಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟಿರುವ ಘಟನೆ ಇಂದು ಅಪರಾಹ್ನ 3 ಗಂಟೆಗೆ ಸಂಭವಿಸಿದೆ.ಸೋಮವಾರಪೇಟೆ ಸಮೀಪದ ಕೂಗೇಕೋಡಿ-ಸಬ್ಬನಕೊಪ್ಪ ಗ್ರಾಮದ ಮಂಜುನಾಥ್ ಎಂಬವರ ಪುತ್ರ ಅಭಿಷೇಕ್ (22) ಎಂಬಾತನೇ ಜಲಪಾತಕ್ಕೆ ಬಲಿಯಾದ ದುರ್ದೈವಿಯಾಗಿದ್ದು, ಇಂದು ಅಪರಾಹ್ನ ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಜಲಪಾತಕ್ಕೆ ತೆರಳಿದ ಸಂದರ್ಭ ದುರ್ಘಟನೆ ನಡೆದಿದೆ.ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಅಭಿಷೇಕ್ ಕಳೆದ ಶನಿವಾರದಂದು ಊರಿಗೆ ಆಗಮಿಸಿದ್ದು, ನಿನ್ನೆ ನಡೆದ ಗ್ರಾಮದ ಪೂಜೆಯಲ್ಲಿ ಪಾಲ್ಗೊಂಡು ಇಂದು ಬೆಳಗ್ಗೆ ಸ್ನೇಹಿತರೊಂದಿಗೆ ಮಲ್ಲಳ್ಳಿ ಜಲಪಾತಕ್ಕೆ ತೆರಳಿದ್ದ ಎನ್ನಲಾಗಿದೆ.ಮಧ್ಯಾಹ್ನ 3 ಗಂಟೆ ಸುಮಾರಿಗೆ ಸ್ನೇಹಿತರೆಲ್ಲರೂ ಜಲಪಾತದ ಕಲ್ಲುಬಂಡೆಗಳ ಮೇಲೆ ಕುಳಿತಿದ್ದ ಸಂದರ್ಭ ಅಭಿಷೇಕ್ ತನ್ನ ಬಟ್ಟೆ ಬಿಚ್ಚಿ ಸ್ನಾನಕ್ಕೆಂದು ನೀರಿಗೆ ಇಳಿದಿದ್ದಾನೆ ಎನ್ನಲಾಗಿದೆ. ಸುಮಾರು 100 ಅಡಿಗೂ ಎತ್ತರದಿಂದ ನೀರು ಧುಮ್ಮಿಕ್ಕುವ ಪ್ರದೇಶದಲ್ಲಿ ಇಳಿದಿದ್ದರಿಂದ ನೀರಿನ ಸೆಳೆತಕ್ಕೆ ಸಿಲುಕಿದ್ದು, ಸ್ನೇಹಿತರು ನೋq Àನೋಡುತ್ತಿದ್ದಂತೆ ಮುಳುಗಿದ್ದಾನೆ.ಇದರಿಂದ ದಿಗ್ಭ್ರಾಂತರಾದ ಸ್ನೇಹಿತರು ತಕ್ಷಣ ಜಲಪಾತದ ಗೇಟ್ ಬಳಿ ಬಂದು ಪಾಲಕನ ಬಳಿ ವಿಷಯ ತಿಳಿಸಿದ್ದು, ನಂತರ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ಮಂಜಪ್ಪ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ, ಸಿಬ್ಬಂದಿ (ಮೊದಲ ಪುಟದಿಂದ) ಶಿವಕುಮಾರ್, ಕುಮಾರ್ ಸೇರಿದಂತೆ ಇತರರು ಜಲಪಾತಕ್ಕೆ ತೆರಳಿ ಪರಿಶೀಲಿಸಿದ್ದು, ಮೃತದೇಹ ನೀರಿನೊಳಗೆ ಸಿಲುಕಿದ್ದರಿಂದ ಸ್ಥಳಿಯರನ್ನು ಕೋರಿಕೊಂಡ ಮೇರೆಗೆ ಕುಮಾರಳ್ಳಿ ಗ್ರಾಮದ ಪ್ರಸನ್ನ ಅವರು ನೀರಿಗಿಳಿದು ಹುಡುಕಾಟ ನಡೆಸಿದ್ದಾರೆ.

ಸುಮಾರು 20 ಅಡಿಗೂ ಅಧಿಕ ಆಳದಲ್ಲಿ ಮೃತದೇಹ ಸಿಲುಕಿರುವ ಸಾಧ್ಯತೆಯಿದ್ದು, ಸಂಜೆಗತ್ತಲಾದ್ದರಿಂದ ಮೃತದೇಹವನ್ನು ಹೊರತೆಗೆಯಲು ಅಸಾಧ್ಯವಾಗಿದೆ. ತಾ. 10 ರಂದು (ಇಂದು) ಮೃತದೇಹವನ್ನು ಹೊರತೆಗೆಯಲಾಗುವದು ಎಂದು ಪೊಲೀಸ್ ಠಾಣಾಧಿಕಾರಿ ಎಂ. ಶಿವಣ್ಣ ತಿಳಿಸಿದ್ದಾರೆ.

ನಿರ್ಲಕ್ಷ್ಯ ಆರೋಪ: ಮಲ್ಲಳ್ಳಿ ಜಲಪಾತದಲ್ಲಿ ಆಗಿಂದ್ದಾಗ್ಗೆ ದುರ್ಘಟನೆಗಳು ನಡೆಯುತ್ತಿದ್ದರೂ ಸಂಬಂಧಿಸಿದ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಯಾವದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ ಎಂದು ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಆರೋಪಿಸಿದ್ದಾರೆ.

ಜಲಪಾತಕ್ಕೆ ಆಗಮಿಸುವ ವಾಹನಗಳು ಮತ್ತು ಪ್ರವಾಸಿಗರಿಂದ ಶುಲ್ಕ ವಸೂಲಾತಿ ಮಾಡುವ ಗ್ರಾಮ ಪಂಚಾಯಿತಿ ಜಲಪಾತದ ಬಳಿ ಯಾವದೇ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ. ವಾಹನ ನಿಲುಗಡೆ ಶುಲ್ಕ ವಸೂಲಿ ಪರವಾನಗಿಯನ್ನು ಈ ಬಾರಿ 7ಲಕ್ಷಕ್ಕೆ ಗುತ್ತಿಗೆ ನೀಡಿದ್ದರೂ ಸಹ ಕನಿಷ್ಟ ಸೌಲಭ್ಯಗಳನ್ನು ಒದಗಿಸಿಲ್ಲ. ಇದರಿಂದಾಗಿ ಹೊರಭಾಗದಿಂದ ಆಗಮಿಸುವ ಪ್ರವಾಸಿಗರು ತಮ್ಮ ಅಮೂಲ್ಯ ಜೀವವನ್ನು ಕಳೆದು ಕೊಳ್ಳುತ್ತಿದ್ದಾರೆ. ಇಂತಹ ಅವಘಡ ಗಳಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳೇ ನೇರ ಹೊಣೆ. ಇವರುಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಕೆ.ಎಂ. ಲೋಕೇಶ್ ‘ಶಕ್ತಿ’ ಮೂಲಕ ಒತ್ತಾಯಿಸಿದ್ದಾರೆ.