ಗೋಣಿಕೊಪ್ಪಲು, ಏ. 9: ಬಾಳೆಲೆ ಸಮೀಪದ ಕೊಟ್ಟಗೇರಿಯ ಮಾಪಂಗಡ ಸಜನ್ ದೇವಯ್ಯನವರ ತೋಟದ ಸಮೀಪದ ಕಾಡಿನಲ್ಲಿ ಹುಲಿ ಇರುವ ಮಾಹಿತಿ ಲಭ್ಯವಾಗಿದ್ದು, ಸೆರೆ ಹಿಡಿಯುವ ಪ್ರಯತ್ನದಲ್ಲಿ ಅರಣ್ಯ ಸಿಬ್ಬಂದಿಗಳು ಕಾರ್ಯೋನ್ಮುಖ ವಾಗಿದ್ದಾರೆ. ಹುಲಿಯನ್ನು ಕೆಲವೇ ದಿನಗಳಲ್ಲಿ ಸೆರೆ ಹಿಡಿಯುವ ಮೂಲಕ ಸಾರ್ವಜನಿಕರಲ್ಲಿರುವ ಆತಂಕವನ್ನು ದೂರ ಮಾಡುವದಾಗಿ ತಿತಿಮತಿ ವಲಯ ಅರಣ್ಯಾಧಿಕಾರಿ ಶ್ರೀಪತಿ ಮಾಹಿತಿ ನೀಡಿದರು. ಕಳೆದ ನಾಲ್ಕು ದಿನಗಳಿಂದ ಈ ಸ್ಥಳದಲ್ಲಿ ಹುಲಿ ಸೆರೆಗೆ ಸಕಲ ಸಿದ್ದತೆಗಳೊಂದಿಗೆ ತಯಾರಿ ನಡೆಸಿದ್ದು ಸೋಮವಾರ ಮುಂಜಾನೆ ಕೆಲವೇ ಅಂತರದಲ್ಲಿ ಸೆರೆ ಆಗಬೇಕಾಗಿದ್ದ ಹುಲಿ ತಪ್ಪಿಸಿಕೊಂಡಿದೆ. ಈ ಭಾಗದಲ್ಲೇ ಇದರ ಓಡಾಟ ಕಂಡು ಬಂದಿರುವದರಿಂದ ಹುಲಿ ಸೆರೆ ಆಗುವ ಸಾದ್ಯತೆ ಹೆಚ್ಚಾಗಿದೆ. ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಇಲಾಖೆಯೊಂದಿಗೆ ಸಹಕರಿಸಬೇಕೆಂದು ‘ಶಕ್ತಿ’ ಮೂಲಕ ಮನವಿ ಮಾಡಿಕೊಂಡರು.
ದ.ಕೊಡಗಿನ ವಿವಿಧ ಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಹುಲಿ ಹಾವಳಿ ಮಿತಿಮೀರಿದ್ದು ನಿರಂತರವಾಗಿ ರೈತನ,ಬೆಳೆಗಾರನ ಜಾನುವಾರುಗಳನ್ನು ಹುಲಿ ತಿಂದು ಹಾಕುತ್ತಿದೆ. ಇದರಿಂದ ಹುಲಿ ಸೆರೆಗೆ ಅರಣ್ಯ ಇಲಾಖೆ ವಿವಿಧ ರೀತಿಯ ಕಾರ್ಯಾಚರಣೆಗೆ ಮುಂದಾಗಿದ್ದು ಕೊಟ್ಟಗೇರಿಯ ಮಾಪಂಗಡ ಮುದ್ದಯ್ಯನವರ ಮನೆ ಸಮೀಪವಿರುವ ದೇವರಕಾಡು ಅರಣ್ಯದಲ್ಲಿ ಅರಣ್ಯ ಸಿಬ್ಬಂದಿಗಳು ಮೊಕ್ಕಾಂ ಹೂಡಿದ್ದು ಹುಲಿ ಸೆರೆಗೆ ಕಾತರದಿಂದ ಕಾಯುತ್ತಿದ್ದಾರೆ.
ಸಜನ್ ದೇವಯ್ಯನವರ ತೋಟದಲ್ಲಿ ತಿತಿಮತಿ ವಲಯ ಅರಣ್ಯ ಅಧಿಕಾರಿ ಶ್ರೀಪತಿಯವರನ್ನು ಭೇಟಿ ಮಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಈ ಭಾಗದ ಸುತ್ತ ಮುತ್ತಲಿನ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ಹುಲಿ ಸೆರೆ ಆಗುವವರೆಗೆ ಕಾರ್ಯಾಚರಣೆ ನಡೆಸಬೇಕು. ಯಾವದೇ ಕಾರಣಕ್ಕೂ ಹುಲಿ ಸೆರೆ ಆಗದೆ ಕಾರ್ಯಾಚರಣೆ ನಿಲ್ಲಿಸದಂತೆ, ಮತ್ತಷ್ಟು ವೈಜ್ಞಾನಿಕ ರೀತಿಯಲ್ಲಿ ತಂತ್ರಗಾರಿಕೆ ನಡೆಸಿ ವ್ಯಾಘ್ರನ ಸೆರೆ ಹಿಡಿಯುವಂತೆ ಶ್ರೀಪತಿಯವರಿಗೆ ಮನವಿ ಮಾಡಿದರು. ಕಾರ್ಯಾಚರಣೆಗೆ ಈ ಭಾಗದಿಂದ ರೈತರು, ಬೆಳೆಗಾರರು ಇಲಾಖೆ ಯೊಂದಿಗೆ ಸಹಕರಿಸಲಿದ್ದಾರೆ ಎಂದರು.
ಕೊಟ್ಟಗೇರಿಯ ಹುಲಿ ಇರುವ ಸುತ್ತಮುತ್ತಲಿನ ಪ್ರದೇಶಕ್ಕೆ ಜನರು ಅನವಶ್ಯಕವಾಗಿ ಓಡಾಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದು ಹುಲಿ ಸೆರೆ ಆದ ಅರ್ಧ ಗಂಟೆಯಲ್ಲೇ ಸ್ಥಳಕ್ಕೆ ತೆರಳುವ ಎಲ್ಲಾ ಸೌಕರ್ಯಗಳನ್ನು ಇಲಾಖಾ ಸಿಬ್ಬಂದಿಗಳು ಮಾಡಿಕೊಂಡಿದ್ದು ಹುಲಿ ಇರುವ ಸ್ಥಳದಿಂದ ಅರ್ಧ ಕಿ.ಮೀ.ದೂರದಲ್ಲಿ ಅರಣ್ಯ ಸಿಬ್ಬಂದಿಗಳು ತಯಾರಾಗಿ ಉಳಿದುಕೊಂಡಿದ್ದಾರೆ. ಸ್ಥಳದಲ್ಲೇ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಗೆ ಅಡುಗೆ ಕಾರ್ಯ ನಡೆಯುತ್ತಿದ್ದು, ಸ್ಥಳೀಯರಾದ ರೈತ ಸಂಘದ ಪ್ರಮುಖ ಆಳಮೇಂಗಡ ಸುರೇಶ್ ಸುಬ್ಬಯ್ಯ ಸಿಬ್ಬಂದಿಗಳಿಗೆ ಬೇಕಾದ ಕುಡಿಯುವ ನೀರು,ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಸಹಕರಿಸುತ್ತಿದ್ದಾರೆ.
ಸಂಕೇತ್ ಪೂವಯ್ಯ ಭೇಟಿಯ ಸಂದರ್ಭ ಬಾಳೆಲೆ ಹೋಬಳಿಯ ಅಧ್ಯಕ್ಷ ಅಡ್ಡೇಂಗಡ ಐ.ಸುಬ್ಬಯ್ಯ, ಕಾರ್ಯಾಧ್ಯಕ್ಷ ಗಾಡಂಗಡ ಸುಜು ಮೊಣ್ಣಪ್ಪ, ಜಿಲ್ಲಾ ಕೃಷಿ ಘಟಕದ ಅಧ್ಯಕ್ಷ ಮಚ್ಚಮಾಡ ಮಾಚಯ್ಯ, ಮುಖಂಡರಾದ ಮಾಚಂಗಡ ಸುಬ್ಬಯ್ಯ, ಎಂ.ಜೆ. ಅಪ್ಪಣ್ಣ, ಅಳಮೇಂಗಡ ಸತೀಶ್ಕಾರ್ಯಪ್ಪ, ಮಾಪಂಗಡ ಮುದ್ದಯ್ಯ, ಅಕ್ಬರ್ ಪಾಷ, ಮಲ್ಚಿರ ದೇವಯ್ಯ, ಬಿ.ಎಸ್ ಶಶಿ, ಸಿ.ಎಸ್ ಮೊಣ್ಣಪ್ಪ, ರಘು, ಚಕ್ಕೇರ ಜೋಯಪ್ಪ, ಮಚ್ಚಮಾಡ ಸುರೇಶ್,ಸುಳ್ಳಿಮಾಡ ಸುರೇಶ್, ಮುಂತಾದವರು ಹಾಜರಿದ್ದರು.
-(ಹೆಚ್.ಕೆ. ಜಗದೀಶ್)