ಕುಶಾಲನಗರ, ಏ. 9: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದ ಚೆಕ್‍ಪೋಸ್ಟ್‍ನಲ್ಲಿ ವಾಹನ ತಪಾಸಣೆ ಸಂದರ್ಭ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಹನವನ್ನು ಮುಟ್ಟುಗೋಲು ಹಾಕಿ ವಾಹನದ ಮಾಲೀಕನನ್ನು ವಶಕ್ಕೆ ಪಡೆಯಲಾಗಿದೆ.

ಕುಶಾಲನಗರದ ಕೊಪ್ಪ ಸೇತುವೆ ಬಳಿ ಜಿಲ್ಲಾ ಅಧಿಕಾರಿಗಳ ವಿಶೇಷ ತಂಡ ಚುನಾವಣೆ ನಿಮಿತ್ತ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದು ಈ ಸಂದರ್ಭ ಮಹೀಂದ್ರ ಎಕ್ಸ್‍ಯುವಿ ವಾಹನ (ಕೆಎ.03.ಎಂಹೆಚ್.569) ತಪಾಸಣೆ ಸಂದರ್ಭ ಕುಶಾಲನಗರದ ದಂಡಿನಪೇಟೆಯ ವಿಜಯರಾಜ್ ಎಂಬಾತ ತಪಾಸಣೆಗೆ ಅಡ್ಡಿಪಡಿಸುವದರೊಂದಿಗೆ ಅವಾಚ್ಯ ಶಬ್ಧಗಳಿಂದ ಅಧಿಕಾರಿಗಳನ್ನು ನಿಂದಿಸಿರುವದಾಗಿ ದೂರು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 353 ಹಾಗೂ 504 ರ ಕಾಯ್ದೆ ಅನ್ವಯ ಮೊಕದ್ದಮೆ ದಾಖಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.