ಮಡಿಕೇರಿ ಏ.9 : ಸಾಮಾಜಿಕ ನ್ಯಾಯದ ಪರಿಕಲ್ಪನೆ ಇಲ್ಲದ ಕೇಂದ್ರ ಸರ್ಕಾರದಲ್ಲಿ ಶೇ.33ರಷ್ಟಿರುವ ಒಬಿಸಿ, ಶೇ.12 ರಷ್ಟಿರುವ ಮುಸಲ್ಮಾನರು, ಶೇ.3 ರಷ್ಟಿರುವ ಕ್ರೈಸ್ತರು, ಶೇ.3ರಷ್ಟಿರುವ ಪರಿಶಿಷ್ಟ ವರ್ಗ ಹಾಗೂ ಶೇ.17ರಷ್ಟಿರುವ ಲಿಂಗಾಯಿತರಿಗೆ ಕೇಂದ್ರ ಸರ್ಕಾರದಲ್ಲಿ ಯಾವದೇ ಪ್ರಾತಿನಿಧ್ಯವನ್ನು ನೀಡಿಲ್ಲವೆಂದು ಮಾಜಿ ಸಂಸದ ಹಾಗೂ ಕಾಂಗ್ರೆಸ್ ಮುಖಂಡ ವಿಜಯಶಂಕರ್ ಟೀಕಿಸಿದರು. ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದಿರಾಗಾಂಧಿಯವರ ಸರ್ಕಾರ ಖಾಸಗೀಕರಣದಿಂದ ರಾಷ್ಟ್ರೀಕರಣದ ಕಡೆಗೆ ದೇಶವನ್ನು ಕೊಂಡೊಯ್ದಿದ್ದರು. ಆದರೆ ನರೇಂದ್ರಮೋದಿ ಅವರು ಲಾಭದಾಯಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಭ್ರಷ್ಟಾಚಾರ, ಭಯೋತ್ಪಾದನೆ, ನಿರುದ್ಯೋಗ ಮುಕ್ತ ಭಾರತ ನಿರ್ಮಾಣ, ವಿದೇಶದಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ತರುವದು, ಗೋ ಹತ್ಯೆಯನ್ನು ನಿಷೇಧಿಸುವದು, ಲೋಕಪಾಲ ಮಸೂದೆಯನ್ನು ಜಾರಿಗೆ ತರುವದು, ಗಂಗಾ ಕಾವೇರಿ ನದಿ ಜೋಡಣೆ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ, ನಿರಾಶ್ರಿತ ಕಾಶ್ಮೀರ ಪಂಡಿತರಿಗೆ ಪುನರ್ವಸತಿ ಕಲ್ಪಿಸುವದು ಇವುಗಳು 2014 ರಲ್ಲಿ ಎನ್‍ಡಿಎ ನೀಡಿದ್ದ ಭರವಸೆಗಳಾಗಿವೆ. ಇವುಗಳಲ್ಲಿ ಯಾವ ಭರವಸೆ ಈಡೇರಿದೆÉಯೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರೆ ಬಹಿರಂಗ ಪಡಿಸಲಿ ಎಂದು ವಿಜಯ ಶಂಕರ್ ಸವಾಲು ಹಾಕಿದರು.

ರೈತರ ನೋವನ್ನು ಆಲಿಸದ ಎನ್‍ಡಿಎ ಸರ್ಕಾರ ರೈತರ ಬೆಳೆಗೆ ಸೇವಾ ತೆರಿಗೆ ವಿಧಿಸಿದ ಮೊದಲ ಸರ್ಕಾರವಾಗಿದೆ. ಆಮದು ಮತ್ತು ರಫ್ತು ನೀತಿಯ ತಪ್ಪು ನಡೆಯಿಂದಾಗಿ ದೇಶದ ರೈತ ನೆಲ ಕಚ್ಚಿದ್ದಾನೆ. ಕೊಡಗಿನಲ್ಲಿ ಕೂಡ ಕಾಫಿ, ಕಾಳು ಮೆಣಸು, ಏಲಕ್ಕಿ ವ್ಯವಹಾರದ ಮೇಲೆ ಪರಿಣಾಮ ಬೀರಿದ್ದು, ರೈತರು ಕೇಂದ್ರ ಸರ್ಕಾರವನ್ನು ಕ್ಷಮಿಸಲಾರರು ಎಂದರು.

ಕಾರ್ಮಿಕರ ಸಮಸ್ಯೆಗೂ ಸ್ಪಂದಿಸದ ಕೇಂದ್ರ ಸರ್ಕಾರದ ವಿರುದ್ಧ ಅವರದೇ ಪಕ್ಷದ ಸಂಘಟನೆಯಾದ ಬಿಎಂಎಸ್ ಪ್ರಧಾನಿ ವಿರುದ್ಧ ಪ್ರತಿಭಟನೆಗೆ ಮುಂದಾಗಿತ್ತು ಎಂದ ಅವರು ಸಾಮಾಜಿಕ ನ್ಯಾಯವನ್ನು ನೀಡಿದ, ನುಡಿದಂತೆ ನಡೆದ, ಹಗರಣ ಮುಕ್ತ ಕಾಂಗ್ರೆಸ್ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‍ನ ಕೊಡಗು ಚುನಾವಣಾ ವೀಕ್ಷಕ ವೆಂಕಪ್ಪ ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ, ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ರು ರವೀಂದ್ರ, ಹಾಗೂ ಪ್ರಮುಖರಾದ ಜಾನ್ಸನ್ ಪಿಂಟೋ ಉಪಸ್ಥಿತರಿದ್ದರು.