ಸೋಮವಾರಪೇಟೆ, ಏ. 9: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಮೂಲಕ ಸಮೀಪದ ಹಾನಗಲ್ಲು ಬಾಣೆ ಗ್ರಾಮದಲ್ಲಿ ಕಾಯ್ದಿರಿಸ ಲಾಗಿರುವ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾಗುತ್ತಿರುವ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಕಾಮಗಾರಿ ಭರದಿಂದ ಸಾಗುತ್ತಿದ್ದು, ರೂ. 80 ಲಕ್ಷ ವೆಚ್ಚದಲ್ಲಿ ಕಟ್ಟಡ ಮೇಲೇಳು ತ್ತಿದೆ.

ಮುಂದಿನ 6 ರಿಂದ 8 ತಿಂಗಳುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಮಂಗಳೂರಿನ ಶಂಕರ್ ಅಸೋಸಿಯೇಟ್ಸ್ ಕಂಪೆನಿಯವರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿದ್ದಾರೆ. ಬೃಹತ್ ಕಟ್ಟಡಕ್ಕೆ ಅಡಿಪಾಯ ಹಾಕುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ವಿದ್ಯುತ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರ ಕಚೇರಿ ಮತ್ತು ಜೂನಿಯರ್ ಇಂಜಿನಿಯರ್‍ಗಳ ಕಚೇರಿ ಇಲ್ಲಿ ಕಾರ್ಯಾರಂಭ ಮಾಡಲಿದೆ.

ಕಳೆದ 3 ತಿಂಗಳ ಹಿಂದೆ ಸಂಸದ ಪ್ರತಾಪ್ ಸಿಂಹ, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸೇರಿದಂತೆ ಇತರ ಜನಪ್ರತಿನಿಧಿಗಳು ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದು, ಕಳೆದ 1 ತಿಂಗಳಿನಿಂದ ಕಾಮಗಾರಿ ಪ್ರಗತಿಯಲ್ಲಿದೆ. ಈಗಾಗಲೇ ಬೋರ್‍ವೆಲ್ ಕೊರೆಸಲಾಗಿದ್ದು, ಕಟ್ಟಡ ಕಾಮಗಾರಿಗೆ ಈ ಬೋರ್‍ವೆಲ್‍ನಿಂದಲೇ ನೀರು ಬಳಕೆಯಾಗುತ್ತಿದೆ. ಸಾರ್ವಜನಿಕರು ವಿದ್ಯುತ್ ಸಂಬಂಧಿತ ಕೆಲಸ ಕಾರ್ಯಗಳಿಗೆ ಮುಂದಿನ ದಿನಗಳಲ್ಲಿ ಆಲೇಕಟ್ಟೆಯಿಂದ ಕೇವಲ 1.05 ಕಿ.ಮೀ. ದೂರದಲ್ಲಿರುವ ಹಾನಗಲ್ಲು ಬಾಣೆ ಗ್ರಾಮಕ್ಕೆ ತೆರಳಬೇಕಿದೆ.

3.50 ಕೋಟಿ ವೆಚ್ಚದಲ್ಲಿ 66/11 ಕೆ.ವಿ. ಘಟಕ: ಇನ್ನು ಇದೇ ಸ್ಥಳದಲ್ಲಿ 66/11 ಕೆ.ವಿ. ವಿದ್ಯುತ್ ಘಟಕ ನಿರ್ಮಾಣ ಕಾರ್ಯವೂ ನಡೆಯಬೇಕಿದ್ದು, ಇದಕ್ಕಾಗಿ ಈಗಾಗಲೇ ರೂ. 3.50 ಕೋಟಿ ಅನುದಾನ ಕಾಯ್ದಿರಿಸಲಾಗಿದೆ.

ಸೋಮವಾರಪೇಟೆಯಲ್ಲಿ ಓಬೀರಾಯನ ಕಾಲದಲ್ಲಿ ಅಳವಡಿಸಿರುವ 33 ಕೆ.ವಿ. ವಿದ್ಯುತ್ ಫೀಡರ್‍ಗಳಿಂದಲೇ ಇದುವರೆಗೂ ಗ್ರಾಹಕರಿಗೆ ವಿದ್ಯುತ್ ಸರಬರಾಜಾಗುತ್ತಿದ್ದು, ಹಾನಗಲ್ಲು ಬಾಣೆಯಲ್ಲಿ 66/11 ಕೆ.ವಿ. ಘಟಕ ನಿರ್ಮಾಣ ವಾದರೆ ಸೋಮವಾರಪೇಟೆ ಭಾಗದ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಿದಂತಾಗುತ್ತದೆ.

ಪ್ರಸ್ತುತ ಕುಶಾಲನಗರ ಕೇಂದ್ರದಿಂದ ಸೋಮವಾರಪೇಟೆಗೆ ವಿದ್ಯುತ್ ಸರಬರಾಜಾಗುತ್ತಿದ್ದು, ಇಲ್ಲಿನ 33 ಕೆ.ವಿ. ಘಟಕದ ಫೀಡರ್‍ಗಳಿಂದ ಬೇರೆ ಬೇರೆ ವಿಭಾಗಕ್ಕೆ ವಿದ್ಯುತ್ ಪೂರೈಕೆಯಾಗುತ್ತಿದೆ. ಕುಶಾಲನಗರದಿಂದ ಅರಣ್ಯದ ಮೂಲಕ ತಂತಿಗಳನ್ನು ಎಳೆಯಲಾಗಿದ್ದು, ಮಳೆಗಾಲ ದಲ್ಲಿ ಮರದ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ದಿನಗಟ್ಟಲೆ ವಿದ್ಯುತ್ ಸ್ಥಗಿತಗೊಂಡು ಸೋಮವಾರಪೇಟೆ ಕತ್ತಲ ಕೂಪಕ್ಕೆ ತಳ್ಳಲ್ಪಡುತ್ತದೆ.

ಇಂತಹ ಪರಿಸ್ಥಿತಿ ಬದಲಾಗಬೇಕಾದರೆ ಈಗಿರುವ ವಿದ್ಯುತ್ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕು ಎಂಬ ಒತ್ತಾಯ ಅನೇಕ ದಶಕಗಳಿಂದಲೇ ಕೇಳಿಬರುತ್ತಿತ್ತು. ಆದರೆ ಈಗಿರುವ ಜಾಗ ಅತೀ ಶೀತ ಪ್ರದೇಶವಾಗಿರುವದರಿಂದ 66/11 ಕೆ.ವಿ. ಘಟಕ ಸ್ಥಾಪನೆ ಅಸಾಧ್ಯವೆಂದು ಇಂಜಿನಿಯರ್‍ಗಳೇ ಹೇಳಿದ್ದರು. ಈ ಹಿನ್ನೆಲೆ ಹಾನಗಲ್ಲು ಬಾಣೆಯಲ್ಲಿ ಕಳೆದ 3 ದಶಕಗಳಿಂದ ಕಾಯ್ದಿರಿಸಿರುವ ಜಾಗದಲ್ಲಿ 66/11 ಕೆ.ವಿ ವಿದ್ಯುತ್ ಪ್ರಸರಣಾ ಘಟಕ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ನಿಗಮದಿಂದ 3.50 ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ.

ಒಂದು ವೇಳೆ ಇಲ್ಲಿ ಘಟಕ ನಿರ್ಮಾಣ ವಾದರೆ ಕುಶಾಲನಗರದಿಂದ ನೂತನ ವಿದ್ಯುತ್ ಲೈನ್ ಬರಲಿದ್ದು, ಪವರ್ ಸಫ್ಲೈ ಫೇಲ್ಯೂರ್ (ಇಂಟರಕ್ಷನ್) ಕಡಿಮೆಯಾಗಿ ವಿದ್ಯುತ್ ಕೊರತೆ ನೀಗುತ್ತದೆ. ಫೀಡರ್‍ಗಳ ಸಂಖ್ಯೆ ಹೆಚ್ಚಾಗಲಿದ್ದು, ವೋಲ್ಟೇಜ್ ಸಮಸ್ಯೆಯೂ ಇರುವದಿಲ್ಲ. ದಿನದ 24 ಗಂಟೆಯೂ ವಿದ್ಯುತ್ ಸರಬರಾಜಾಗುತ್ತದೆ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಶೋಕ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. ಇದರೊಂದಿಗೆ ಶಾಂತಳ್ಳಿ, ಬೆಟ್ಟದಳ್ಳಿ, ಕೂತಿ, ಕುಂದಳ್ಳಿ, ಹರಗ, ತಾಕೇರಿ, ಕಿರಗಂದೂರು, ತಲ್ತರೆಶೆಟ್ಟಳ್ಳಿ, ಬೇಳೂರು, ಬಜೆಗುಂಡಿ, ಕಾರೇಕೊಪ್ಪ, ಕೆಂಚಮ್ಮನಬಾಣೆ, ಗೌಡಳ್ಳಿ, ದೊಡ್ಡಮಳ್ತೆ, ಚೌಡ್ಲು, ಅಬ್ಬೂರುಕಟ್ಟೆ, ನೇರುಗಳಲೆ, ಗಣಗೂರು, ಗೋಣಿಮರೂರು, ಐಗೂರು, ಹೊಸತೋಟ, ತೋಳೂರುಶೆಟ್ಟಳ್ಳಿ ಸೇರಿದಂತೆ ಸೋಮವಾರಪೇಟೆ ಭಾಗದ ಎಲ್ಲಾ ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸಮಸ್ಯೆ ನೀಗಲಿದೆ ಎಂದು ಎಇಇ ಅಶೋಕ್ ಅಭಿಪ್ರಾಯಿಸಿದ್ದಾರೆ.

- ವಿಜಯ್ ಹಾನಗಲ್