ಹೆಬ್ಬಾಲೆ, ಏ. 4: ರಕ್ತದಾನ ಅತಿ ಶ್ರೇಷ್ಠವಾಗಿದ್ದು, ನಾವುಗಳು ಮಾಡುವ ರಕ್ತದಾನ ಇನ್ನೊಬ್ಬರಿಗೆ ಜೀವದಾನ ಆಗುವದರಿಂದ ನಿಯಮಿತವಾಗಿ ರಕ್ತದಾನ ಮಾಡುವದೇ ಸಮಾಜಕ್ಕೆ ನೀಡುವ ಅತ್ಯುತ್ತಮ ಸೇವೆ ಎಂದು ಸೋಮವಾರಪೇಟೆ ತಾಲೂಕು ವೈದ್ಯಾಧಿಕಾರಿ ಡಾ. ರವಿಕುಮಾರ್ ಹೇಳಿದರು.

ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಸ್ಪತ್ರೆ, ರಕ್ತನಿಧಿ ಕೇಂದ್ರ ಹಾಗೂ ಹೆಬ್ಬಾಲೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತಾಶ್ರಯ ದಲ್ಲಿ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆರೋಗ್ಯ ವಂತ ವ್ಯಕ್ತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದು ಹೇಳಿದರು.

ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಮಾತನಾಡಿ, ಅಪೌಷ್ಠಿಕತೆ, ರಕ್ತಹೀನತೆ ಹಾಗೂ ಅಪಘಾತದಿಂದ ಗಾಯಗೊಂಡ ರೋಗಿಗಳಿಗೆ ತುರ್ತು ರಕ್ತದ ಅವಶ್ಯಕತೆ ಸಂದರ್ಭ ಜಿಲ್ಲಾ ರಕ್ತನಿಧಿ ಕೇಂದ್ರದಿಂದ ರಕ್ತ ನೀಡಿ ಅವರ ಪ್ರಾಣಹಾನಿಯನ್ನು ತಪ್ಪಿಸಲು ಇಂತಹ ಶಿಬಿರಗಳು ಸಹಕಾರಿಯಾಗುತ್ತಿವೆ ಎಂದರು.

ಹೆಬ್ಬಾಲೆ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಭರತ್ ಕುಮಾರ್ ಮಾತನಾಡಿ, ರಕ್ತದಾನ ಮಾಡುವದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿ ಆಗುತ್ತದೆ. ಹೃದಯಾಘಾತ, ರಕ್ತದ ಒತ್ತಡ ಇತರ ಕೆಲವು ರೋಗಗಳನ್ನು ತಡೆಯಲು ಸಹಾಯವಾಗುತ್ತದೆ ಎಂದರು.

ಈ ಸಂದರ್ಭ ಸೋಮವಾರಪೇಟೆ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಚ್.ಕೆ.ಶಾಂತಿ, ಹೆಬ್ಬಾಲೆ ಆಸ್ಪತ್ರೆ ಮೇಲ್ವಿಚಾರಕಿ ಲೀಲಾವತಿ, ನಾಗೇಂದ್ರಾಚಾರ್, ಸಿಬ್ಬಂದಿಗಳಾದ ಚಂದ್ರಶೇಖರ್, ಭಾರತಿ, ಆರತಿ, ಕಲಾವತಿ, ರಾಧ, ಸಂಜಯ್, ಚಂದ್ರಯ್ಯ ಹಾಗೂ ಆಶಾ ಕಾರ್ಯಕರ್ತರು ಇದ್ದರು. 25 ಮಂದಿ ರಕ್ತದಾನ ಮಾಡಿದರು. ರಕ್ತದಾನಿಗಳಿಗೆ ಹೆಬ್ಬಾಲೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ರಾಕೇಶ್ ಹಣ್ಣುಹಂಪಲು ವಿತರಿಸಿದರು.