ವೀರಾಜಪೇಟೆ ಏ:4ಕೊಡಗು ಕೇರಳದ ಗಡಿ ಭಾಗವಾದ ಮಾಕುಟ್ಟ ಚೆಕ್ ಪೋಸ್ಟ್‍ನಲ್ಲಿ ಪೊಲೀಸ್ ಸಹಕಾರದೊಂದಿಗೆ ಸಹಾಯಕ ಚುನಾವಣಾಧಿಕಾರಿಗಳು ಪಿಕ್ ಅಪ್ ಜೀಪು, ಮಿನಿ ಲಾರಿಯನ್ನು ತಪಾಸಣೆ ಗೊಳಿಸಿದಾಗ ಒಟ್ಟು ರೂ. 2,82,500 ನಗದು ಹಣ ಪತ್ತೆಯಾಗಿದ್ದು ಪೊಲೀಸರು ಜೀಪು, ಮಿನಿ ಲಾರಿ, ಜಫ್ತಿ ಮಾಡಿ, ನಾಲ್ಕು ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.ನಿನ್ನೆ ದಿನ ರಾತ್ರಿ 8-30ರ ಸಮಯದಲ್ಲಿ ಕೇರಳದ ಕಡೆಯಿಂದ ಬಂದ (ಕೆ.ಎ.45 ಎ 0638) ಮಹೇಂದ್ರ ಪಿಕ್ ಅಪ್ ಜೀಪನ್ನು ತಪಾಸಣೆ ಗೊಳಪಡಿಸಿದಾಗ (ಮೊದಲ ಪುಟದಿಂದ)ವಾಹನದಲ್ಲಿ ರೂ. 1.20,000 ಪತ್ತೆಯಾಗಿದೆ. ಪೊಲೀಸರು ಜೀಪ್‍ನ ಚಾಲಕ ಮುಜಾಯಿದ್ ಪಾಷ, ಹಾಗೂ ಸಯ್ಯದ್ ಮುನ್ನಾ ಇಬ್ಬರನ್ನು ಬಂಧಿಸಿ ಜೀಪನ್ನು ವಶಪಡಿಸಿಕೊಂಡಿದ್ದಾರೆ.
ರಾತ್ರಿ 10-30ಕ್ಕೆ ಕರ್ನಾಟಕದ ಕಡೆಗೆ ತೆರಳಲು ಮಾಕುಟ್ಟ ಚೆಕ್ ಪೋಸ್ಟ್‍ಗೆ ಕೇರಳದ ಕಡೆಯಿಂದ ಬಂದ (ಕೆಎಲ್.58 ಎ 5590) ಮಿನಿ ಲಾರಿಯನ್ನು ತಪಾಸಣೆಗೊಳಪಡಿಸಿದಾಗ ಲಾರಿಯಲ್ಲಿ ರೂ. 1,62,500 ನಗದು ಹಣ ಪತ್ತೆಯಾಗಿದೆ. ಪೊಲೀಸರು ನಗದು ಸಹಿತ ಮಿನಿಲಾರಿಯ ಚಾಲಕ ಶಫಿ ಹಾಗೂ ಆಯೂಬ್ ಎಂಬಿಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ತಪಾಸಣೆಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾದ ಪ್ರೇಮ್ ಕುಮಾರ್, ಪ್ರಮೋದ್, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಪಾಲ್ಗೊಂಡಿದ್ದರು.
ಪೊಲೀಸರು ಆರೋಪಿಗಳನ್ನು ತನಿಖೆ ನಡೆಸಿದಾಗ ಕೇರಳದಲ್ಲಿ ದನಗಳನ್ನು ಮಾರಾಟ ಮಾಡಿದ ನಗದು ಹಣವನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದು ನಾಲ್ಕು ಮಂದಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಚುನಾವಣಾ ಆಯೋಗದ ಆದೇಶದಂತೆ ರಾಜ್ಯ ಗಡಿಭಾಗಗಳಲ್ಲಿ 24 ಗಂಟೆಗಳು ಗಡಿಭಾಗಕ್ಕಾಗಿ ಪ್ರತ್ಯೇಕ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ತಂಡಗಳಿಗೆ ಪೊಲೀಸರು ಸಹಕರಿಸುತ್ತಿದ್ದಾರೆ.