ಮಡಿಕೇರಿ, ಏ.4 : ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಪೈಸಾರಿ ನಿವಾಸಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವದೆಂದು ಪ್ರಜಾ ಪರಿವರ್ತನಾ ವೇದಿಕೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಹೆಚ್.ಎಸ್. ಮುತ್ತಪ್ಪ, ಕಳೆದ 70 ವರ್ಷಗಳಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಬಿಳಿಗೇರಿ ಪೈಸಾರಿಯ ನಿವಾಸಿಗಳಿಗೆ ಕನಿಷ್ಟ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಆಡಳಿತ ವ್ಯವಸ್ಥೆ ನೀಡಿಲ್ಲವೆಂದು ಆರೋಪಿಸಿದರು.

ಸರ್ವೇ ಸಂಖ್ಯೆ 224/1ರ ಪೈಸಾರಿ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸುಮಾರು 15 ಕುಟುಂಬಗಳು ಕಳೆದ ಅನೇಕ ವರ್ಷಗಳಿಂದ ಜೀವನ ಸಾಗಿಸುತ್ತಿವೆ. ಆದರೆ, ಈ ಕುಟುಂಬಗಳಿಗೆ ನಡೆದಾಡಲು ರಸ್ತೆ ಇಲ್ಲ, ಕುಡಿಯುವ ನೀರಿನ ಸೌಲಭ್ಯ ಮೊದಲೇ ಇಲ್ಲ. ಅಂಬೇಡ್ಕರ್ ಭವನ, ಸ್ಮಶಾನಕ್ಕೆ ಜಾಗ ನಿವೇಶನ ಮತ್ತು ವಸತಿಗಾಗಿ ಹಕ್ಕುಪತ್ರ ಸೇರಿದಂತೆ ವಿವಿಧ ಬೇಡಿಕೆಗಳ ಬಗ್ಗೆ ಕಳೆದ ಅನೇಕ ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರು ಯಾವುದೇ ಸ್ಪಂದನ ದೊರಕಿಲ್ಲ. ಚುನಾವಣೆಯ ಸಂದರ್ಭದಲ್ಲಿಯಾದರು ಅಧಿಕಾರಿಗಳು ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸಬಹುದೆನ್ನುವ ವಿಶ್ವಾಸದಿಂದ ಚುನಾವಣಾ ಆಯೋಗಕ್ಕೆ ದೂರು ನೀಡುತ್ತಿರುವದಾಗಿ ಸ್ಪಷ್ಟಪಡಿಸಿದರು.

ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೆ ಚುನಾವಣಾ ನೀತಿ ಸಂಹಿತೆಯ ನೆಪವೊಡ್ಡುತ್ತಿದ್ದಾರೆÉ. ಕನಿಷ್ಟ ಕುಡಿಯುವ ನೀರನ್ನು ಕೂಡ ಪಡೆಯಲಾಗದ ಅತಂತ್ರ ಸ್ಥಿತಿಯನ್ನು ದುರ್ಬಲರು ಎದುರಿಸುತ್ತಿದ್ದಾರೆ. ಗ್ರಾಮದ ಎಸ್ಟೇಟ್‍ವೊಂದರ ಕಾಲುದಾರಿಯಲ್ಲಿ ಪೈಸಾರಿಗೆ ತೆರಳಬೇಕಾಗಿದ್ದು, ಈ ಮಾರ್ಗದಲ್ಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡುತ್ತಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ತುರ್ತು ಪರಿಸ್ಥಿತಿಗಳಲ್ಲಿ ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದು, ಜಿಲ್ಲಾಡಳಿತ ತಕ್ಷಣ ಕುಡಿಯುವ ನೀರು ಮತ್ತು ರಸ್ತೆ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಒತ್ತಾಯಿಸಿದರು.

ಈ ಭಾಗದಲ್ಲಿ ಕೃಷಿ ಕಾರ್ಯ ಮಾಡಿಕೊಂಡು ಬರುತ್ತಿರುವ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು, ಅಂಬೇಡ್ಕರ್ ಭವನವನ್ನು ಶೀಘ್ರ ನಿರ್ಮಿಸಬೇಕು, ಸ್ಮಶಾನಕ್ಕೆ ಜಾಗ ಮೀಸಲಿಡಬೇಕು ಎಂದು ಮುತ್ತಪ್ಪ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಬಿ.ಎ. ಗಣೇಶ್, ಸೋಮವಾರಪೇಟೆ ತಾಲ್ಲೂಕು ಉಪಾಧ್ಯಕ್ಷ ವಿಠಲ್, ಗ್ರಾಮಸ್ಥರಾದ ರಾಣಿ ಹಾಗೂ ಲಲಿತ ಉಪಸ್ಥಿತರಿದ್ದರು.