ಮಡಿಕೇರಿ, ಏ. 4 : ಕೊಡವ ರೇಸ್ ಕೊಡಗಿನ ಆದಿಮ ಸಂಜಾತ ಬುಡಕಟ್ಟು ಕುಲವೇ ಹೊರತು ಕೊಡವರು ಒಂದು ಪ್ರತ್ಯೇಕ ಧರ್ಮವಲ್ಲ ಅಥವಾ ಜಾತಿಯೂ ಅಲ್ಲವೆಂದು ಕೊಡವ ನ್ಯಾಷನಲ್ ಕೌನ್ಸಿಲ್‍ನ ಎನ್.ಯು. ನಾಚಪ್ಪ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎನ್‍ಸಿ ಹೋರಾಟವನ್ನು ವಿಫಲಗೊಳಿಸುವ ಉದ್ದೇಶದಿಂದ ಜನರ ದಿಕ್ಕು ತಪ್ಪಿಸಲು ಕೆಲವರು ಕೊಡವರು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆಂದು ಅಪಪ್ರಚಾರ ಮಾಡುವ ಮೂಲಕ ತಪ್ಪು ಸಂದೇಶ ರವಾನಿಸುತ್ತಿರುವದಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಸಿಎನ್‍ಸಿಯ ಗುರಿ ಮತ್ತು ಹೋರಾಟದ ಬಗ್ಗೆ ಸರ್ಕಾರಕ್ಕೆ ಹಾಗೂ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದ ತಾ. 6 ರಂದು ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವ ದೆಂದರು. ತ್ಯಾಗ ಮತ್ತು ಪರಿಶ್ರಮದ ಮೂಲಕ ಸಿಎನ್‍ಸಿ ಸಂಘಟನೆ ಕಳೆದ 28 ವರ್ಷಗಳಿಂದ ಕೊಡವರ ಪರವಾದ ಹಕ್ಕೊತ್ತಾಯದೊಂದಿಗೆ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದೆ. ಆದರೆ, ಇತ್ತೀಚೆಗೆ ಲಿಂಗಾಯಿತ ಪ್ರತ್ಯೇಕ ಧರ್ಮ ರಚನೆಯ ಪ್ರಸ್ತಾಪವಾದ ನಂತರ ಕೊಡವರು ಪ್ರತ್ಯೇಕ ಧರ್ಮದ ಬೇಡಿಕೆ ಇಟ್ಟಿದ್ದಾರೆಂದು ಸಿಎನ್‍ಸಿಯನ್ನು ಗುರಿಯಾಗಿಸಿಕೊಂಡು ಪಟ್ಟಭದ್ರ ಹಿತಾಸಕ್ತಿಗಳು ಸೇರಿದಂತೆ ಇನ್ನೂ ಕೆಲವರು ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ಶ್ರೇಷ್ಠ ಹಕ್ಕೊತ್ತಾಯಗಳನ್ನು ಪ್ರತಿಪಾದಿಸಿಕೊಂಡು ಬಂದಿರುವ ಸಿಎನ್‍ಸಿ ಸಂಘಟನೆ ಇಟ್ಟ ಹೆಜ್ಜೆಯಿಂದ ವಿಮುಖವಾಗುವದಿಲ್ಲ ವೆಂದು ನಾಚಪ್ಪ ಸ್ಪಷ್ಟಪಡಿಸಿದರು.

ತಾ. 14 ರಂದು ಕೊಡವ ಎಡಮ್ಯಾರ್ ಪ್ರಯುಕ್ತ ಸಿಎನ್‍ಸಿ ವತಿಯಿಂದ ಗೋಣಿಕೊಪ್ಪದಲ್ಲಿ 22ನೇ ವರ್ಷದ ಸಾರ್ವತ್ರಿಕ ಬೃಹತ್ ಪಂಜಿನ ಮೆರವಣಿಗೆ ನಡೆಯಲಿದೆ. ಸಂಜೆ ಎಪಿಎಂಸಿ ಆವರಣದಿಂದ ಪರಿಮಳ ಮಂಗಳ ವಿಹಾರದವರೆಗೆ ಮೆರವಣಿಗೆ ನಡೆಯಲಿದೆ. ಅಂದು ಪೂರ್ವಾಹ್ನ 6.30ಕ್ಕೆ ಕುಶಾಲನಗರದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿರುವ ನಂದಿನೆರವಂಡ ಉತ್ತಪ್ಪ ಅವರ ಗದ್ದೆಯಲ್ಲಿ ಜೋಡೆತ್ತಿನ ಉಳುಮೆ ಕಾರ್ಯ ನಡೆಯಲಿದೆ. ಕೊಡವ ಪಂಚಾಂಗದ ಪ್ರಕಾರ ಎಡಮ್ಯಾರ್ ಸೌರಮಾನ ಯುಗಾದಿ ಯನ್ನು ಆಚರಿಸ ಲಾಗುವದೆಂದು ನಾಚಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಚಂಬಂಡ ಜನತ್ ಕುಮಾರ್ ಹಾಗೂ ಮಂದಪಂಡ ಮನೋಜ್ ಮಂದಣ್ಣ ಉಪಸ್ಥಿತರಿದ್ದರು.