ಮಡಿಕೇರಿ, ಏ. 4: ಕೊಡಗು ಜಿಲ್ಲೆಯ ನೂತನ ಅಬ್ಕಾರಿ ಜಿಲ್ಲಾಧಿಕಾರಿಯಾಗಿ ಎ.ಎಲ್. ನಾಗೇಶ್ ನಿಯುಕ್ತಿಗೊಳ್ಳುವದರೊಂದಿಗೆ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಪ್ರಸಕ್ತ ದಿನಗಳ ತನಕ ಚಾಮರಾಜನಗರ ಅಬ್ಕಾರಿ ಉಪ ಆಯುಕ್ತರಾಗಿ ಕರ್ತವ್ಯದಲ್ಲಿದ್ದ ಇವರು ಇಲ್ಲಿಗೆ ವರ್ಗಾವಣೆಗೊಂಡಿದ್ದಾರೆ.

ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಖುರ್ಷಿದಾ ಬೇಗಂ ಅವರನ್ನು ಚಾಮರಾಜನಗರಕ್ಕೆ ವರ್ಗಾಯಿಸಲಾಗಿದೆ. ನೂತನ ಅಧಿಕಾರಿ ನಾಗೇಶ್ ಅವರು ಜಿಲ್ಲೆಯಲ್ಲಿ ಚುನಾವಣಾ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಇಂದು ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಮತ್ತು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರುಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಅಲ್ಲದೆ, ಜಿಲ್ಲೆಯಲ್ಲಿ ಪಾರದರ್ಶಕ ಹಾಗೂ ಶಾಂತಿ ಪೂರ್ಣ ಚುನಾವಣೆ ಎದುರಿಸಲು ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆಯ ಸಹಕಾರದಿಂದ ಅಬ್ಕಾರಿ ಇಲಾಖೆ ಕಾರ್ಯನಿರ್ವಹಿಸುವದಾಗಿ ‘ಶಕ್ತಿ’ ಸಂದರ್ಶನ ವೇಳೆ ಆಶÀಯ ವ್ಯಕ್ತಪಡಿಸಿದ್ದಾರೆ.

ಹಿಂದೆ ಮಂಡ್ಯ, ಉಡುಪಿ, ಗದಗ್ ಹಾಗೂ ಚಾಮರಾಜನಗರಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅಧಿಕಾರಿ ನಾಗೇಶ್ ಅವರು, ಮೂಲತಃ ಗುಂಡ್ಲುಪೇಟೆ ತಾಲೂಕಿನ ಹಾಲತ್ತೂರು ನಿವಾಸಿಯಾಗಿದ್ದಾರೆ. ಕೊಡಗಿನ ಜನತೆ ಶಾಂತಿಪ್ರಿಯರೆಂದು ಕೇಳಿರುವದಾಗಿ ಪ್ರತಿಕ್ರಿಯಿಸಿದ ಅವರು, ಚುನಾವಣಾ ನೀತಿ ಸಂಹಿತೆಗೆ ಭಂಗವಾಗದಂತೆ ಎಲ್ಲರೂ ಇಲಾಖೆಯೊಂದಿಗೆ ಸಹಕರಿಸುವಂತೆ ಸಲಹೆ ನೀಡಿದ್ದಾರೆ.