ಗೋಣಿಕೊಪ್ಪಲು, ಏ. 4: ನಾಗರಹೊಳೆ ರಾಷ್ಟ್ರೀಯ ಉದ್ಯಾನ, ಕೇರಳದ ವಯನಾಡು ವನ್ಯಜೀವಿ ವಲಯ ಹಾಗೂ ಬೃಹ್ಮಗಿರಿ ವನ್ಯಜೀವಿ ವಲಯದಿಂದ ಆಹಾರವನ್ನು ಅರಸುತ್ತಾ ಕುಟ್ಟ, ಕೆ.ಬಾಡಗ, ತೈಲ ಹಾಗೂ ಮಂಚಳ್ಳಿ ಗ್ರಾಮದತ್ತ ನುಸುಳುವ ಕಾಡಾನೆ ಹಿಂಡುಗಳು ಅರಣ್ಯ ಇಲಾಖೆಯ ಕಣ್ಣುತಪ್ಪಿಸಿ ಓಡಾಡುತ್ತಿರುವದು ಕಂಡು ಬಂದಿದೆ.
ಇತ್ತೀಚೆಗೆ ಬ್ರಹ್ಮಗಿರಿ ವನ್ಯಜೀವಿ ವಲಯದಿಂದ ಸಮೀಪದ ಗ್ರಾಮಗಳಿಗೆ ನಿರಂತರ ನುಸುಳುವ ಕಾಡಾನೆಗಳಿಂದ ರೈತರ ಫಸಲು ನಷ್ಟವಾಗಿತ್ತು. ಇದೇ ಹಂತದಲ್ಲಿ ಕೆಲವು ಕಾಡಾನೆಗಳು ಗುಂಡೇಟು ತಗುಲಿ ಸಾವನ್ನಪ್ಪಿದ ಘಟನೆಯೂ ನಡೆದಿತ್ತು. ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಅವರ ನಿರ್ದೇಶನದಲ್ಲಿ ಪೆÇನ್ನಂಪೇಟೆ ವಲಯಾರಣ್ಯಾಧಿಕಾರಿ ಗಂಗಾಧರ್, ನಾಗರಹೊಳೆ ಆರ್.ಎಫ್.ಓ. ಅರವಿಂದ್ ಮತ್ತು ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ನೇತೃತ್ವದಲ್ಲಿ ಅರಣ್ಯ ರಕ್ಷಕರು, ವನಪಾಲಕರು ಹಾಗೂ ರ್ಯಾಪಿಡ್ ರೆಸ್ಪಾನ್ಸ್ ತಂಡದ ಸದಸ್ಯರ ತಂಡ ಕಾಡಾನೆ ಓಡಿಸಲು ಮುಂದಾದರು. ಆದರೆ, ಆನೆಗಳೇ ಕಣ್ಣಿಗೆ ಕಾಣಲಿಲ್ಲ. ಯಾವದೋ ಒಂದು ಆನೆಯನ್ನು ಓಡಿಸಲಾಯಿತು. ಆದರೆ, ಕಾರ್ಯಾಚರಣೆ ನಡೆಸಿದ ಸಂದರ್ಭ 11 ಆನೆಗಳು ಗ್ರಾಮಸ್ಥರಿಗೆ ಗೋಚರವಾಗಿ ಇಲಾಖಾ ಸಿಬ್ಬಂದಿಗಳು ತುರ್ತು ದೌಡಾಯಿಸಿ ಎಲ್ಲ 11 ಆನೆಗಳನ್ನೂ ಕಾಡಿಗೆ ಅಟ್ಟಿದ್ದಾರೆ. ಕಾಯಿಮಾನೆಯಿಂದ 11 ಆನೆಗಳನ್ನು ಓಡಿಸುತ್ತಿದ್ದಂತೆಯೇ ಕುಟ್ಟ ಅರಣ್ಯ ಪ್ರದೇಶದಿಂದ 7 ಆನೆಗಳು ನುಸುಳಿದ ಬಗ್ಗೆ ಮಾಹಿತಿ ಲಭ್ಯವಾಗಿ ಕಾರ್ಯಾಚರಣೆ ತಂಡ ಮತ್ತೆ ಆನೆಗಳನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಯಿತು. ಸಾರ್ವಜನಿಕರ ಪ್ರಕಾರ ಇದರಿಂದ ಇಲ್ಲಿನ ಗ್ರಾಮಸ್ಥರಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲ. ಆನೆ ನುಸುಳುವ ಮಾರ್ಗ ರೈಲ್ವೇ ಕಂಬಿಗಳನ್ನು ಶೀಘ್ರ ಅಳವಡಿಸಿದ್ದಲ್ಲಿ ತಡೆಗಟ್ಟಲು ಸಾಧ್ಯವಿದೆ. ಫಸಲು ನಷ್ಟಗೊಂಡ ಕೃಷಿಕರಿಗೆ ತುರ್ತು ಪರಿಹಾರವೂ ಸಿಗುತ್ತಿಲ್ಲ. ಅಲ್ಲದೆ, ಪರಿಹಾರ ಮೊತ್ತ ಏನೇನೂ ಸಾಲದು. ಇತ್ತ ಹುಲಿ ಧಾಳಿಯಿಂದ ರಾಸುಗಳನ್ನು ಕಳೆದುಕೊಂಡವರಿಗೂ ಕೇವಲ ರೂ. 10 ಸಾವಿರ ಮೊತ್ತ ಏನೇನು ಸಾಲದು ಎಂದು ಆರೋಪಿಸಿದ್ದಾರೆ. ಹುಲಿ ಧಾಳಿಯಿಂದ ಸಾವನ್ನಪ್ಪಿದ ಜಾನುವಾರು ಮಾಲೀಕರಿಗೆ ಕನಿಷ್ಟ ಪರಿಹಾರ ಮೊತ್ತವನ್ನು ರೂ. 30 ಸಾವಿರಕ್ಕೆ ಏರಿಸಲು ಒತ್ತಾಯ ಕೇಳಿ ಬಂದಿದ್ದು, ಈ ಬಗ್ಗೆ ರಾಜ್ಯ ಸರ್ಕಾರದ ಇಲಾಖಾ ಕಾರ್ಯದರ್ಶಿಗಳ ಗಮನಕ್ಕೂ ತರಲಾಗಿದೆ ಎಂದು ಅರಣ್ಯ ಇಲಾಖಾ ಮೂಲದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಚುನಾವಣೆ ನಂತರ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಹುಶಃ ಪರಿಹಾರ ಮೊತ್ತ ಹೆಚ್ಚಳವಾಗಬಹುದು ಎನ್ನಲಾಗುತ್ತಿದೆ. ಅದುವರೆಗೂ ಇಲಾಖಾಧಿಕಾರಿಗಳು ಆನೆ ಓಡಿಸುತ್ತಲೇ, ಕೃಷಿಕರನ್ನು ಸಮಾಧಾನಪಡಿಸಬೇಕಾಗಿರುವದು ವಾಸ್ತವ. -ಟಿ.ಎಲ್. ಶ್ರೀನಿವಾಸ್