ಕುಶಾಲನಗರ, ಏ. 4: ಕುಶಾಲನಗರ ಸರಕಾರಿ ಬಸ್ ನಿಲ್ದಾಣದ ಆವರಣದ ಶೌಚಾಲಯದಲ್ಲಿ ತಡರಾತ್ರಿಯಲ್ಲಿ ಮಹಿಳೆಯರ ಸರ, ಮೊಬೈಲ್, ನಗದು ದೋಚುತ್ತಿರುವ ಪ್ರಕರಣಗಳು ಮರುಕಳಿಸುತ್ತಿವೆ. ಬಸ್ ನಿಲ್ದಾಣದ ಶೌಚಾಲಯಕ್ಕೆ ತೆರಳಿದ ಮಹಿಳೆಯೊಬ್ಬರ ಮೊಬೈಲ್, ಚೈನ್, ನಗದು ಕಸಿದ ಪ್ರಕರಣ ಇತ್ತೀಚೆಗೆ ನಡೆದಿತ್ತು. ಇದೀಗ ಮೊನ್ನೆ ತಡರಾತ್ರಿ 2 ಗಂಟೆ ವೇಳೆಯಲ್ಲಿ ಇದೇ ರೀತಿಯ ಪ್ರಕರಣ ಮತ್ತೆ ನಡೆದಿದೆ. ರಾತ್ರಿ 12 ಗಂಟೆಯಿಂದ 4 ಗಂಟೆ ತನಕ ಕುಶಾಲನಗರ ಮೂಲಕ 100 ಕ್ಕೂ ಅಧಿಕ ಬಸ್‍ಗಳು ಸಂಚರಿಸುತ್ತಿದ್ದು, ಈ ಸಂದರ್ಭ ಶೌಚಾಲಯಕ್ಕೆ ತೆರಳುವ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಬೆಲೆಬಾಳುವ ವಸ್ತುಗಳ ಅಪಹರಣ ಮಾಡಿರುವ ಪ್ರಕರಣಗಳು ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಬಸ್ ನಿಲ್ದಾಣದ ಸುತ್ತಮುತ್ತ ಬೀದಿ ದೀಪಗಳು ಕೆಟ್ಟು ನಿಂತಿದ್ದು ಕಳ್ಳರ ದಂಧೆಗೆ ಸಹಕಾರಿಯಾದಂತಿದೆ. ಎರಡು ದಿನಗಳ ಕಾಲ ಪೊಲೀಸರು ರಾತ್ರಿ ವೇಳೆ ಪಹರೆ ನಡೆಸಿರುವದಾಗಿ ತಿಳಿಸಿದ್ದಾರೆ. ಇದೀಗ ಚುನಾವಣೆ ನಿಮಿತ್ತ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸುತ್ತಿರುವ ನಡುವೆ ಕಳ್ಳರು ಇಂತಹ ಸಮಯವನ್ನು ಬಳಸಿಕೊಳ್ಳುವದು ಕಂಡು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ರೈತ ಭವನದಲ್ಲಿ ನಡೆಯುತ್ತಿದ್ದ ವಿವಾಹ ಸಂದರ್ಭ ಮಹಿಳೆಯೊಬ್ಬರ ಚಿನ್ನದ ಚೈನ್ ಕಸಿದು ಪರಾರಿಯಾಗಿರುವ ಘಟನೆಯೂ ನಡೆದಿದೆ. ಕೂಡಲೇ ಪೊಲೀಸರು ಎಚ್ಚೆತ್ತುಕೊಂಡು ಕಳ್ಳರ ಪತ್ತೆ ಮಾಡುವದರೊಂದಿಗೆ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸುವಂತೆ ಕೆ.ಜಿ. ಮನು ಪೊಲೀಸರನ್ನು ಆಗ್ರಹಿಸಿದ್ದಾರೆ.