ಕೂಡಿಗೆ, ಏ. 3: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಹೆಬ್ಬಾಲೆ ವಲಯವು 9 ವರ್ಷಗಳನ್ನು ಪೂರೈಸಿ 10ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಬ್ಬಾಲೆ ವಲಯದಲ್ಲಿ ಒಟ್ಟು 323 ಪ್ರಗತಿಬಂಧು ಸ್ವ-ಸಹಾಯ ಸಂಘಗಳಿವೆ. ಅವುಗಳಲ್ಲಿ 2694 ಸದಸ್ಯರಿದ್ದಾರೆ.
ಪ್ರಸ್ತುತ ವರ್ಷದಲ್ಲಿ ರೂ. 9 ಕೋಟಿಯಷ್ಟು ಸಾಲವನ್ನು ಹೈನುಗಾರಿಕೆ, ಮನೆ ನಿರ್ಮಾಣ, ಸ್ವ-ಉದ್ಯೋಗ, ಕೃಷಿ ಚಟುವಟಿಕೆ ಹಾಗೂ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿಕೊಂಡು ಶೇ. 100 ರಷ್ಟು ಮರುಪಾವತಿ ಮಾಡಿದ್ದಾರೆ. ಯೋಜನೆಯಿಂದ ವಿವಿಧ ಕೃಷಿ ಚಟುವಟಿಕೆಗಳಿಗೆ ಅನುದಾನ ನೀಡುತ್ತಿದ್ದು, ಯಂತ್ರೋಪಕರಣ ಖರೀದಿ, ಶೌಚಾಲಯ ನಿರ್ಮಾಣ, ಸೌರವಿದ್ಯುತ್ ಅಳವಡಿಕೆಗಳಿಗೆ ರೂ. 50,000 ಅನುದಾನ ನೀಡಲಾಗಿದೆ. ನಿರ್ಗತಿಕರಿಗೆ ಮಾಸಾಶನ ನೀಡಲಾಗುತ್ತಿದೆ. ಸಮುದಾಯ ಅಭಿವೃದ್ಧಿ ವಿಭಾಗದಿಂದ ತೊರೆನೂರು ಶ್ರೀ ಬಸವೇಶ್ವರ ಸಮುದಾಯ ಭವನಕ್ಕೆ ರೂ. 75000 ಮಂಜೂರಾಗಿದೆ. ಯೋಜನೆಯ ವಿವಿಧ ಕಾರ್ಯಕ್ರಮಗಳಾದ ಜೀವನ ಮಧುರ ಪಾಲಿಸಿ, ರಾಷ್ಟ್ರೀಯ ಪಿಂಚಣಿ ಯೋಜನೆ, ಸೆಲ್ಕೋ ಸೋಲಾರ್ ಅಳವಡಿಕೆ, ಗೋಬರ್ ಗ್ಯಾಸ್ ನಿರ್ಮಾಣ, ಗ್ರೀನ್‍ವೇ ಕುಕ್‍ಸ್ಟವ್, ನಿರಂತರ ಪತ್ರಿಕೆ, ಸಂಪೂರ್ಣ ಸುರಕ್ಷೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿವೆ ಎಂದು ಮೇಲ್ವಿಚಾರಕ ವಿನೋದ್ ಕುಮಾರ್ ತಿಳಿಸಿದ್ದಾರೆ.
ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಎರೆಪಾರೆ ಕೆರೆಯನ್ನು ಹೂಳೆತ್ತುವ ಮೂಲಕ ಅಭಿವೃದ್ಧಿಪಡಿಸಲಾಗಿದೆ. ಚಿಕ್ಕಅಳುವಾರ ಗ್ರಾಮದಲ್ಲಿ ಒಕ್ಕೂಟದ ಮೂಲಕ ವಾರ್ಷಿಕೋತ್ಸವ, ತೊರೆನೂರು ಗ್ರಾಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಹೆಬ್ಬಾಲೆ ಕ್ಷೇತ್ರದಲ್ಲಿ ಒಕ್ಕೂಟದ ಪದಾಧಿಕಾರಿಗಳಿಗೆ ನಾಯಕತ್ವ ತರಬೇತಿ ನೀಡಲಾಗುತ್ತಿದೆ. ಹೆಬ್ಬಾಲೆ ವಲಯದ ಆರು ಧಾರ್ಮಿಕ ಕ್ಷೇತ್ರಗಳಲ್ಲಿ ಸ್ವಚ್ಛತೆಯನ್ನು ಒಕ್ಕೂಟದ ವತಿಯಿಂದ ನಡೆಸಲಾಗಿದೆ.
ಸೇವಾ ಪ್ರತಿನಿಧಿಗಳಾಗಿ ಹೆಬ್ಬಾಲೆ ಕಾರ್ಯಕ್ಷೇತ್ರದಲ್ಲಿ ಕಲ್ಪನಾ, ಹಳೆಗೋಟೆ ಕಾರ್ಯಕ್ಷೇತ್ರ ಪ್ರಮೀಳ, ಕಣಿವೆ ಕಾರ್ಯಕ್ಷೇತ್ರದಲ್ಲಿ ಲಕ್ಷ್ಮಿ, ಹಳೆಕೂಡಿಗೆ ಕಾರ್ಯಕ್ಷೇತ್ರ ಸಂಜೀವಿನಿ, ತೊರೆನೂರು ಕಾರ್ಯಕ್ಷೇತ್ರ ನಾಗವೇಣಿ, ಶಿರಂಗಾಲ ಕಾರ್ಯಕ್ಷೇತ್ರ ತಾರಾಮಣಿ, ಚಿಕ್ಕಅಳುವಾರ ಕಾರ್ಯಕ್ಷೇತ್ರ ಸುಮಲತಾ, ಅರಸಿನಗುಪ್ಪೆ ಕಾರ್ಯಕ್ಷೇತ್ರ ಮಂಜುಳ, ಮಾಲಂಬಿ, ಆಲೂರು-ಸಿದ್ದಾಪುರ ಕಾರ್ಯಕ್ಷೇತ್ರ ಮೀನಾಕ್ಷಿ, ಗಣಗೂರು ಕಾರ್ಯಕ್ಷೇತ್ರ ಸರೋಜ, ಗೋಣಿಮರೂರು ಕಾರ್ಯಕ್ಷೇತ್ರ ಉಷಾ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.