ಹೆಬ್ಬಾಲೆ, ಏ. 3 : ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಅಳುವಾರ ಗ್ರಾಮದ ಗ್ರಾಮ ದೇವತೆ ಶ್ರೀ ಅಳುವಾರದಮ್ಮ(ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವ ತಾ. 4 ರಿಂದ (ಇಂದಿನಿಂದ) ತಾ.6 ರವರೆಗೆ ನಡೆಯಲಿದೆ.
ಚಿಕ್ಕಅಳುವಾರ ಶ್ರೀ ಅಳುವಾರದಮ್ಮ ದೇವಾಲಯ ಸಮಿತಿ ವತಿಯಿಂದ ಚೈತ್ರ ಕೃಷ್ಣ ಪಕ್ಷ ಚತುರ್ಥಿ ಅನುರಾಧ ನಕ್ಷತ್ರದಂದು ಶುಭಗಳಿಗೆಯಿಂದ ದೇವಿಯ ಮೂಲ ಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಯಲಿವೆ.
ಅಂದು ಬೆಳಿಗ್ಗೆ 8 ಗಂಟೆಗೆ ದೇವರ ವಿಗ್ರಹಗಳಿಗೆ ಗಂಗಸ್ನಾನ ಮಾಡಿಸಿ ಗಂಗಪೂಜೆ ನೆರವೇರಿಸಲಾಗುತ್ತದೆ. ನಂತರ ಪೂರ್ಣಕುಂಭ ಹೊತ್ತ ಮಹಿಳೆಯರು ವಾದ್ಯ ಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಯಲಿದೆ.
ದೇವಾಲಯ ಸಮಿತಿ ಅಧ್ಯಕ್ಷ ಟಿ.ಎಚ್.ಪುಟ್ಟಸ್ವಾಮಿ ಹಾಗೂ ಕಾರ್ಯದರ್ಶಿ ಶಿವಶಂಕರ್ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಲಿವೆ.
ತಾ. 5 ರಂದು ರಾತ್ರಿ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ಊರಿನ ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಇದೇ ಸಂದರ್ಭ ಆಕರ್ಷಕ ಮದ್ದುಗುಂಡು ಹಾಗೂ ಪಟಾಕಿಗಳ ಪ್ರದರ್ಶನ ಏರ್ಪಡಿಸಲಾಗಿದೆ.
ತಾ. 6 ರಂದು ಹಬ್ಬದ ಅಂಗವಾಗಿ ಬೆಳಿಗ್ಗೆ 11 ಗಂಟೆಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸಾರ್ವಜನಿಕರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ರಾತ್ರಿ 8 ಗಂಟೆಗೆ ಭದ್ರಾವತಿ ಸೋನಿ ಮೆಲೋಡಿಸ್ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಖಜಾಂಜಿ ವಿಜಯ್ ಕುಮಾರ್ ತಿಳಿಸಿದ್ದಾರೆ.