ಕೂಡಿಗೆ, ಏ. 3: ಕೂಡಿಗೆಯಿಂದ ಕೋವರ್‍ಕೊಲ್ಲಿವರೆಗೆ ನಿರ್ಮಾಣ ಮಾಡಲಾಗಿರುವ ರಸ್ತೆ ಅಗಲೀಕರಣದ ಕಾಮಗಾರಿ ಹಾಗೂ ಡಾಂಬರೀಕರಣ ಮಾಡುವ ಸಂದರ್ಭ ಹುದುಗೂರು ಮತ್ತು ಮದಲಾಪುರ ಗ್ರಾಮ ಹಾಗೂ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರಸ್ತೆ ಇಕ್ಕೆಲಗಳಲ್ಲಿ ನಿರ್ಮಿಸಲಾಗಿದ್ದ ಚರಂಡಿಗಳನ್ನು ಮುಚ್ಚಲಾಗಿದೆ.
ಕೆಲವು ಭಾಗಗಳಲ್ಲಿ ಹಾನಿ ಮಾಡಲಾಗಿದೆ. ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಆದಷ್ಟು ಬೇಗ ಚರಂಡಿ ಕಾಮಗಾರಿ ಮಾಡಬೇಕು ಎಂದು ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್, ಹುದುಗೂರು ಗ್ರಾಮದ ಹೆಚ್.ಎಸ್. ರವಿ, ಕೃಷ್ಣಪ್ಪ, ದೇವರಾಜ್, ಮಂಜುನಾಥ್, ಮುತ್ತಪ್ಪ ಸೇರಿದಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕಾಮಗಾರಿ ನಿರ್ವಹಿಸದಿದ್ದಲ್ಲಿ ಮುಂದಿನ ಜುಲೈ ತಿಂಗಳಲ್ಲಿ ನಾಲೆಗೆ ನೀರು ಬಿಟ್ಟ ಸಂದರ್ಭ ನಾಲೆಯ ಕೆಳಭಾಗದಲ್ಲಿರುವ ಈ ರಸ್ತೆಯು ನೀರಿನಿಂದ ಆವೃತವಾಗುತ್ತದೆ. ಅಲ್ಲದೆ, ಶೀಘ್ರವಾಗಿ ಚರಂಡಿ ಕಾಮಗಾರಿ ನಿರ್ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.