ಇಂದು ಸಂಕಷ್ಟಿ ಪೂಜೆ ಮಡಿಕೇರಿ, ಏ. 2: ದೇಚೂರು ಶ್ರೀ ವಿದ್ಯಾ ಗಣಪತಿ ಸನ್ನಿಧಿಯಲ್ಲಿ ವಿಶೇಷ ಸಾಮೂಹಿಕ ಅಂಗಾರಕ ಸಂಕಷ್ಟಹರ ಚತುರ್ಥಿ ಪೂಜೆ ತಾ. 3ರಂದು (ಇಂದು) ಸಂಜೆ 7 ಗಂಟೆಗೆ ನಡೆಯಲಿದೆ.ಇಂದು ದುರ್ಗಾಪೂಜೆ

ಮಡಿಕೇರಿ: ತಾ. 3ರಂದು ಸಂಜೆ 6.30 ಗಂಟೆಗೆ ಶ್ರೀ ಕೋಟೆಮಾರಿಯಮ್ಮ ದೇವಸ್ಥಾನದಲ್ಲಿ ಸಾಮೂಹಿಕವಾಗಿ ಶ್ರೀ ದುರ್ಗಾಪೂಜೆಯನ್ನು ಏರ್ಪಡಿಸಲಾಗಿದೆ.ವಿಜೃಂಭಣೆಯಿಂದ ಜರುಗಿದ ತಪೋವನ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರೆಶನಿವಾರಸಂತೆ: ಸಮೀಪದ ಮೆಣಸ ಗ್ರಾಮದ ಮನೆಹಳ್ಳಿ ಕ್ಷೇತ್ರ ತಪೋವನ ಗುರುಸಿದ್ಧ ವೀರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಸುತ್ತ ಮುತ್ತಲ ಗ್ರಾಮಗಳ, ನೆರೆ ಜಿಲ್ಲೆಗಳ ಸಾವಿರಾರು ಮಂದಿ ಭಕ್ತರು ಶ್ರದ್ಧಾಭಕ್ತಿಯೊಂದಿಗೆ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಬೆಳಿಗ್ಗೆ ಸ್ವಾಮಿಯವರ ದುಗ್ಗಳ ಹಾಗೂ ಅಗ್ನಿಕೊಂಡೋತ್ಸವ ಸೇವೆ, ಸಣ್ಣ ಚಂದ್ರಮಂಡಲೋತ್ಸವ, ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು. ತಪೋವನೇಶ್ವರಿ ಅಮ್ಮನವರ ದೇಗುಲದಲ್ಲಿ ಮುತ್ತೈದೆ ಸೇವೆ, ಸುಮಂಗಲಿಯರಿಗೆ ಮಡಿಲು ತುಂಬುವ ಕಾರ್ಯಕ್ರಮದಲ್ಲಿ ಮಹಿಳೆಯರು ಸಂಭ್ರಮದಿಂದ ಪಾಲ್ಗೊಂಡು ಹೂ, ಬಳೆ, ಅರಶಿನ ಕುಂಕುಮ ಸ್ವೀಕರಿಸಿದರು. ಮಧ್ಯಾಹ್ನ ದಾಸೋಹ ಸೇವೆ ನಡೆಯಿತು. ಬಳಿಕ ಸ್ವಾಮಿಯವರ ದೊಡ್ಡ ಚಂದ್ರಮಂಡಲೋತ್ಸವ ಸೇವೆ ನೆರವೇರಿತು.

ಸಂಜೆ ಪ್ರಕಾರ ಪಲ್ಲಕ್ಕಿ ಉತ್ಸವ, ರಥೋತ್ಸವ, ರಥಾರೂಡ ಸ್ವಾಮಿಯವರಿಗೆ ಚೆಲುವರಾಯ ಸ್ವಾಮಿಯವರಿಂದ ಚಾಮರಸೇವೆ, ಮಹಾಮಂಗಳಾರತಿ ನಡೆದು ಸ್ವಾಮಿಯವರ ಮಹಾರಥೋತ್ಸವ, ವೃಷಭಲಿಂಗೇಶ್ವರ ಸ್ವಾಮಿಯವರ ಸನ್ನಿಧಾನದಲ್ಲಿ ಮಹಾಮಂಗಳಾರತಿಯೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯವಾಯಿತು. ಪ್ರಸಾದ ವಿನಿಯೋಗವಾಯಿತು.

ಪೂಜಾ ಕೈಂಕರ್ಯ ಸಂದರ್ಭ ತಪೋವನ ಮಠಾಧೀಶ ಹಾಗೂ ಸೇವಾ ಟ್ರಸ್ಟಿಯ ಅಧ್ಯಕ್ಷ ಮಹಾಂತ ಶಿವಲಿಂಗ ಸ್ವಾಮೀಜಿ, ಗೌರವ ಅಧ್ಯಕ್ಷ ಸುಕ್ಷೇತ್ರ ಚಿಲುಮೆ ಮಠಾಧೀಶ ಜಯದೇವ ಮಹಾಸ್ವಾಮಿ, ಉಪಾಧ್ಯಕ್ಷ ಯು.ಎಸ್. ಶೇಖರ್, ಕಾರ್ಯದರ್ಶಿ ಎಂ.ಎಂ. ಸುರೇಶ್, ಖಜಾಂಚಿ ಕೆ.ಎಚ್. ಮಂಜುನಾಥ್, ಹಾಗೂ ಸದಸ್ಯರು ಹಾಜರಿದ್ದರು.ಮುತ್ತಪ್ಪ ತೆರೆ ಮಹೋತ್ಸವ

ವೀರಾಜಪೇಟೆ: ವೀರಾಜಪೇಟೆಯ ಅರಸು ನಗರದ ಮುತ್ತಪ್ಪ ದೇವಾಲಯದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಮುತ್ತಪ್ಪ ದೇವರ ತೆರೆ ಮಹೋತ್ಸವವನ್ನು ಎರಡು ದಿನಗಳ ಕಾಲ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಮಾ.31 ರಂದು ಸಂಜೆ ಮುತ್ತಪ್ಪ ದೇವರ ವೆಳ್ಳಾಟಂನೊಂದಿಗೆ ತೆರೆ ಮಹೋತ್ಸವ ಪ್ರಾರಂಭಗೊಂಡು ನಂತರ ಗುಳಿಗನ ವೆಳ್ಳಾಟ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ರಾತ್ರಿ 9-30 ಗಂಟೆಗೆ ತೆರೆ ಉತ್ಸವದ ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಮಡಿಕೇರಿ, ಗಾಳಿಬೀಡು, ಸಿದ್ದಾಪುರ, ವೀರಾಜಪೇಟೆ ಕಲಾ ಪ್ರತಿಭೆಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ 48 ತಂಡಗಳು ಭಾಗವಹಿಸಿದ್ದವು. ತಾ. 1 ರಂದು ಪ್ರಾತ;ಕಾಲ 3-30 ಗಂಟೆಗೆ ಗುಳಿಗನ ತೆರೆ, ಬೆಳಿಗ್ಗೆ 5-30ಕ್ಕೆ ಮುತ್ತಪ್ಪ ಹಾಗೂ ತಿರುವಪ್ಪನ ತೆರೆ ಜರುಗಿತು. ಅಪರಾಹ್ನ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಅಕ್ಕಮಹಾದೇವಿ ಜಯಂತಿ ಆಚರಣೆ

ಸೋಮವಾರಪೇಟೆ: ಇಲ್ಲಿನ ವೀರಶೈವ ಸಮಾಜದ ಅಕ್ಕನ ಬಳಗದ ಆಶ್ರಯದಲ್ಲಿ ಅಕ್ಕಮಹಾದೇವಿ ಜಯಂತಿ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು. ಸಮಾರಂಭದ ದಿವ್ಯಸಾನ್ನಿಧ್ಯ ವಹಿಸಿ ಮಾತನಾಡಿದ ಇಲ್ಲಿನ ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶಸ್ವಾಮೀಜಿ ಅವರು, ಯಾವದೆ ದಾರ್ಶನಿಕರು, ಮಹಾನ್ ಪುರುಷರು, ಶಿವಶರಣರ ಜನ್ಮದಿನಾಚರಣೆ ನಡೆಸಿದರೆ ಸಾಲದು, ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದರು.

12ನೇ ಶತಮಾನದಲ್ಲೇ ಶರಣರು ತಮ್ಮ ಸಾಹಿತ್ಯ ಕೃಷಿಯ ಮೂಲಕ ಸಮಾಜದ ಸುಧಾರಣೆಯನ್ನು ಮಾಡಿದರು. ಮಹಿಳಾ ದೌರ್ಜನ್ಯ ಮತ್ತು ನಿರಂತರ ಶೋಷಣೆಯ ವಿರುದ್ಧ ಮೂಡಿಬಂದ ಅಕ್ಕಮಹಾದೇವಿಯವರ ವಚನಗಳನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಅಗತ್ಯತೆ ಇದೆ ಎಂದರು.

ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆಯ ಉಪನ್ಯಾಸಕಿ ಎಸ್.ಜಿ.ನಯನತಾರ ಮಾತನಾಡಿ, ವಿಶ್ವ ಮಹಿಳಾ ದಿನಾಚರಣೆಯನ್ನು ಸಮಾಜದ ವಿದ್ಯಾವಂತ, ಸುಶಿಕ್ಷಿತ ಮಹಿಳೆಯರು ಮಾತ್ರ ಆಚರಿಸುವಂತಾಗಬಾರದು. ಗ್ರಾಮಾಂತರ, ಹಳ್ಳಿಗಾಡಿನಲ್ಲಿ ನೆಲೆಸಿರುವ ಬಡ, ಕಾರ್ಮಿಕ, ಮಹಿಳೆಯರು ಆಚರಿಸುವಂತಾಗಬೇಕು ಎಂದರು.

ಸಮಾಜದಲ್ಲಿ ಮಹಿಳೆಯರಿಗೆ ಎದುರಾಗುವ ತೊಂದರೆ, ಶೋಷಣೆ ವಿರುದ್ಧ ಹೋರಾಟ ಆಗಬೇಕು. ಲಿಂಗತಾರತಮ್ಯ ಭಾವನೆ ದೂರವಾಗಿಲ್ಲ. ಇಂತಹ ಧೋರಣೆಗಳು ಬದಲಾಗದ ಹೊರತು, ಸಬಲೀಕರಣ ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಕನ ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಮಾತನಾಡಿ, ಮಾನವ ಧರ್ಮದ ಮೌಲ್ಯ ಕುಸಿಯುತ್ತಿದೆ. 12ನೇ ಶತಮಾನದಲ್ಲಿ ನುಡಿದಂತೆ ನಡೆಯುವ ಪ್ರವೃತ್ತಿ ಹೆಚ್ಚಾಗಿತ್ತು. ಆದರೆ 21ನೇ ಶತಮಾನದಲ್ಲಿ ಮಹಿಳೆಯರ ಹಕ್ಕುಗಳಿಗೆ ಹೋರಾಟ ಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವಿಷಾದಿಸಿದರು. ಇದೇ ಸಂದರ್ಭ ಅಕ್ಕನ ಬಳಗದ ಹಿರಿಯ ಸದಸ್ಯೆ ಮಂಜುಳಾ ಶಾಂತಪ್ಪ, ಸದಸ್ಯೆ ಸುಜಾತ, ಜೇಸಿ ಸಂಸ್ಥೆಯ ಮಾಜಿ ಅಧ್ಯಕ್ಷೆ ಮಮತ ಹರೀಶ್ ಅವರುಗಳನ್ನು ಸನ್ಮಾನಿಸಲಾಯಿತು. ಸ್ಪರ್ಧಾ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ವೀರಶೈವ ಸಮಾಜದ ಶೆಟ್ಟರು ಕೆ.ಎನ್.ತೇಜಸ್ವಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎ.ಜಿ.ಚಂದ್ರಶೇಖರ್, ಅಕ್ಕನ ಬಳಗ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್ ಇದ್ದರು. ಸದಸ್ಯೆ ಸುಮಾ ಸುದೀಪ್ ಮತ್ತು ಲತಾ ಮಂಜುನಾಥ್ ಕಾರ್ಯಕ್ರಮ ನಿರ್ವಹಿಸಿದರು. ಇತಿಹಾಸ ಪ್ರಸಿದ್ಧ ಪೆರಾಜೆ ದೊಡ್ಡಮುಡಿಸುಳ್ಯ: ಸಾವಿರಾರು ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಧಾರ್ಮಿಕ ಚೌಕಟ್ಟಿನಲ್ಲಿ ಭೂತಾರಾಧನೆಯ ಮೂಲಕ ದೇವಿಯ ಸ್ವರೂಪದಲ್ಲಿ ಕಾಣುವ ಪೆರಾಜೆ ದೊಡ್ಡಮುಡಿ ಪ್ರತಿ ವರ್ಷದಂತೆ ತಾ. 1ರಂದು ಪೆರಾಜೆ ಗ್ರಾಮದ ಶ್ರೀಶಾಸ್ತಾವು ದೇವಸ್ಥಾನದಲ್ಲಿ ನಡೆಯಿತು. ರಾಜ್ಯದಲ್ಲೇ ಅಪರೂಪದ ದೇವಿಯ ಆರಾಧನೆಯ ಮೂಲಕ ಪೂಜಿಸುವ ಪೆರಾಜೆ ಭಗವತಿ ದೊಡ್ಡಮುಡಿಯನ್ನು ಕೇರಳ ಮತ್ತು ಕರ್ನಾಟಕದ ವಿವಿಧ ಭಾಗಗಳಿಂದ ಬಂದ ಸಾವಿರಾರು ಭಕ್ತರು ನೋಡಿ ಭಾವಪರವಶರಾದರು. ಭಗವತಿ ದೇವಿಗೆ ಕಂಕಣ ಭಾಗ್ಯ, ಸಂತಾನ ಭಾಗ್ಯ ಹಾಗೂ ಇತರ ಕಾರ್ಯಗಳಿಗೆ ಹರಕೆ ಹೊತ್ತ ಭಕ್ತರು ತಮ್ಮ ಹರಕೆಯ ರೂಪದಲ್ಲಿ ಸೀರೆ, ಚಿನ್ನ, ಬೆಳ್ಳಿಗಳನ್ನು ಅರ್ಪಿಸಿದರು. ದೇವಳದ ಪ್ರಧಾನ ಅರ್ಚಕ ವೆಂಕಟ್ರಮಣ ಪಾಙ್ಞಣ್ಣಾಯ, ದೇವಳದ ಆಡಳಿತ ಮೊಕ್ತೇಸರ ವಿಶ್ವನಾಥ ಕುಂಬಳಚೇರಿ, ದೇವತಕ್ಕ ರಾಜಗೋಪಾಲ ರಾಮಕಜೆ, ಆಡಳಿತ ಕಾರ್ಯದರ್ಶಿ ಹೊನ್ನಪ್ಪ ಕೊಳಂಗಾಯ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಧನಂಜಯ ಕೋಡಿ, ಕಾರ್ಯದರ್ಶಿ ಅಶೋಕ ಪೀಚೆ, ತಾಲೂಕು ಪಂಚಾಯಿತಿ ಸದಸ್ಯ ನಾಗೇಶ್ ಕುಂದಲ್ಪಾಡಿ ಹಾಗೂ ದೇವಳದ ಮಾಜಿ ಮೊಕ್ತೇಸರರು, ಕಾರ್ಯದರ್ಶಿಗಳು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ತಕ್ಕಮುಖ್ಯಸ್ಥರು ಪಾಲ್ಗೊಂಡಿದ್ದರು. ಹನುಮ ಜಯಂತಿ ಆಚರಣೆ ವೀರಾಜಪೇಟೆ, ಏ. 2 : ಪಟ್ಟಣದ ಛತ್ರಕೆರೆ ಬಳಿಯಲ್ಲಿರುವ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಹನುಮ ಜಯಂತಿ ಪ್ರಯುಕ್ತ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿಶೇಷ ಪೂಜಾ ವಿಧಿಗಳು ಜರುಗಿದವು.

ಮಧ್ಯಾಹ್ನ 1 ಗಂಟೆಗೆ ಮಹಾಪೂಜಾ ಸೇವೆ ಬಳಿಕ ಅನ್ನಸಂತರ್ಪಣೆ ನಡೆಯಿತು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು.

ಜೀರ್ಣೋದ್ಧಾರಕ್ಕೆ ಚಾಲನೆ

ಸೋಮವಾರಪೇಟೆ: ಯಡವಾರೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಚನ್ನಿಗ ರಾಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಗರ್ಭಗುಡಿಯ ತಳಭಾಗದಲ್ಲಿ ಷಡಾಧರ ಪ್ರತಿಷ್ಠಾಪನೆಯನ್ನು ಕೇರಳದ ಕಾಳೇಘಾಟ್ ಮನೆತನದ ಬ್ರಹ್ಮಶ್ರೀ ನಾರಾಯಣ ನಂಬೂದರಿ ನೆರವೇರಿಸಿದರು.

ಮಂಗಳೂರಿನ ಕದ್ರಿಯ ಜ್ಯೋತಿಷಿಗಳಾದ ಶ್ರೀರಂಗ ಐತಾಳ್, ಸೋಮವಾರಪೇಟೆಯ ಅರ್ಚಕ ಜಗದೀಶ್ ಉಡುಪ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ಕೇಳಿಸಿದಾಗ, ದೇವಾಲಯವನ್ನು ಸಂಪೂರ್ಣ ಶಿಲೆಯಲ್ಲಿ ನಿರ್ಮಿಸುವ ಮೂಲಕ ಜೀರ್ಣೋದ್ಧಾರ ಮಾಡಬೇಕು ಎಂದು ತಿಳಿದುಬಂದ ಹಿನ್ನೆಲೆ ಜೀರ್ಣೋದ್ಧಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಸೋಮವಾರಪೇಟೆ ಶ್ರೀಮುತ್ತಪ್ಪ ಹಾಗೂ ಅಯ್ಯಪ್ಪಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ಮಣಿಕಂಠನ್ ನಂಬೂದರಿ ಮತ್ತಿತರರು ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದರು. ಭಗವತಿ ಉತ್ಸವ

*ಸಿದ್ದಾಪುರ: ತ್ಯಾಗತ್ತೂರು ಗ್ರಾಮದ ಶ್ರೀ ಭಗವತಿ ದೇವಿಯ ವಾರ್ಷಿಕ ಪೂಜೋತ್ಸವ ಅತೀ ವಿಜೃಂಭಣೆಯಿಂದ ನಡೆಯಿತು. ಅರ್ಚಕ ಹರೀಶ್‍ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ತಾ.27 ರಂದು ಭಗವತಿ ದೇವಿಯ ವಾರ್ಷಿಕ ಪೂಜೆಗೆ ತೆರೆಬಿತ್ತು. ದೇವರ ತಕ್ಕರಾದ ಮುಂಡ್ರುಮನೆ ಅಚ್ಚಯ್ಯ ಮುಖ್ಯಸ್ಥರಾದ ಎಂ.ಎಂ.ಬಿದ್ದಪ್ಪ ಬಿ.ಕೆ.ಲಿಂಗಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎಂ.ಶಿವಕುಮಾರ್,ಕಾರ್ಯದರ್ಶಿ ಡಿ.ಎನ್.ಮನುಮಹೇಶ್ ಉಪಸ್ಥಿತರಿದ್ದರು. ದೇವರ ಉತ್ಸವ

ಮಡಿಕೇರಿ: ಗರ್ವಾಲೆ ಗ್ರಾಮದ ಶ್ರೀ ಮಾದೇವರ ಹಬ್ಬವು ತಾ. 6ರಂದು ಮಧ್ಯಾಹ್ನ 11.30 ಗಂಟೆಗೆ ನಡೆಯಲಿದೆ. ಅದೇ ದಿನ ಮಧ್ಯಾಹ್ನ 12 ಗಂಟೆಗೆ ಶ್ರೀ ಭಗವತಿ (ಪೊವ್ವಾದಿ) ದೇವರ ಉತ್ಸವ ನೆರವೇರಲಿದೆ.ಸಹಕಾರ ಶಿಕ್ಷಣ ನಿಧಿ ಸಲ್ಲಿಕೆ

ಚೆಟ್ಟಳ್ಳಿ, ಏ. 2: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಗಳಿಸಿದ ನಿವ್ವಳ ಲಾಭದಲ್ಲಿ ಸಹಕಾರ ಕಾಯ್ದೆ ಪ್ರಕಾರ ಪಾವತಿಸಬೇಕಾದ ಶೇ 2 ರಷ್ಟು ಸಹಕಾರ ಶಿಕ್ಷಣ ನಿಧಿಯನ್ನು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಪ್ರತಿನಿಧಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಸಿಬ್ಬಂದಿ ಬಿ.ಸಿ ಅರುಣ್ ಕುಮಾರ್‍ರವರಿಗೆ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಅವರು ಚೆಕ್ಕನ್ನು ನೀಡಿದರು.ಬಂದೂಕು ಠೇವಣಿದಾರರಿಗೆ...

ಮಡಿಕೇರಿ, ಏ. 2: ಭದ್ರತೆಗಾಗಿ ಆಯುಧಗಳನ್ನು ಸರಕಾರೇತರ ಸಂಸ್ಥೆಗಳು, ಜೀವ ಬೆದರಿಕೆ ಎದುರಿಸುತ್ತಿರುವವರು ತಮ್ಮಲ್ಲಿಯೇ ಬಂದೂಕು ಇರಿಸಿಕೊಳ್ಳುವ ಸಲುವಾಗಿ ಆಯಾ ಪ್ರದೇಶದ ಪೊಲೀಸ್ ಠಾಣೆಗೆ ಸರಕಾರ ದೊಂದಿಗೆ ತಾ. 5 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಎ2/ಂಖಒ (ಇತರ 248/2017-18)ರ ಆದೇಶದಂತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಜೈರಾಂ ತಿಳಿಸಿದ್ದಾರೆ.

ಸನ್ಮಾನ

ಮಡಿಕೇರಿ, ಏ. 2: ಮರಗೋಡು ಗ್ರಾಮ ಪಂಚಾಯಿತಿ ಸದಸ್ಯ ಮುಂಡೋಡಿ ನಂದ ನಾಣಯ್ಯ ಅವರು ಕುಡಿಯುವ ನೀರನ ವ್ಯವಸ್ಥೆ ಹಾಗೂ ರಸ್ತೆ ಅಭಿವೃದ್ಧಿ ಮಾಡಿದಕ್ಕಾಗಿ ಕೇನೇರ, ಚೆರಿಯಮನೆ, ಕಾನಡ್ಕ ಕುಟುಂಬಸ್ಥರು ಸನ್ಮಾನಿಸಿದರು.ಪ್ರತಿಭಟನೆ

ಮಡಿಕೇರಿ, ಏ. 2: ಅರೆಸೇನಾಪಡೆ ನಿವೃತ್ತ ಯೋಧರ ಒಕ್ಕೂಟದ ವತಿಯಿಂದ ತಾ.6ರಂದು ಬೆಳಿಗ್ಗೆ 10 ಗಂಟೆಗೆ ಗಾಂಧಿಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಲಿದೆ.