ಕೂಡಿಗೆ, ಏ. 2: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಮುಖ್ಯ ರಸ್ತೆ ಗೋಪಾಲ್ ಸರ್ಕಲ್ ಬಳಿ ರಸ್ತೆಗೆ ಬೃಹತ್ ಗಾತ್ರದ ಮರವೊಂದು ಉರುಳಿದ ಪರಿಣಾಮ 12ಕ್ಕೂ ಹೆಚ್ಚು 11 ಕೆವಿ ಸಾಮಥ್ರ್ಯದ ವಿದ್ಯುತ್ ಕಂಬಗಳೂ ನೆಲಕ್ಕುರುಳಿವೆ. ತಕ್ಷಣ ವಿದ್ಯುತ್ ಸಂಪರ್ಕ ತೆಗೆದು ಸ್ಥಳಕ್ಕೆ ಚೆಸ್ಕಾಂ ಸಿಬ್ಬಂದಿಗಳು ಭೇಟಿ ನೀಡಿ ಅರಣ್ಯ ಇಲಾಖೆಗೆ ಮರವನ್ನು ತೆರವುಗೊಳಿಸುವಂತೆ ಸೂಚಿಸಿದರು. ಈ ಸಂದರ್ಭ ಕಾಲೇಜಿಗೆ ತೆರಳುತ್ತಿದ್ದ ಕೆಲವು ವಿದ್ಯಾರ್ಥಿಗಳು ಅದೃಷ್ಟವಶಾತ್ ಸ್ವಲ್ಪ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಯಾವದೇ ಪ್ರಾಣಹಾನಿ ಸಂಭವಿಸಿಲ್ಲ. ಇದಲ್ಲದೆ ಕಳೆದ ಶುಕ್ರವಾರ ಮಳೆಗೆ 23 ಕಂಬಗಳು ನೆಲಕ್ಕುರುಳಿದ್ದು ಸಾಕಷ್ಟು ಹಾನಿಯಾಗಿರುವದಲ್ಲದೆ, ಎರಡು ಟ್ರಾನ್ಸ್‍ಫಾರಂಗಳು ಸುಟ್ಟುಹೋಗಿವೆ. ಕಳೆದ ನಾಲ್ಕು ದಿನಗಳಿಂದ ನಾಗಮ್ಮನ ಮಂಟಿ, ಸುಂದರನಗರದ ಕೆಲವು ಭಾಗಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ.

ಗುಮ್ಮನಕೊಲ್ಲಿಯ ಬಹುತೇಕ ಭಾಗಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿವೆ. ತಕ್ಷಣ ವಿಷಯ ತಿಳಿದ ಚೆಸ್ಕಾಂನ ಅಧಿಕಾರಿಗಳಾದ ವಿನಯ್, ಬಸವರಾಜು ಮತ್ತು ಸಿಬ್ಬಂದಿ ವರ್ಗದವರು ಸ್ಥಳಕ್ಕಾಗಮಿಸಿ ಕಾರ್ಯಾಚರಣೆ ನಡೆಸಿದರು.

ಸ್ಥಳೀಯರು ಹಲವು ದಿನಗಳಿಂದಲೇ ಈ ಮರಗಳನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದರೂ ಈ ವರೆಗೂ ಕ್ರಮ ಕೈಗೊಂಡಿರಲಿಲ್ಲ ಎಂದು ಗ್ರಾಮದ ಪ್ರಮುಖ ಗಣಿ ಪ್ರಸಾದ್, ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ ಭೇಟಿ ನೀಡಿ ಸ್ಥಳೀಯರ ಜೊತೆ ಚರ್ಚಿಸಿ ರಸ್ತೆ ಬದಿಯಲ್ಲಿ ಅಪಾಯಕಾರಿಯ ಸ್ಥಿತಿಯಲ್ಲಿರುವ ಮರಗಳನ್ನು ಪರಿಶೀಲಿಸಿ ತಕ್ಷಣ ನಾಲ್ಕು ಮರಗಳನ್ನು ತೆರವುಗೊಳಿಸಲು ಉನ್ನತಾಧಿಕಾರಿಗಳ ಜೊತೆ ಸಂಪರ್ಕಿಸಿ ಕ್ರಮಕೈಗೊಂಡರು.