ಸೋಮವಾರಪೇಟೆ, ಏ. 2: ಬೇಳೂರು ಗ್ರಾ.ಪಂ. ಮಾಜಿ ಅಧ್ಯಕ್ಷ, ವಲಯ ಕಾಂಗ್ರೆಸ್ ಮುಖಂಡ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಸಲಹಾ ಸಮಿತಿ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದ ಕಿಬ್ಬೆಟ್ಟ ಗ್ರಾಮದ ಎಂ.ಬಿ. ಮಂದಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದಲ್ಲಿ ಗುಂಪುಗಾರಿಕೆ, ಏಕನಾಯಕತ್ವದ ಕೊರತೆಯಿಂದ ಬೇಸತ್ತು, ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವದಾಗಿ ಮಂದಣ್ಣ ತಿಳಿಸಿದ್ದಾರೆ.

ನೋಟೀಸ್ ಹಿಂಪಡೆಯಲು ಆಗ್ರಹ

*ಸಿದ್ದಾಪುರ: ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿಉತ್ತಪ್ಪ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವದಾಗಿ ಪತ್ರಿಕಾ ಗೋಷ್ಠಿಯಲ್ಲಿ ಹೇಳಿರುವದಕ್ಕೆ ಜಿಲ್ಲಾ ಬಿಜೆಪಿ ಅಧ್ಯಕ್ಷರು ಪಕ್ಷ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ನೋಟೀಸು ಕಳುಹಿಸಿರುವದು ಸರಿಯಲ್ಲ ಇದನ್ನು ವಾಪಸು ಪಡೆಯಬೇಕೆಂದು ಅಭ್ಯತ್‍ಮಂಗಲ ಬಿಜೆಪಿ ಸ್ಥಾನೀಯ ಸಮಿತಿ ಆಗ್ರಹಿಸಿದೆ.

ಮಣಿಉತ್ತಪ್ಪ ಅವರು ಹೋರಾಟಗಾರರಾಗಿದ್ದು, ಜಿ.ಪಂ., ತಾ.ಪಂ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದಲ್ಲದೆ, ಸರಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುತ್ತಿರುವ ಅವರು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವದಾಗಿ ಹೇಳಿರುವದಕ್ಕೆ ನೋಟೀಸು ನೀಡಿರುವದು ಸರಿಯಲ್ಲ. ಕೊಡಗಿನ ಬೇರೆ ಬೇರೆ ಭಾಗಗಳಿಂದಲೂ ಬಿಜೆಪಿ ಸ್ಥಾನೀಯ ಸಮಿತಿಯವರು ಶಾಸಕರುಗಳ ವಿರುದ್ಧ ಅಪಸ್ವರ ಎತ್ತಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಎಲ್ಲರಿಗೂ ಹಕ್ಕು ಇದೆ. ಕೆಲ ಮುಖಂಡರು ಏಕೆ ಬೇಕು ಉಸಾಬರಿ ಎಂದು ಹೇಳಿಕೆ ನೀಡದೆ ಮೌನವಹಿಸಿದ್ದಾಗ ನೈಜ ಸಂಗತಿಯನ್ನು ಮಣಿಉತ್ತಪ್ಪ ಹೇಳಿದಕ್ಕೆ ನೋಟೀಸು ನೀಡಿದ ಕ್ರಮ ಸರಿ ಇಲ್ಲ. ನೋಟೀಸ್ ವಾಪಸ್ ಪಡೆದುಕೊಳ್ಳಬೇಕು, ಇಲ್ಲದಿದ್ದರೆ ಪಕ್ಷಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಅಭ್ಯತ್‍ಮಂಗಲ ಬಿಜೆಪಿ ಬೂತ್ 1ರ ಅಧ್ಯಕ್ಷ ಅನಿಲ್‍ಕುಮಾರ್, ಪ್ರಧಾನ ಕಾರ್ಯದರ್ಶಿ ರಜಿತ್‍ಕುಮಾರ್, ಮಂಜುನಾಥ ಬೂತ್ 2 ರ ಅಧ್ಯಕ್ಷ ವೆಂಕಟೇಶ, ಉಪಾಧ್ಯಕ್ಷ ವಿಶ್ವನಾಥ, ಧರ್ಮ ಆಗ್ರಹಿಸಿದ್ದಾರೆ.

ಕ್ರಮಕ್ಕೆ ಆಗ್ರಹ

*ಸಿದ್ದಾಪುರ: ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡ ದಿನವೇ ಕ್ಯೂರಿಂಗ್ ಆಗುವದಕ್ಕಿಂತ ಮೊದಲು ಆ ರಸ್ತೆಗಾಗಿ ವಾಹನ ಚಾಲಿಸಿ ರಸ್ತೆ ಹಾಳಾಗಲು ಕಾರಣಕರ್ತನಾದ ಗ್ರಾ.ಪಂ. ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಭ್ಯತ್‍ಮಂಗಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅಭ್ಯತ್‍ಮಂಗಲದ ಶಶಿ ಅವರ ಮನೆಯಿಂದ ಒಮನ ಅವರ ಮನೆಯವರೆಗೆ ಕಾಂಕ್ರಿಟ್ ರಸ್ತೆ ನಿರ್ಮಿಸಲಾಗಿತ್ತು. ರಸ್ತೆ ನಿರ್ಮಾಣಗೊಂಡ ನಂತರ ಉಳಿದ ಜೆಲ್ಲಿ ಕಲ್ಲು ಮರಳನ್ನು ಗ್ರಾ.ಪಂ.ಸದಸ್ಯ ದಿನೇಶ ಎಂಬಾತ ವಾಹನದಲ್ಲಿ ತುಂಬಿಸಿ ಕ್ಯೂರಿಂಗ್ ಆಗದ ಕಾಂಕ್ರಿಟ್ ರಸ್ತೆಗಾಗಿ ಮನೆಗೆ ಸಾಗಿಸಿದ್ದಾರೆ. ಇದರಿಂದ ರಸ್ತೆ ಹಾಳಾಗಿದೆ, ಈ ಗ್ರಾ.ಪಂ. ಸದಸ್ಯರÀ ಮೇಲೆ ಕ್ರಮಕೈಗೊಳ್ಳಬೇಕು, ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಬೆಟ್ಟಗೇರಿಯಲ್ಲಿ ಜೆಡಿಎಸ್ ಸಭೆ