ಸೋಮವಾರಪೇಟೆ,ಏ.2: ನಾಲ್ಗುಡಿ ಆನ್‍ಲೈನ್ ರಕ್ತನಿಧಿ ಘಟಕಕ್ಕೆ ಇಲ್ಲಿನ ಪತ್ರಿಕಾ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಗಿದ್ದು, ಇಂಟರ್‍ನೆಟ್ ಮುಖಾಂತರ ರಕ್ತ ದಾನಿಗಳು ಹಾಗೂ ರಕ್ತದ ಅವಶ್ಯವಿರುವ ರೋಗಿಗಳು ಮಾಹಿತಿ ಭರ್ತಿ ಮಾಡಿ ಸೇವೆ ಪಡೆಯಬಹುದಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ. ರವಿಕುಮಾರ್ ಅವರು ಆನ್‍ಲೈನ್ ಲಿಂಕ್ ಅನ್ನು ಮೊಬೈಲ್‍ನಲ್ಲಿ ಶೇರ್ ಮಾಡುವ ಮೂಲಕ ವಿನೂತನ ಯೋಜನೆಗೆ ಚಾಲನೆ ನೀಡಿದ್ದು, ರಕ್ತದಾನಿಗಳು ಹಾಗೂ ರಕ್ತದ ಅವಶ್ಯವಿರುವವರು hಣಣಠಿs://biಣ.ಟಥಿ/2ಟಜಖಿ78ಙವೆಬ್‍ಸೈಟ್ ಗೆ ಹೋಗಿ ತಮ್ಮ ಮಾಹಿತಿಯನ್ನು ಭರ್ತಿ ಮಾಡಬೇಕಿದೆ.

ನೂತನ ಯೋಜನೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಡಾ. ರವಿಕುಮಾರ್, ರಕ್ತವನ್ನು 18 ರಿಂದ 50 ವರ್ಷದೊಳಗಿನವರು ನೀಡಬಹುದಾಗಿದ್ದು, ಕೆಲವೊಮ್ಮೆ ರೋಗಿಗಳು ರಕ್ತಕ್ಕಾಗಿ ಇನ್ನಿಲ್ಲದ ಸಂಕಷ್ಟ ಅನುಭವಿಸುತ್ತಾರೆ. ಮತ್ತೊಬ್ಬರ ಪ್ರಾಣ ಉಳಿಸುವ ಇಂತಹ ಮಹತ್ಕಾರ್ಯದಲ್ಲಿ ಯುವ ಸಮುದಾಯ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಾಲ್ಗುಡಿ ಸಂಸ್ಥೆ ನಿರ್ದೇಶಕ ಚಾಮೇರ ದಿನೇಶ್, ರಕ್ತಕ್ಕೆ ಬದಲಿ ರಕ್ತವೇ ಆಗಿದೆ. ಇದನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಎಲ್ಲರೂ ಜಾತಿ, ಮತ, ಧರ್ಮ, ಲಿಂಗ ತಾರತಮ್ಯವಿಲ್ಲದೇ ರಕ್ತ ನೀಡಬಹುದಾಗಿದೆ. ರಕ್ತದ ಅವಶ್ಯವಿರುವವರ ಸಂಕಷ್ಟವನ್ನು ಬಗೆಹರಿಸುವ ನಿಟ್ಟಿನಲ್ಲಿ ನಾಲ್ಗುಡಿ ಸಂಸ್ಥೆ ಈ ಕಾರ್ಯಕ್ಕೆ ಮುಂದಾಗಿದೆ ಎಂದರು.

ರಾಜ್ಯದ 30 ಜಿಲ್ಲೆ ಮತ್ತು ಎಲ್ಲಾ ತಾಲೂಕುವಾರು ವಿಭಾಗಗಳನ್ನು ಮಾಡಿ ದಾನಿಗಳ ಮಾಹಿತಿಯನ್ನು ವೆಬ್‍ಸೈಟ್‍ನಲ್ಲಿ ದಾಖಲಿಸಲಾಗುವದು. ರಕ್ತದ ಅವಶ್ಯವಿರುವ ರೋಗಿಗಳು ಆನ್‍ಲೈನ್ ಮೂಲಕ ವೆಬ್‍ಸೈಟ್ ಲಿಂಕ್ ಓಪನ್ ಮಾಡಿ ತಮ್ಮ ಮಾಹಿತಿಗಳನ್ನು ತುಂಬಿದರೆ, ಅವರಿಗೆ ಅವಶ್ಯವಿರುವ ರಕ್ತವನ್ನು ಸ್ಥಳೀಯವಾಗಿ ಒದಗಿಸಲಾಗುವದು ಎಂದು ದಿನೇಶ್ ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಸೋಮವಾರಪೇಟೆ ತಾಲೂಕು ಆಸ್ಪತ್ರೆ ಕೇಂದ್ರದಲ್ಲಿ ಬ್ಲಡ್ ಬ್ಯಾಂಕ್ ತೆರೆಯಲು ತಾಲೂಕು ಆರೋಗ್ಯಾಧಿಕಾರಿಗಳು ಕ್ರಮವಹಿಸಬೇಕೆಂದು ಮನವಿ ಮಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕೆ.ಎನ್. ದೀಪಕ್, ವಿವೇಕಾನಂದ ಯುವ ಬ್ರಿಗೇಡ್‍ನ ಸಂಚಾಲಕ ಅಭಿಷೇಕ್, ಕರವೇ ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಸುರೇಶ್ ಮಾತನಾಡಿ, ಸಂಸ್ಥೆಯ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡಲಾಗುವದು ಎಂದರು. ಸೂರ್ಲಬ್ಬಿ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.