ಮಡಿಕೇರಿ, ಏ. 1: ಈ ತಿಂಗಳ ಮೊದಲ ದಿನವಿಂದು ಸಾಮಾನ್ಯವಾಗಿ ಒಬ್ಬರಿಗೊಬ್ಬರು ‘ಏಪ್ರಿಲ್ ಫೂಲ್’ ನೊಂದಿಗೆ ಮುಠ್ಠಾಳರನ್ನಾಗಿಸುವ ದೃಶ್ಯ ಕಂಡುಬಂದರೆ, ಜಿಲ್ಲಾ ಕೇಂದ್ರ ಮಡಿಕೇರಿಯ ರಾಜಾಸೀಟ್ ಮಾರ್ಗದಲ್ಲಿ ತೆರಳಲಿದ್ದ ವಾಹನ ಚಾಲಕರಿಗೆ ಒಂದು ರೀತಿ ನಿರಾಳವೆನಿಸಿದ್ದು ವಾಸ್ತವ. ಕಾರಣ ಇದುವರೆಗೆ

(ಮೊದಲ ಪುಟದಿಂದ) ನಗರಸಭೆ ಮುಂಭಾಗದ ಮಂಗೇರಿರ ಮುತ್ತಣ್ಣ ವೃತ್ತದ ಮೂಲಕ ರಾಜಾಸೀಟ್ ಮಾರ್ಗವಾಗಿ ಕ್ರಮಿಸುತ್ತಿದ್ದ ಪ್ರತಿ ವಾಹನಗಳನ್ನು ತಡೆದು ಅಲ್ಲಿ ನಿಲುಗಡೆಗೊಳಿಸದಿದ್ದರೂ ಶುಲ್ಕ ವಸೂಲಿ ಮಾಡಲಾಗುತ್ತಿತ್ತು. ಈ ಬಗ್ಗೆ ಸಾರ್ವಜನಿಕರ ಸಹಿತ ಅನೇಕರು ಅಸಮಾಧಾನ ವ್ಯಕ್ತಪಡಿಸುತ್ತಿ ದ್ದರು. ಸ್ವತಃ ಜಿಲ್ಲಾ ಪೊಲೀಸ್ ಅಧೀಕ್ಷಕರು ಬಹಿರಂಗವಾಗಿಯೇ ಇಂತಹ ವಸೂಲಿಗೆ ಕಡಿವಾಣ ಹಾಕುವಂತೆ ನಗರಸಭೆಗೆ ತಿಳಿಹೇಳಿ ದ್ದರು. ಈ ಎಲ್ಲವನ್ನು ಗಂಭೀರವಾಗಿ ಪರಿಗಣಿಸಿದ ನಗರಸಭಾ ಆಡಳಿತ ಕಳೆದ ಆಡಳಿತ ಮಂಡಳಿ ಸಭೆಯಲ್ಲಿ ಮಾ.31ರ ಬಳಿಕ ಶುಲ್ಕ ವಸೂಲಿ ಮೊಟಕುಗೊಳಿಸುವದಾಗಿ ನಿರ್ಣಯ ಕೈಗೊಂಡಿತ್ತು.

ಆ ಪ್ರಕಾರ ಇಂದು ನಗರದ ರಾಜಾಸೀಟ್ ಮಾರ್ಗದಲ್ಲಿ ವಸೂಲಿ ಸ್ಥಗಿತಗೊಳ್ಳುವದರೊಂದಿಗೆ ಭಾನುವಾರದ ರಜಾದಿನದಂದು ಕೂಡ ಯಾವದೇ ಕಿರಿಕಿರಿಯಿಲ್ಲದೆ ಈ ರಸ್ತೆಯಲ್ಲಿ ಸಹಜವಾಗಿ ವಾಹನಗಳ ಸಂಚಾರ ಗೋಚರಿಸತೊಡಗಿತ್ತು. ಸಂಚಾರ ಠಾಣೆ ಪೊಲೀಸ್ ಸಿಬ್ಬಂದಿ ಕರ್ತವ್ಯದೊಂದಿಗೆ ಪ್ರವಾಸಿಗರಿಗೆ ಮಾರ್ಗಸೂಚಿಸುತ್ತಿದ್ದ ಸಾಮಾನ್ಯ ದೃಶ್ಯ ಎದುರಾಯಿತು.ವಾಹನ ನಿಲುಗಡೆ ಶುಲ್ಕ ಸ್ಥಗಿತದ ಕುರಿತು ಪ್ರತಿಕ್ರಿಯಿಸಿದ ನಗರಸಭಾ ಆಯುಕ್ತೆ ಶುಭಾ ಅವರು ಗುತ್ತಿಗೆ ದಾರರು ಯಾವದೇ ನಿಯಂತ್ರಣವಿಲ್ಲದೆ ಪ್ರವಾಸಿಗರಿಂದ ಭಾರೀ ಪ್ರಮಾಣದ ಶುಲ್ಕ ವಸೂಲಿ ಮಾಡುತ್ತಿದ್ದುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇದನ್ನು ಸಮರ್ಪಕವಾಗಿ ನಿಯಂತ್ರಿಸಿ ನಿಲುಗಡೆ ವ್ಯವಸ್ಥೆಯನ್ನು ಪ್ರವಾಸಿಗರಿಗೆ ಕಿರುಕುಳವಾಗದಂತೆ ಜಾರಿಗೊಳಿಸುವ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಶುಲ್ಕ ವಸೂಲಾತಿಯನ್ನು ಸ್ಥಗಿತಗೊಳಿಸಲಾಗಿದೆ.

ಈ ಬಗ್ಗೆ ಚರ್ಚಿಸಿ ದ್ವಿಚಕ್ರ ಮತ್ತು ಚತುಷ್ಕಕ್ರ ವಾಹನಗಳಿಗೆ ಪ್ರತ್ಯೇಕವಾಗಿ ಫಲಕಗಳನ್ನು ಅಳವಡಿಸುವ ಮೂಲಕ ಸದ್ಯದಲ್ಲಿಯೇ ಸುಗಮ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುವದೆಂದು ಅವರು ‘ಶಕ್ತಿ’ಗೆ ಮಾಹಿತಿಯಿತ್ತರು.