ಪೆಟ್ರೋಲ್-ಡೀಸೆಲ್ ಬೆಲೆ ದಾಖಲೆ ಏರಿಕೆ

ನವದೆಹಲಿ, ಏ. 1: ದೇಶಾದ್ಯಂತ ನಿತ್ಯ ತೈಲ ಬೆಲೆಗಳನ್ನು ಪರಿಷ್ಕರಿಸಲಾಗುತ್ತಿದ್ದು, ಇಂದೂ ಸಹ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆಯಾಗುವ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಕಳೆದ 4 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಬೆಲೆ ತಲುಪಿದೆ. ಡೀಸೆಲ್ ಬೆಲೆ ಸಹ ಹೊಸ ದಾಖಲೆ ಬರೆದಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಬೆಲೆ 18 ಪೈಸೆ ಏರಿಕೆಯಾಗುವದರೊಂದಿಗೆ ರೂ. 73.73 ತಲುಪಿದೆ. ಡೀಸೆಲ್ ಬೆಲೆಯೂ 26 ಪೈಸೆ ಹೆಚ್ಚಳವಾಗುವದರೊಂದಿಗೆ ಸಾರ್ವಕಾಲಿಕ ದಾಖಲೆ ಬರೆದಿದ್ದು, 2014ರ ಸೆಪ್ಟೆಂಬರ್ 14 ರಂದು ಪೆಟ್ರೋಲ್ ಲೀಟರ್‍ಗೆ ರೂ. 76.06 ಆಗಿತ್ತು. ನಂತರದಲ್ಲಿ ಇದಕ್ಕಿಂತ ಕಡಿಮೆ ಬೆಲೆ ಇತ್ತಾದರೂ, ಇಷ್ಟೊಂದು ದುಬಾರಿ ಆಗಿರಲಿಲ್ಲ. ಭಾನುವಾರ ರೂ. 73.73 ತಲಪುವದರೊಂದಿಗೆ ಪೆಟ್ರೋಲ್ ಬೆಲೆ 4 ವರ್ಷಗಳಲ್ಲೇ ಅತಿ ಹೆಚ್ಚಿನ ಬೆಲೆ ದಾಖಲಿಸಿದೆ. ಅದೇ ರೀತಿ ಡೀಸೆಲ್ ಬೆಲೆ ಲೀಟರ್‍ಗೆ ರೂ. 64.22 ತಲಪಿದ್ದು ಇದುವರೆಗಿನ ದಾಖಲೆಯಾಗಿತ್ತು. ಈಗ ಲೀಟರ್ ರೂ. 64.58 ತಲಪುವದರೊಂದಿಗೆ ಹೊಸ ದಾಖಲೆ ಬರೆದಿದೆ.

ಎನ್‍ಕೌಂಟರ್‍ನಲ್ಲಿ 8 ಉಗ್ರರ ಹತ್ಯೆ

ಶ್ರೀನಗರ, ಏ. 1: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಒಟ್ಟು 8 ಮಂದಿ ಉಗ್ರರು ಸಾವನ್ನಪ್ಪಿದ್ದು, ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಕಾಶ್ಮೀರದ ಪೆÇಲೀಸ್ ವರಿಷ್ಠಾಧಿಕಾರಿ ಎಸ್.ಪಿ. ವೈದ್ ತಿಳಿಸಿದ್ದಾರೆ. ಶ್ರೀನಗರದಲ್ಲಿ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಪಿಯಾನ್ ಎನ್‍ಕೌಂಟರ್‍ನಲ್ಲಿ ಒಟ್ಟು 7 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಅಂತೆಯೇ ಇಬ್ಬರು ಯೋಧರು ಹುತಾತ್ಮರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಅಂತೆಯೇ ಇಂದು ಸಾವನ್ನಪ್ಪಿದ 7 ಉಗ್ರರ ಪೈಕಿ ಇಬ್ಬರು ಉಗ್ರರು ಈ ಹಿಂದೆ ಕೊಲೆಯಾಗಿದ್ದ ಲೆಫ್ಟಿನೆಂಟ್ ಉಮ್ಮರ್ ಫಯಾಜ್ ಅವರ ಕೊಲೆಯಲ್ಲಿ ಪಾಲ್ಗೊಂಡವರಾಗಿದ್ದರು ಎಂದು ಹೇಳಿದರು.

ಅಕ್ರಮ ಪತ್ತೆಗೆ ಆಧಾರ್ ಸಹಕಾರಿ

ನವದೆಹಲಿ, ಏ. 1: ಅನೇಕ ಹಣಕಾಸು ವಹಿವಾಟು ಮತ್ತು ಆಸ್ತಿ ವ್ಯವಹಾರಕ್ಕೆ ಆಧಾರ್ ಸಂಖ್ಯೆ ಜೋಡಣೆ ಕಡ್ಡಾಯವಾಗಿರುವಾಗ ಭ್ರಷ್ಟ ಅಧಿಕಾರಿಗಳ ಅಕ್ರಮ ಸಂಪತ್ತುಗಳನ್ನು ಪತ್ತೆಹಚ್ಚಲು ಪರಿಣಾಮಕಾರಿಯಾಗಿ ಬಳಕೆ ಮಾಡಬಹುದು ಎಂದು ಕೇಂದ್ರ ಜಾಗೃತ ಆಯೋಗ ತಿಳಿಸಿದೆ. ವ್ಯಕ್ತಿಯ ಪ್ಯಾನ್ ಸಂಖ್ಯೆ ಮೂಲಕ ಮತ್ತು ಆಧಾರ್ ಸಂಖ್ಯೆ ಮೂಲಕ ಮಾಹಿತಿಗಳು ಲಭ್ಯವಾಗುವದರಿಂದ ಬಳಕೆದಾರರು ನಡೆಸಿರುವ ಎಲ್ಲಾ ಹಣಕಾಸಿನ ವಹಿವಾಟುಗಳು ಸಂಪೂರ್ಣವಾಗಿ ದೊರಕುತ್ತವೆ ಎಂದು ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಹೇಳುತ್ತದೆ. ನಾವು ಪರಿಕಲ್ಪನೆಯ ದಾಖಲೆಗಳನ್ನು ಸಿದ್ದಪಡಿಸಿದ್ದೇವೆ. ಕಾರ್ಯನಿರ್ವಹಣೆಯ ವಿಧಾನಗಳನ್ನು ತಯಾರು ಮಾಡುವ ಯೋಜನೆಯಿದ್ದು ಮತ್ತು ಸಾಧ್ಯವಾದರೆ ಕೆಲವು ಸಾಫ್ಟ್‍ವೇರ್‍ಗಳನ್ನು ಸಿದ್ದಪಡಿಸಿ ತನಿಖೆ ನಡೆಸಲು ಒಮ್ಮೆ ನಿರ್ಧರಿಸಿದರೆ ಆಧಾರ್ ಮೂಲಕ ನಾವು ಬೇರೆ ಇಲಾಖೆಗಳಿಂದ ಅಗತ್ಯ ವಿವರಗಳನ್ನು ಪಡೆಯಬಹುದು ಎಂದು ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ.ವಿ. ಚೌಧರಿ ತಿಳಿಸಿದ್ದಾರೆ.

ಮಂಗ ಹೊತ್ತೊಯ್ದಿದ್ದ ಮಗು ಸಾವು

ಭುವನೇಶ್ವರ್, ಏ. 1: ಒಡಿಶಾದ ಕಠಕ್ ಜಿಲ್ಲೆಯ ತಲಬಸ್ತಾ ಗ್ರಾಮದಲ್ಲಿ ಮಂಗಗಳು 17 ದಿನದ ಮಗುವೊಂದನ್ನು ನಿನ್ನೆ ಹೊತ್ತೊಯ್ದಿದ್ದು, ಮಗು ಇಂದು ಬಾವಿಯೊಂದರಲ್ಲಿ ಪತ್ತೆಯಾಗಿದೆ. ರಾಮಕೃಷ್ಣ ನಾಯಕ್ ಅವರ 17 ದಿನದ ಗಂಡು ಮಗುವನ್ನು ನಿನ್ನೆ ಬೆಳಿಗ್ಗೆ ಮನೆಯಲ್ಲಿ ಮಲಗಿಸಿದ್ದಾಗ ಮಂಗಗಳು ಹೊತ್ತೊಯ್ದಿದ್ದವು. ಮಂಗಗಳು ಮಗುವನ್ನು ಹೊತ್ತೊಯ್ಯುತ್ತಿರುವದನ್ನು ಮಗುವಿನ ಅಮ್ಮ ನೋಡಿದ್ದರೂ ಏನೂ ಮಾಡಲಾಗಲಿಲ್ಲ. ತಾಯಿ ಕೂಗಿಕೊಂಡಿದ್ದನ್ನು ಕೇಳಿ ಗ್ರಾಮಸ್ಥರು ಓಡಿ ಬಂದರೂ ಪ್ರಯೋಜನವಾಗಲಿಲ್ಲ. ಕೊನೆಗೆ ಅರಣ್ಯಾಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಅಧಿಕಾರಿಗಳಿಗೆ ದೂರು ನೀಡಿದ್ದರು. ಇಂದು ಹುಡುಕಾಟ ಮುಂದುವರಿಸಿದಾಗ ನಾಯಕ್ ಅವರ ಮನೆಯ ಬಳಿ ಇರುವ ಬಾವಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ.

ಭಾರತದಲ್ಲಿ ಕಾನೂನಿನ ಚೌಕಟ್ಟಿನ ಕೊರತೆ

ನವದೆಹಲಿ, ಏ. 1: ಚೀನಾದ ನಂತರ ಜಗತ್ತಿನಲ್ಲಿ ಅತಿ ಹೆಚ್ಚು ಇಂಟರ್‍ನೆಟ್ ಬಳಕೆ ಮಾಡುವವರು ಭಾರತೀಯರಾಗಿದ್ದು 462.12 ದಶಲಕ್ಷ ಮಂದಿ ಇಂಟರ್‍ನೆಟ್ ಬಳಸುತ್ತಿದ್ದಾರೆ. ಆದರೆ ದತ್ತಾಂಶಗಳ ರಕ್ಷಣೆ ಮತ್ತು ಖಾಸಗಿತನಕ್ಕೆ ಭಾರತದಲ್ಲಿ ಕಾನೂನಿನ ಚೌಕಟ್ಟಿನ ಕೊರತೆಯಿದ್ದು ಪ್ರಸ್ತುತ ಇರುವ ಕಾನೂನು ಸೂಕ್ತವಾಗಿಲ್ಲ ಎಂದು ಸೈಬರ್ ಭದ್ರತೆ ತಜ್ಞರು ತಿಳಿಸಿದ್ದಾರೆ. ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಫೇಸ್‍ಬುಕ್ ಮೂಲಕ ಬಳಕೆದಾರರ ದತ್ತಾಂಶಗಳನ್ನು ಮತ್ತು ಖಾಸಗಿ ವಿಷಯಗಳನ್ನು ಕದಿಯಲಾಗುತ್ತಿದೆ ಎಂದು ಬಿಜೆಪಿ ಕಾಂಗ್ರೆಸ್ ವಿರುದ್ಧ ಆರೋಪಿಸಿದ್ದು, ಇತ್ತೀಚಿನ ಬೆಳವಣಿಗೆ ಬಳಕೆದಾರರು ತಮ್ಮ ದೈನಂದಿನ ಸಾಮಾಜಿಕ ಮಾಧ್ಯಮದ ಬಳಕೆಯನ್ನು ಮರು ಪರೀಕ್ಷಿಸುವ ಪರಿಸ್ಥಿತಿ ಬಂದಿದೆ.

ಸಚಿವ ಎ. ಮಂಜುಗೆ ಚುನಾವಣಾಧಿಕಾರಿ ನೋಟಿಸ್

ಹಾಸನ, ಏ. 1: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜುಗೆ ಹಾಸನ ಜಿಲ್ಲಾ ಚುನಾವಣಾ ಅಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಖಾಸಗಿ ವ್ಯಕ್ತಿಗಳು ಕಾರ್ಯನಿರ್ವಹಿಸುತ್ತಿರುವದು ಗಮನಕ್ಕೆ ಬಂದ ಹಿನ್ನೆಲೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜುಗೆ ಜಿಲ್ಲಾ ಚುನಾವಣಾಧಿಕಾರಿ ರೋಹಿಣಿ ಸಿಂಧೂರಿ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಲೋಕೋಪಯೋಗಿ ಇಲಾಖೆ ಕಟ್ಟಡ ಬಳಕೆಗೆ ಲಭ್ಯವಾಗಿದ್ದು ಹೇಗೆ ಎಂದು ಬೆಳಿಗ್ಗೆ ಹನ್ನೊಂದರೊಳಗೆ ಪ್ರತಿಕ್ರಿಯೆ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಪ್ರತ್ಯೇಕ ನೋಟಿಸ್ ಜಾರಿಗೊಳಿಸಲಾಗಿದೆ. ಮೂಲಗಳ ಪ್ರಕಾರ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ಅವರ ಕಚೇರಿಯಲ್ಲಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಎಷ್ಟೇ ಪ್ರಯತ್ನಿಸಿದರೂ ಕಚೇರಿ ಬಾಗಿಲು ತೆರೆಯದ ಹಿನ್ನೆಲೆ ಸಚಿವರ ಕಚೇರಿ ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮೂವರು ಸಿಬ್ಬಂದಿ ಕೆಲಸ ಮಾಡುತ್ತಿದ್ದರು, ಕೆಲಸದ ವೇಳೆ ಮುಂಬಾಗಿಲಿಗೆ ಬೀಗ ಹಾಕಲಾಗಿತ್ತು.

ಸೋರಿಕೆ ಬಗ್ಗೆ ಪ್ರಧಾನಿಗೆ ಪತ್ರ ಬರೆಯಲಾಗಿತ್ತು

ಲುಧಿಯಾನ, ಏ. 1: ಸಿಬಿಎಸ್‍ಇ 12ನೇ ತರಗತಿಯ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾರ್ಚ್ 17 ರಂದು ಪತ್ರ ಬರೆದು ತಿಳಿಸಿದ್ದರೂ ಅವರು ಯಾವದೇ ಕ್ರಮ ಕೈಗೊಂಡಿಲ್ಲ ಎಂದು ಪಂಜಾಬ್‍ನ ವಿದ್ಯಾರ್ಥಿನಿ ಜಾಹ್ನವಿ ಬೆಹಲ್ ದೂರಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ತಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೆ. ಆದರೆ ಯಾವದೇ ಕ್ರಮ ತೆಗೆದುಕೊಂಡಿಲ್ಲ, ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದವರನ್ನು ಬಂಧಿಸಬೇಕು ಎಂದು ಜಾಹ್ನವಿ ಹೇಳಿರುವದಾಗಿ ಎಎನ್‍ಐ ಸುದ್ದಿಸಂಸ್ಥೆ ವರದಿ ಮಾಡಿದೆ. ವಾಟ್ಸ್ ಆಪ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ ಜನರ ಬಗ್ಗೆ ನಾವು ಪೆÇಲೀಸರಿಗೆ ದೂರು ನೀಡಿದರೂ ಅವರು ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಜಾಹ್ನವಿ ಹೇಳಿದ್ದಾರೆ. 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಈ ವಿಷಯದ ಮರು ಪರೀಕ್ಷೆ ತಾ. 25 ರಂದು ನಡೆಯಲಿದೆ.

ಖ್ಯಾತ ನಿರ್ದೇಶಕ ಸಿ.ವಿ. ರಾಜೇಂದ್ರನ್ ವಿಧಿವಶ

ಚೆನ್ನೈ, ಏ. 1: ಖ್ಯಾತ ನಿರ್ದೇಶಕ ಸಿ.ವಿ. ರಾಜೇಂದ್ರನ್ (81) ಅವರು ಭಾನುವಾರ ವಿಧಿವಶರಾಗಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ ಕುಮಾರ್ ಅಭಿನಯದ ತ್ರಿಮೂರ್ತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ್ದ ರಾಜೇಂದ್ರನ್ ಅವರು ದೀರ್ಘಾಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಮಿಯಾಟ್ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಬೆಳಿಗ್ಗೆ 8 ಗಂಟೆಗೆ ಕೊನೆಯುಸಿರೆಳೆದಿದ್ದಾರೆಂದು ವರದಿಗಳು ತಿಳಿಸಿವೆ. ರಾಜೇಂದ್ರ ಅವರು ಪತ್ನಿ ಜಾನಕಿ ರಾಜೇಂದ್ರನ್, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಪ್ರಸ್ತುತ ರಾಜೇಂದ್ರ ಅವರ ಪುತ್ರ ಅಮೇರಿಕದಲ್ಲಿದ್ದು, ಭಾರತಕ್ಕೆ ಬಂದ ಬಳಿಕ ಅಂತಿಮ ಕಾರ್ಯಗಳು ನಡೆಯಲಿವೆ ಎಂದು ವರದಿಗಳು ತಿಳಿಸಿವೆ.