ಸುಂಟಿಕೊಪ್ಪ, ಏ. 1: ಸುಂಟಿಕೊಪ್ಪ ಹೊಸಕೋಟೆ ಬ್ಯಾಂಕುಗಳ ಎಟಿಎಂಗಳಿಗೆ ಹಣ ತುಂಬಿಸುವ ಕೆಲಸಕ್ಕೆ ನಿಯುಕ್ತಿಗೊಂಡಿದ್ದ ಯುವಕರೇ ಹಣ ಲಪಟಾಯಿಸಿ ಸಿಕ್ಕಿ ಬಿದ್ದ ಘಟನೆ ನಡೆದಿದೆ.ಏಳನೇ ಹೊಸಕೋಟೆಯ ತೊಂಡೂರು ಗ್ರಾಮದ ನಿವಾಸಿಗಳಾದ ಬಿ.ಈ. ಪ್ರಕಾಶ್ ಪೂಜಾರಿ, ಕೆ.ಎ. ಉಮೇಶ, ಬಿ.ಕೆ. ಅಬ್ದುಲ್ ಸಲಾಂ, ಕುಶಾಲನಗರ ಸಮೀಪದ ಮದ್ಲಾಪುರದ ಸೀಗೆಹೊಸೂರು ಗ್ರಾಮದ ನಿವಾಸಿ ರವಿ ವಿ.ಪಿ. ಬಂಧಿತ ಆರೋಪಿಗಳು.ರೈಟರ್ ಸೇಫ್ ಗಾರ್ಡ್ ಪ್ರೈ.ಲಿ. ಮೈಸೂರು ಶಾಖೆಯ ಅಧೀನದಲ್ಲಿ ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಏಳನೇ ಹೊಸಕೋಟೆಯ ಕಾರ್ಪೋರೇಷನ್ ಬ್ಯಾಂಕಿನ ಎಟಿಎಂಗೆ ಹಣ ತುಂಬುವ ಕೆಲಸಕ್ಕೆ ಪ್ರಕಾಶ್ ಪೂಜಾರಿ ಮತ್ತು ಉಮೇಶ್, ಅದೇ ರೀತಿ ಸುಂಟಿಕೊಪ್ಪ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂಗೆ ಹಣ ತುಂಬಲು ಕೆ.ಎ, ಅಬ್ದುಲ್ ಸಲಾಂ, ರವಿ ವಿ.ಪಿ ಇವರುಗಳನ್ನು ನೇಮಿಸಲಾಗಿತ್ತು. ಅದರಂತೆ ಅವರುಗಳು ತಮಗೆ ನೀಡಿದ್ದ ಹಣದೊಂದಿಗೆ ಎಟಿಎಂಗೆ ಬಂದು ಹಣವನ್ನು ತುಂಬಿಸಿ ತೆರಳಿದ್ದಾರೆ.

ಆದರೆ ಮೈಸೂರು ಶಾಖೆಯ ವ್ಯವಸ್ಥಾಪಕ ಎಂ. ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ಮಲ್ಲೇಶ ಅವರು ಅನಿರೀಕ್ಷಿತವಾಗಿ ಈ 2 ಬ್ಯಾಂಕುಗಳಿಗೆ ಮಾ.30ರಂದು ಭೇಟಿ ನೀಡಿ ಎಟಿಎಂ ಯಂತ್ರವನ್ನು ಪರಿಶೀಲಿಸಿದಾಗ ಏಳನೇ ಹೊಸಕೋಟೆಯ ಕಾರ್ಪೋರೇಷನ್ ಬ್ಯಾಂಕಿನ ಶಾಖೆಯ ಎಟಿಎಂನಲ್ಲಿ ರೂ. 12,54,000 ಮೊತ್ತದ ಹಣ ಮತ್ತು ಸುಂಟಿಕೊಪ್ಪದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯ ಎಟಿಎಂನಲ್ಲಿ ರೂ. 1,01,500 ಮೊತ್ತದ ಹಣ ಕಡಿಮೆ ಇರುವದು ಬೆಳಕಿಗೆ ಬಂದಿತು.

ಕೂಡಲೇ ವಿಷಯವರಿತ ದಿಲೀಪ್ ಕುಮಾರ್ ಕಂಪನಿಯ ರಾಜ್ಯ ಮೇಲ್ವಿಚಾರಕ ಇಂದ್ರಕುಮಾರ ಅವರಿಗೆ ಮಾಹಿತಿ ನೀಡಿ ನಂತರ ಅವರು ಶನಿವಾರ ರಾತ್ರಿ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ದೂರನ್ನು ದಾಖಲಿಸಿಕೊಂಡ ಸುಂಟಿಕೊಪ್ಪ ಪೊಲೀಸ್ ಠಾಣೆಯ ಪಿಎಸ್‍ಐ ಜಯರಾಮ್ ಕೂಡಲೇ ಕಾರ್ಯಪ್ರವೃತರಾಗಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಿಚಾರಣೆ ನಡೆಸಿದಾಗ ಆರೋಪಿUಳು ಹಣ ತೆಗೆದಿರುವ ಬಗ್ಗೆ ಒಪ್ಪಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಎಎಸ್‍ಐ ಶಿವಪ್ಪ. ಸಿಬ್ಬಂದಿಗಳಾದ ಖಾದರ್, ದಿನೇಶ್, ಚಾಲಕ ರವಿ ಇದ್ದರು.