ಮಡಿಕೇರಿ, ಮಾ.30 : ಅಲ್ ಅಮೀನ್ ಸಂಸ್ಥೆ ವತಿಯಿಂದ ಏ.1 ರಂದು (ನಾಳೆ) ನಗರದ ಕಾವೇರಿ ಹಾಲ್‍ನಲ್ಲಿ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಲಿದೆ.ಪೂರ್ವಾಹ್ನ 11 ಗಂಟೆಗೆ ಎಮ್ಮೆಮಾಡಿನ ಧರ್ಮ ಗುರು ಸೆಯ್ಯದ್‍ಖಾಲಿದ್ ತಂಙಳ್ ನೇತೃತ್ವದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಎಫ್.ಎ. ಮೊಹಮದ್ ಹಾಜಿ ವಹಿಸಲಿದ್ದಾರೆ.
18 ವರ್ಷ ತುಂಬಿದ ಹೆಣ್ಣು ಹಾಗೂ 21 ವರ್ಷ ತುಂಬಿದ ಗಂಡಿನ ದೃಢೀಕರಣ ಪತ್ರಗಳ ಆಧಾರದಲ್ಲಿ ಸಮಿತಿಯ ನಿಬಂಧನೆಗಳಿಗೆ ಅನುಗುಣವಾಗಿ ವಧು, ವರರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಅನೇಕ ಅರ್ಜಿಗಳು ಬಂದಿದ್ದು, 15 ಅರ್ಹ ಅರ್ಜಿಗಳನ್ನು ಕ್ರಮಬದ್ದವಾಗಿ ಸ್ಪೀಕರಿಸಿ ಆಯ್ಕೆ ಮಾಡಲಾಗಿದೆ ಎಂದು ಸಮಿತಿಯ ಪ್ರಮುಖ ಎಂ.ಇ. ಮಹಮ್ಮದ್ ತಿಳಿಸಿದ್ದಾರೆ.
ವಿವಾಹದಲ್ಲಿ ವಧುವಿಗೆ ತಲಾ 5 ಪವನ್ ಚಿನ್ನದ ಆಭರಣ ಹಾಗೂ ವಧು ವರರಿಗೆ ಉಡುಪು ಮತ್ತು ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ದಾನಿಗಳ ಸಹಕಾರ ದಿಂದ ಕೊಡಗಿನ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಕನ್ಯೆಯರ ವಿವಾಹವನ್ನು ಕಳೆದ 15 ವರ್ಷಗಳಿಂದ ಉಚಿತವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅಲ್ ಅಮೀನ್ ಸಮಿತಿ ಇದುವರೆಗೆ 317 ಬಡ ಹಾಗೂ ಅನಾಥ ಹೆಣ್ಣು ಮಕ್ಕಳ ವಿವಾಹವನ್ನು ನಡೆಸಿ ಕೊಂಡು ಬಂದಿದ್ದು, ಈ ಬಾರಿ 15 ಜೋಡಿಯ ವಿವಾಹ ನಡೆಸುತ್ತಿರುವ ದಾಗಿ ಎಂ.ಇ.ಮಹಮ್ಮದ್ ತಿಳಿಸಿದ್ದಾರೆ.