ಮಡಿಕೇರಿ, ಮಾ. 29: ಬಲಮುರಿಯಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮೇಕೇರಿ ಶಕ್ತಿನಗರದ ನಿವಾಸಿ ಎನ್.ಸಿ. ಗಣೇಶ್ ಅವರ ಸಾವು ಅಸ್ವಾಭಾವಿಕವಾದುದಲ್ಲ. ಇದು ಕೊಲೆ ಎಂದು ಆರೋಪಿಸಿರುವ ಮೃತರ ಪತ್ನಿ ನಳಿನಾಕ್ಷಿ ಹಾಗೂ ಕೊಡಗು ಜಿಲ್ಲಾ ಮರಾಠಿ ಸಂಘದ ಪದಾಧಿಕಾರಿಗಳು, ಈ ಕುರಿತು ಸಮಗ್ರ ತನಿಖೆ ನಡೆಸಿ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮರಾಠಿ ಸಂಘದ ಅಧ್ಯಕ್ಷ ಎಂ.ಎಂ. ಪರಮೇಶ್ವರ ಹಾಗೂ ಮೃತರ ಪತ್ನಿ ಎಂ.ಜಿ. ನಳಿನಾಕ್ಷಿ ಅವರುಗಳು, ಗಣೇಶ್ ಅವರು ಬಲಮುರಿಯಲ್ಲಿ ಟಿಪ್ಪರ್ ಲಾರಿಯಲ್ಲಿ ಕಳೆದ ಐದು ವರ್ಷಗಳಿಂದ ಚಾಲಕರಾಗಿ ದುಡಿಯುತ್ತಿದ್ದರು.

ಕಳೆದ 5-6 ತಿಂಗಳುಗಳಿಂದ ಟಿಪ್ಪರ್ ಮಾಲೀಕರು ಗಣೇಶ್ ಅವರಿಗೆ ವೇತನ ನೀಡಿರಲಿಲ್ಲ. ಈ ಹಿಂದೆ ಹಣ ಕೇಳಿದ್ದಕ್ಕೆ ಹಲ್ಲೆ ಮಾಡಿದ್ದರು. ಇತ್ತೀಚೆಗೆ ಅವರನ್ನು ಬಲವಂತವಾಗಿ ಕೆಲಸಕ್ಕೆ ಕರೆದೊಯ್ದಿದ್ದರು. ಇದನ್ನು ಗಮನಿಸಿದಾಗ ಮಾಲೀಕರ ಬಗ್ಗೆ ಸಂಶಯ ಮೂಡುತ್ತಿದೆ ಎಂದರು. ನದಿಯಲ್ಲಿ ಪತ್ತೆಯಾದ ಶವದ ಮೇಲೆ ಹಲ್ಲೆ ನಡೆಸಿದ ಗುರುತುಗಳು ಕಂಡು ಬಂದಿದ್ದು, ಇದೀಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಪ್ರಮುಖರಾದ ಎನ್.ಎ. ಕೃಷ್ಣಪ್ಪ, ಎನ್.ಕೆ. ಪುಷ್ಪಾ, ಎಂ.ಟಿ. ನವೀನ್ ಹಾಗೂ ಎನ್.ಕೆ. ರಾಮಣ್ಣ ಹಾಜರಿದ್ದರು.