ವೀರಾಜಪೇಟೆ: ವೀರಾಜಪೇಟೆ ಸಮೀಪದ ಹೆಗ್ಗಳ ಗ್ರಾಮದ ಅಯ್ಯಪ್ಪ ಭಗವತಿ ದೇವಸ್ಥಾನದ ಅಯ್ಯಪ್ಪ ಶಾಸ್ತಾವ್ ದೇವಾಲಯದ ನವೀಕರಣ ಬ್ರಹ್ಮಕಲಶೋತ್ಸವ ಏ. 5 ರಿಂದ 7 ರವರೆಗೆ ಸಾಂಪ್ರದಾಯಿಕವಾಗಿ ನಡೆಯಲಿದೆ ಎಂದು ದೇವಾಲಯ ಸಮಿತಿಯ ಅಧ್ಯಕ್ಷ ಅಮ್ಮಣಕುಟ್ಟಂಡ ಜಿ. ಬೋಪಣ್ಣ ತಿಳಿಸಿದರು..

ಹೆಗ್ಗಳದ ಅಯ್ಯಪ್ಪ ಭಗವತಿ ದೇವಾಲಯ ಸಮಿತಿ ವತಿಯಿಂದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೋಪಣ್ಣ ಅವರು, ಸುಮಾರು 300 ವರ್ಷಗಳ ಇತಿಹಾಸವಿರುವ ಅಯ್ಯಪ್ಪ ಶಾಸ್ತಾವ್ ದೇವರು ಶತಮಾನಗಳ ಹಿಂದೆಯೇ ಕೇರಳದ ಬೈತೂರಿನಿಂದ ಬಂದು ಗಡಿ ಭಾಗವಾದ ಹೆಗ್ಗಳದ ಚೌರಿಮಲೆಯ ಬೆಟ್ಟಕ್ಕೆ ಆಗಮಿಸಿ, ಹೆಗ್ಗಳ ಭಗವತಿ ದೇವಾಲಯದ ಎದುರು ಕಾಡಿನಲ್ಲಿ ನೆಲೆನಿಂತ ಅಯ್ಯಪ್ಪ ಶಾಸ್ತಾವ್ ದೇವರಿಗೆ ಹಿಂದೆ ಕಿರಿದಾದ ಕಟ್ಟಡದ ದೇವಾಲಯ ಆಕಾರದ ಗೋಪುರದಲ್ಲಿ ಪೂಜೆ ಸಲ್ಲಿಸಲಾಗುತ್ತಿತ್ತು. ಕೆಲವು ತಿಂಗಳುಗಳ ಹಿಂದೆ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಸಮಿತಿಯನ್ನು ರಚಿಸಿ ಶಿಥಿಲಗೊಂಡಿದ್ದ ದೇವಾಲಯವನ್ನು ಕೆಡವಿ ಈಗ ಜೀರ್ಣೋದ್ಧಾರಗೊಂಡ ನೂತನ ದೇವಾಲಯಕ್ಕೆ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಕಾರ್ಯ ಏಪ್ರಿಲ್ ಮೊದಲ ವಾರದಲ್ಲಿ ನಡೆಯಲಿದೆ. ಇದಕ್ಕೆ ಅಂದಾಜು ವೆಚ್ಚ ರೂ. 25 ಲಕ್ಷ ತಗುಲಲಿದೆ. ಉದಾರ ದಾನಿಗಳ ಸಹಕಾರವನ್ನು ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಸ್ಮರಿಸುತ್ತದೆ. ಪ್ರತಿಷ್ಠಾಪನಾ ಕಾರ್ಯದಲ್ಲಿ ಭಕ್ತಾದಿಗಳು, ಗ್ರಾಮಸ್ಥರುಗಳು ಆಗಮಿಸಿ ಸಹಕಾರ ನೀಡುವಂತೆ ಕೋರಿದರು.

ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೊರೇರ ಬಿದ್ದಪ್ಪ ಮಾತನಾಡಿ, ಅಯ್ಯಪ್ಪ ಶಾಸ್ತಾವ್ ದೇವಸ್ಥಾನ ಜೀರ್ಣೋದ್ಧಾರದ ಕಾವiಗಾರಿ ಶೇ. 80 ರಷ್ಟು ಮುಗಿದಿದ್ದು ಇನ್ನು ಶೇ. 20 ರಷ್ಟು ಕಾಮಗಾರಿ ನಡೆಯಬೇಕಾಗಿರುವದರಿಂದ ದಾನಿಗಳ ಸಹಕಾರ ಅಗತ್ಯವಾಗಿದೆ. ದೇವಾಲಯದಲ್ಲಿ ಪ್ರತಿವರ್ಷ ಎರಡು ಉತ್ಸವಗಳು ನಡೆಯಲಿದೆ. ದೇವಾಲಯ ಸಮಿತಿಯಿಂದ ಆರ್ಜಿ, ಬೇಟೋಳಿ ಮತ್ತು ಹೆಗ್ಗಳ ಮೂರು ಗ್ರಾಮದವರು ಸೇರಿ ಉತ್ಸವಗಳನ್ನು ಆಚರಿಸುತ್ತಾರೆ ಎಂದರಲ್ಲದೆ, ಮೂರು ಗ್ರಾಮದ ಪ್ರಮುಖರು ದೇವಸ್ಥಾನದ ಸಮಿತಿಯಲ್ಲಿದ್ದು ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಅಚ್ಚಪಂಡ ಸಿ. ಗಣೇಶ್, ಕಾರ್ಯದರ್ಶಿ ಕಬ್ಬಚ್ಚಿರ ಬೋಪಣ್ಣ, ಸದಸ್ಯರುಗಳಾಗಿ ಎ. ಈರಪ್ಪ, ಅಚ್ಚಪಂಡ ದಿನೇಶ್ ಬೋಪಣ್ಣ, ಪಿ. ನಂಜುಂಡ, ಪಟ್ಟು ಅಯ್ಯಪ್ಪ, ಅಮ್ಮಣಕುಟ್ಟಂಡ ನರೇಂದ್ರ, ಕೀತಿಯಂಡ ಸುಬ್ಬಯ್ಯ, ನಾಯಕಂಡ ವಿಜು, ಪಟ್ಟಡ ಸತೀಶ್, ಚಂದಪಂಡ ಮಾಚಯ್ಯ ಮುಂತಾದವರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದರು.

ಗೋಷ್ಠಿಯಲ್ಲಿ ಕೀತಿಯಂಡ ಸುಬ್ಬಯ್ಯ, ಕಬ್ಬಚ್ಚಿರ ಬೋಪಣ್ಣ ಇತರರು ಉಪಸ್ಥಿತರಿದ್ದರು.