ಮೂರ್ನಾಡು, ಮಾ. 29 : ಹದಗೆಟ್ಟಿರುವ ರಸ್ತೆ ದುರಸ್ತಿಗೆ ಗಮನ ಹರಿಸದೆ ರಸ್ತೆ ಸೂಚನಾ ಫಲಕಗಳನ್ನು ಅಳವಡಿಸಿರುವದನ್ನು ವಿರೋಧಿಸಿ ತಾ. 30ರಂದು (ಇಂದು) ಪ್ರತಿಭಟನೆ ನಡೆಸುವದಾಗಿ ಕಟ್ಟೆಮಾಡು ಗ್ರಾಮದ ನಿವಾಸಿಗಳು ತಿಳಿಸಿದ್ದಾರೆ.
ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ಬಿದ್ರುಪಣೆ, ತೋಟಂಬೈಲು, ಗುಡ್ಡೆರ, ದೇವಜನ, ಕಟ್ಟೆಮನೆ, ಪಾರೇರ, ಪಾರೆಮಜಲು ಕುಟುಂಬಗಳ ಮನೆಗೆ ಸಾಗುವ ರಸ್ತೆಯು ಡಾಮರೀಕರಣ ಗೊಳ್ಳದೆ ತೀರಾ ಹದಗೆಟ್ಟಿದೆ. ಶಾಲಾ ಮಕ್ಕಳು, ಶಾಲಾ ವಾಹನಗಳು, ಪಾದಚಾರಿಗಳು ಪ್ರತಿನಿತ್ಯ ಇದೇ ರಸ್ತೆಯನ್ನು ಅವಲಂಬಿಸಿದ್ದು, ಈ ಹಿಂದೆ ಅನೇಕ ಬಾರಿ ರಸ್ತೆ ದುರಸ್ತಿಗೊಳಿಸುವಂತೆ ಮನವಿ ಸಲ್ಲಿಸಿದರೂ ಯಾವದೇ ಕ್ರಮ ಕೈಗೊಳ್ಳಲಿಲ್ಲ. ಆದರೆ ಈಗ ಕಲ್ಲು- ಮಣ್ಣಿನಿಂದ ಕೂಡಿದ ರಸ್ತೆಗಳ ಬದಿಯಲ್ಲಿ ಜಿಲ್ಲಾ ಪಂಚಾಯಿತಿಯಿಂದ 23ಕ್ಕೂ ಅಧಿಕ ರಸ್ತೆ ಸೂಚನಾ ಫಲಕಗಳನ್ನು ನೂತನವಾಗಿ ಅಳವಡಿಸಲಾಗಿದೆ. ಇದರ ವಿರುದ್ಧ ಬೆಳಿಗ್ಗೆ 11 ಗಂಟೆಗೆ ಕಟ್ಟೆಮಾಡು ಜಂಕ್ಷನ್ ಬಳಿ ಪ್ರತಿಭಟನೆ ನಡೆಸಲಾಗುವದು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.