ಮಡಿಕೇರಿ, ಮಾ. 29: ಕುಶಾಲನಗರ ನಿಸರ್ಗಧಾಮದೊಳಗೆ ಕಾಣಿಸಿಕೊಂಡಿರುವ ಮೂರು ಕಾಡಾನೆಗಳನ್ನು ನಿರಂತರ ಕಾರ್ಯಾಚರಣೆ ಮೂಲಕ ಪಿರಿಯಾಪಟ್ಟಣ ತಾಲೂಕಿನ ಮಳೂರು ರಕ್ಷಿತಾರಣ್ಯದತ್ತ ಅಟ್ಟಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ಖಚಿತಪಡಿಸಿವೆ.

ದುಬಾರೆಯಿಂದ ಸಾಕಾನೆಗಳಾದ ಹರ್ಷ ಹಾಗೂ ವಿಕ್ರಂ ಸಹಾಯದೊಂದಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯು ಹರಸಾಹಸದಿಂದ ಈ ಮೂರು ದೈತ್ಯಗಳನ್ನು ಕಡೆಗೂ ಮಳೂರು ಅರಣ್ಯಕ್ಕೆ ಒಡಿಸುವಲ್ಲಿ ಸಫಲರಾಗಿದ್ದಾರೆ.

ಈ ನಡುವೆಯೂ ಹೆದ್ದಾರಿ ಮಾರ್ಗ ಹಾಗೂ ಇತರೆಡೆಗಳಲ್ಲಿ ಮೂರು ದಿನಗಳಿಂದ ಕಾಡಾನೆಗಳು ಪದೇ ಪದೇ ಕಾಣಿಸಿಕೊಳ್ಳುತ್ತಿರುವ ಪರಿಣಾಮ, ಸುತ್ತಮುತ್ತಲಿನ ನಿವಾಸಿಗಳು, ವಾಹನಹೋಕರು ಹಾಗೂ ಪ್ರವಾಸ ಬರುವವರು ದುಬಾರೆ ಮತ್ತಿತರೆಡೆಗಳಲ್ಲಿ, ನಿಸರ್ಗಧಾಮದಲ್ಲಿ ಸಂಚರಿಸಲು ಭಯಪಡುವಂತಹ ವಾತಾವರಣ ಎದುರಾಗಿದೆ.

ಕುಶಾಲನಗರ: ಕುಶಾಲನಗರ ಕಾವೇರಿ ನಿಸರ್ಗಧಾಮ ಪ್ರವಾಸಿ ಕೇಂದ್ರಕ್ಕೆ ಬುಧವಾರ ಲಗ್ಗೆಯಿಟ್ಟ 3 ಕಾಡಾನೆಗಳನ್ನು ಕಾಡಿಗಟ್ಟುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಪ್ರವಾಸಿಗರಿಗೆ ಗುರುವಾರ ಪ್ರವೇಶ ನಿರ್ಭಂಧಿಸಲಾಗಿತ್ತು. ಮೂರು ಕಾಡಾನೆಗಳನ್ನು ಸಾಕಾನೆಗಳ ಸಹಾಯದಿಂದ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಪ್ರಯತ್ನಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಅಧಿಕಾರಿಗಳ ತಂಡ ಗುರುವಾರ ಕೂಡ ಆನೆಗಳನ್ನು ಅಟ್ಟುವ ಕೆಲಸದಲ್ಲಿ ತೊಡಗಿದ್ದರು.

ರಾತ್ರಿ ವೇಳೆ ಕಾಡಾನೆಗಳು ಸಮೀಪದ ಸರಕಾರಿ ಶಾಲೆ ಬಳಿ ಕಂಡುಬಂದ ಬಗ್ಗೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರ ಭದ್ರತೆ ಹಿನ್ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಪ್ರವಾಸಿ ಕೇಂದ್ರವನ್ನು ಗುರುವಾರ ಮುಚ್ಚಿದ್ದ ದೃಶ್ಯ ಕಂಡುಬಂತು. ಈ ನಡುವೆ ವಾರಾಂತ್ಯದ ರಜಾ ದಿನದ ಹಿನ್ನೆಲೆಯಲ್ಲಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಭೇಟಿ ಸಂಖ್ಯೆಯಲ್ಲಿ ಕೂಡ ಹೆಚ್ಚಳ ಕಂಡುಬಂತು.