ಸಿದ್ದಾಪುರ, ಮಾ. 29: ಸಿದ್ದಾಪುರ ಗ್ರಾ.ಪಂ.ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಧ್ಯಕ್ಷರು ಕೆಲ ಸದಸ್ಯರು ಬೇನಾಮಿ ಹೆಸರಿನಲ್ಲಿ ಕಾಮಗಾರಿಗಳನ್ನು ನಡೆಸುತ್ತಾ, ಗ್ರಾ.ಪಂ. ಹಣವನ್ನು ದುರುಪಯೋಗಪಡಿಸು ತ್ತಿದ್ದಾರೆ ಎಂದು ಸಿ.ಪಿ.ಐ.ಎಂ ಮುಖಂಡ ಎನ್.ಡಿ ಕುಟ್ಟಪ್ಪ ಆರೋಪಿಸಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಗ್ರಾ.ಪಂ ಅಧ್ಯಕ್ಷರು ಹಾಗೂ ಕೆಲವು ಸದಸ್ಯರುಗಳು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದುಕೊಂಡು ಕಳಪೆ ಗುಣಮಟ್ಟದಲ್ಲಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾರೆ. ಮಡಿಕೇರಿ ರಸ್ತೆಯಲ್ಲಿ ಕೈಗೊಂಡಿರುವ ಕಾಮಗಾರಿ ಎಸ್.ಡಿ.ಪಿ.ಐ ಪಕ್ಷದ ಸದಸ್ಯರೋರ್ವರು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದುಕೊಂಡು ಕಳಪೆ ಗುಣಮಟ್ಟದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದಾರೆ. ಆಡಳಿತ ಪಕ್ಷ ನಡೆಸುತ್ತಿರುವ ಭ್ರಷ್ಟಾಚಾರಕ್ಕೆ ವಿರೋಧ ಪಕ್ಷವಾದ ಎಸ್.ಡಿ.ಪಿ.ಐ ಬೆಂಬಲ ನೀಡುತ್ತಿದ್ದು, ಅಭಿವೃದ್ಧಿ ವಿಷಯದಲ್ಲಿ ಚರ್ಚಿಸಬೇಕಾದ ಸದಸ್ಯರು ಕಾಮಗಾರಿಗಳ ಕಮಿಷನ್ ವಿಚಾರದಲ್ಲಿ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದಾರೆ. ಭ್ರಷ್ಟಾಚಾರಕ್ಕೆ ಸಿದ್ದಾಪುರ ಗ್ರಾ.ಪಂ.ಗೆ ಮೊದಲನೇ ಸ್ಥಾನ ನೀಡಬೇಕು ಎಂದು ವ್ಯಂಗ್ಯವಾಡಿದರು.
ಪಟ್ಟಣ ವ್ಯಾಪ್ತಿಯಲ್ಲಿ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ದಾಖಲೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ, ನಿರಾಪೇಕ್ಷಣಾ ಪತ್ರ ನೀಡುತ್ತಿದ್ದಾರೆ. ಇದರಿಂದ ಸಾಕಷ್ಟು ಕಟ್ಟಡಗಳು ತಲೆಎತ್ತಿವೆ. ಗ್ರಾ.ಪಂ. ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದರು.
ಪಕ್ಷದ ಮುಖಂಡ ಸಿ.ಯು. ಮುಸ್ತಫಾ ಮಾತನಾಡಿ, ಕಾವೇರಿ ನದಿ ದಡದಲ್ಲಿ ಸಿದ್ದಾಪುರ ವ್ಯಾಪ್ತಿಯ ಕೋಳಿ ವ್ಯಾಪಾರಸ್ಥರು ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿದ್ದು, ಕಾವೇರಿ ನದಿ ಮಲಿನಗೊಂಡಿದೆ. ಕೂಡುಗದ್ದೆಗೆ ತೆರಳುವ ಬಸ್ ತಂಗುದಾಣದ ಬಳಿಯಲ್ಲೇ ಮಾಂಸದ ತ್ಯಾಜ್ಯ ಸುರಿಯುತ್ತಿದ್ದು, ಇದರ ದುರ್ವಾಸನೆಯಿಂದಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಸಾರ್ವಜನಿಕರಿಗೆ ತಂಗುದಾಣದಲ್ಲಿ ನಿಲ್ಲಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಂಜು, ಸಾಲಿ ಪೌಲೋಸ್ ಇದ್ದರು.