ಶರೀರ ರಚನಾ ಶಾಸ್ತ್ರ / ಅಂಗ ರಚನಾ ಶಾಸ್ತ್ರ ಪ್ರಥಮ ವರ್ಷದ ಒಂದು ಐಚ್ಛಿಕ ವಿಷಯವಾಗಿದ್ದು, ಶರೀರ ರಚನಾ ಶಾಸ್ತ್ರ / ಅಂಗ ರಚನಾ ಶಾಸ್ತ್ರ ಅದು ವೈದ್ಯಕೀಯ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿ, ವೈದ್ಯಕೀಯ ವಿಜ್ಞಾನ ಕ್ಷೇತ್ರಕ್ಕೆ ಭದ್ರ ಬುನಾದಿ ಹಾಕುವ ವಿಷಯ ಎನ್ನುವದರಲ್ಲಿ ಉತ್ಪ್ರೇಕ್ಷತೆಯಿಲ್ಲ. ಯಾಕೆಂದರೆ ವೈದ್ಯಕೀಯ ಶಿಕ್ಷಣ ವಲಯದಲ್ಲಿ ಯಾವದೇ ವಿಭಾಗದ ವಿಷಯವಾಗಿದ್ದರು, ಶರೀರ ರಚನಾ ಶಾಸ್ತ್ರದ ಜ್ಞಾನ ಅತ್ಯವಶ್ಯಕವಾಗಿರುತ್ತದೆ.

ಈ ವಿಷಯವು ಮಾನವನ ದೇಹದ ವಿವಿಧ ಅಂಗಗಳ ರಚನೆಗಳ ಬಗ್ಗೆ ಕೂಲಂಕಷವಾಗಿ ಅಧ್ಯಯನ ಮಾಡಿ ತಿಳಿದುಕೊಳ್ಳುವದಾಗಿರುತ್ತದೆ. ಇದಕ್ಕಾಗಿ ವಿದ್ಯಾರ್ಥಿಗಳಿಗೆ, ಕಲಿಯಲು ಅನುಕೂಲವಾಗುವಂತೆ ಹಾಗೂ ಅನುಭವದ ಜ್ಞಾನಾರ್ಜನೆಗಾಗಿ ಅಂಗವಿಚ್ಛೇಧನ ಎಂಬ ಪ್ರಾಯೋಗಿಕ / ಪ್ರಾಕ್ಟಿಕಲ್ಸ್ ಪಾಠಗಳಿರುತ್ತದೆ. ಇದರಲ್ಲಿ ಮೃತ ಮಾನವನ ದೇಹವನ್ನು ವೈಜ್ಞಾನಿಕವಾಗಿ, ವಿಚ್ಛೇಧಿಸಿ, ವಿದ್ಯಾರ್ಥಿಗಳಿಗೆ ಪಾಠ ಮಾಡಲಾಗುತ್ತದೆ. ಆದುದರಿಂದ ಮೃತ ಮಾನವನ ದೇಹ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಅತ್ಯಾವಶ್ಯಕ ಹಾಗೂ ಅತ್ಯಮೂಲ್ಯವಾಗಿರುತ್ತದೆ.

ಆದರೆ ನಮ್ಮ ಸಮಾಜದಲ್ಲಿ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿರುವ ನಂಬಿಕೆ, ಆಚಾರ - ವಿಚಾರಗಳಿಂದ ವ್ಯಕ್ತಿಯ ಮರಣದ ನಂತರ ದೇಹವನ್ನು ದಾನ ಮಾಡುವದಕ್ಕೆ ತುಂಬ ಅಡೆ - ತಡೆಗಳಿರುವದರಿಂದ ಸಾಕಷ್ಟು ವೈದ್ಯಕೀಯ ಕಾಲೇಜುಗಳಲ್ಲಿ ದೇಹಗಳ ಕೊರತೆಯುಂಟಾಗಿದೆ. ಮೃತ ಮಾನವನ ದೇಹದ ಬದಲಾಗಿ ಮನುಷ್ಯಾಕೃತಿ (ಒಚಿಟಿಟಿequiಟಿ) ಗಣಕಿಕೃತ ಗ್ರಾಫಿಕ್ಸ್ ಹಾಗೂ ವಿಡೀಯೋಗಳ ಮುಖಾಂತರ ವಿವರಿಸಲಾಗುತ್ತಿದೆ. ಆದರೂ ಅದು ಮಾನವನ ದೇಹಕ್ಕೆ ಸರಿಸಮಾನವಾಗುವದಿಲ್ಲ.

ವೈದ್ಯಕೀಯ ಸಂಸ್ಥೆಗಳಲ್ಲಿ ಶೈಕ್ಷಣಿಕ ಉದ್ದೇಶಗಳಿಗಾಗಿ ಮೃತ ವ್ಯಕ್ತಿಗಳ ದೇಹಗಳನ್ನು ಪಡೆದುಕೊಳ್ಳುವಲ್ಲಿ ಸಾಕಷ್ಟು ತೊಂದರೆಗಳು ಉಂಟಾಗುವದು ಅನುಭವಕ್ಕೆ ಬಂದಿರುವದರಿಂದ ಆಸ್ಪತ್ರೆ, ವೈದ್ಯಕೀಯ ಮತ್ತು ಭೋದನಾ ಸಂಸ್ಥೆಗಳಿಗೆ ಮೃತ ವ್ಯಕ್ತಿಗಳ ಹಕ್ಕು ಸಾಧಿಸದ, ಸ್ವಇಚ್ಛೆಯಿಂದ ದಾನ ಮಾಡಿದ ದೇಹಗಳನ್ನು ಸರಬರಾಜು ಮಾಡುವದಕ್ಕೆ 1957 ರ ಸೆಪ್ಟೆಂಬರ್ 13ನೇ ದಿನಾಂಕದಂದು ಕರ್ನಾಟಕ ಶರೀರ ರಚನಾ ಶಾಸ್ತ್ರ, 1957 ಅಧಿನಿಯಮವನ್ನು ರಾಜ್ಯಪಾಲರ ಸಮ್ಮತಿಯಿಂದ ಪ್ರಕಟಿಸಲಾಯಿತು. ತದನಂತರ 1999 ರ ಅಧಿನಿಯಮ 15 ರ ಮೂಲಕ ತಿದ್ದುಪಡಿಯಾದಂತೆ, ಆಸ್ಪತ್ರೆಗಳಿಗೆ ಮತ್ತು ವೈದ್ಯಕೀಯ ಮತ್ತು ಭೋದನಾ ಸಂಸ್ಥೆಗಳಿಗೆ ಯಾವದೇ ಜನಾಂಗದ ಮೃತ ವ್ಯಕ್ತಿಗಳ ಹಕ್ಕು ಸಾಧಿಸದ (ಕ್ಲೇಮು ಮಾಡದ) ದೇಹಗಳನ್ನು ಅಥವಾ ಸ್ವಇಚ್ಛೆಯಿಂದ ದಾನ ಮಾಡಲು ಹಾಗೂ ಅವುಗಳ ಯಾವದೇ ಭಾಗವನ್ನು ಶಾರೀರಿಕ ರಚನಾ ಪರೀಕ್ಷೆ ಮಾಡಲು ಮತ್ತು ಕೊಯ್ದು ಪರೀಕ್ಷಿಸಲು ಮತ್ತು ಅಂಥದೇ ಇತರ ಉದ್ದೇಶಗಳಿಗಾಗಿ ಉಪಯೋಗಿಸಲು ಅವಕಾಶ ಮಾಡಿಕೊಡಲಾಗಿರುತ್ತದೆ.

ಮರಣ ನಂತರ 6 ರಿಂದ 8 ಗಂಟೆಯ ನಂತರ ಮೃತ ದೇಹವು ಕೊಳೆಯಲು ಪ್ರಾರಂಭವಾಗುತ್ತದೆ. 24 ಗಂಟೆಗಳ ನಂತರ ಮೃತ ದೇಹವು ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆಗೆ ಹೆಚ್ಚು ಉಪಯೋಗಕ್ಕೆ ಬರುವದಿಲ್ಲ. ಆದುದರಿಂದ ಮೃತರ ಕುಟುಂಬ ವರ್ಗದವರು / ಹತ್ತಿರ ಸಂಬಂಧಿಗಳು, ಸ್ನೇಹಿತರುಗಳು ವಿದ್ಯಾಲಯದ ವಿಭಾಗಕ್ಕೆ ಮೃತ ದೇಹವನ್ನು 6 ಗಂಟೆಯೊಳಗೆ ಕಳುಹಿಸಿದರೆ ನಾವು ರಾಸಾಯನಿಕ ವಸ್ತುವನ್ನು ಚುಚ್ಚು ಮದ್ದಿನ ಮುಖಾಂತರ ಮೃತ ದೇಹಕ್ಕೆ ನೀಡಿ ಅದನ್ನು ಕೆಡದಂತೆ ಸಂಸ್ಕರಿಸಿ ಇಡುತ್ತೇವೆ. ಮರಣೋತ್ತರ ಪರೀಕ್ಷೆ ನಡೆಸಿದ, ಕೊಳೆತ ಸ್ಥಿತಿಯಲ್ಲಿನ ದೇಹ ಹಾಗೂ ಸಾಂಕ್ರಾಮಿಕ ರೋಗದಿಂದ ಮೃತಪಟ್ಟ ದೇಹಗಳನ್ನು ತಜ್ಞ ಆರೋಗ್ಯ ವೃತ್ತಿಪರರ ನಿರ್ಧಾರದ ಮೇರೆಗೆ ದೇಹವನ್ನು ನಿರಾಕರಿಸು ವದಕ್ಕೂ ಅವಕಾಶವಿರುತ್ತದೆ.

ವಿವಿಧ ಅಂಗಗಳನ್ನು ದಾನ ಮಾಡುವ ರೀತಿಯಲ್ಲಿಯೇ ದೇಹದಾನ ಮಾಡುವದು ಸಹ ಶ್ರೇಷ್ಠ, ಶ್ಲಾಘನೀಯ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಕೊಡುವ ಅತ್ಯಮೂಲ್ಯ ಕೊಡುಗೆಯಾಗಿರುತ್ತದೆ. ಆದರೆ ಜನರಲ್ಲಿ ದೇಹ ದಾನದ ಬಗ್ಗೆ ಜ್ಞಾನ ಹೆಚ್ಚಾಗಿ ಇಲ್ಲದಿರುವದರಿಂದ ಇದರ ಬಗ್ಗೆ ಜನರಿಗೆ ತಿಳಿಯಪಡಿಸುವದು ಅವಶ್ಯಕವಾಗಿರುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೆಗಳಲ್ಲಿ ವಿವಿಧ ಲೇಖನಗಳ ಮುಖಾಂತರ, ಮಾಧ್ಯಮಗಳಲ್ಲಿ ಚರ್ಚೆ ಹಾಗೂ ಸೆಮಿನಾರ್‍ಗಳನ್ನು ಏರ್ಪಡಿಸಿ ಜನರಿಗೆ ದೇಹ ದಾನದ ಬಗ್ಗೆ ಪರಿಣಾಮಕಾರಿಯಾಗಿ ಜನರಿಗೆ ತಲಪಿಸಬಹುದು. ವೈದ್ಯಕೀಯ ಕಾಲೇಜಿನಲ್ಲಿ ಸಹ ಇದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿರುತ್ತದೆ.

ಮರಣದ ನಂತರ ಮೃತ ದೇಹವನ್ನು ಹೂಳುವದು, ಸುಡುವದನ್ನು ಬಿಟ್ಟು ಅದರಿಂದ ಮನುಕುಲಕ್ಕೆ ಹೆಚ್ಚಿನ ರೀತಿಯಲ್ಲಿ ಉಪಯೋಗವಾಗುವಂತೆ ನೋಡಿಕೊಳ್ಳುವದು ನಮ್ಮೆಲ್ಲರ ಜವಬ್ದಾರಿಯಾಗಿರುತ್ತದೆ. ಇದಕ್ಕೆ ಎಲ್ಲರೂ ಸಜ್ಜಾಗಿ ಪ್ರಜ್ಞಾವಂತ ನಾಗರಿಕರಾಗಿ ಸಹಕರಿಸೋಣ. - ಶ್ರೀಸುತ