ಚಾಮುಂಡೇಶ್ವರಿಯಲ್ಲೇ ಸ್ಪರ್ಧೆ:ಸಿಎಂ ಸ್ಪಷ್ಟನೆ

ಮೈಸೂರು, ಮಾ. 29: ಈ ಬಾರಿಯೂ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಮತ್ತು ಇದು ನನ್ನ ಕೊನೆಯ ಚುನಾವಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ತವರು ಜಿಲ್ಲೆ ಮೈಸೂರಿನಿಂದ ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದು, ಅವರಿಗೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಭರ್ಜರಿ ಸ್ವಾಗತ ನೀಡಿದ್ದಾರೆ. ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದ ಉದ್ಬೂರು ಗ್ರಾಮದಲ್ಲಿ ಸೇರಿದ್ದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ನೂರಕ್ಕೆ ನೂರರಷ್ಟು ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತೇನೆ. ನಾನು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವದಿಲ್ಲ ಎಂದು ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು. ನನಗೆ ರಾಜಕೀಯವಾಗಿ ಮರು ಜನ್ಮ ಕೊಟ್ಟ ಕ್ಷೇತ್ರ ಚಾಮುಂಡೇಶ್ವರಿ. ಇದು ನನ್ನ ಕೊನೆಯ ಚುನಾವಣೆ. ಹೀಗಾಗಿ ಕೊನೆಯ ಚುನಾವಣೆಯನ್ನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಎದುರಿಸುತ್ತೇನೆ ಎಂದರು.

ನೈಸರ್ಗಿಕ ಅನಿಲ ಬೆಲೆ ಶೇ. 6 ರಷ್ಟು ಹೆಚ್ಚಳ

ನವದೆಹಲಿ, ಮಾ. 29: ನೈಸರ್ಗಿಕ ಅನಿಲದ ಬೆಲೆಯನ್ನು ಶೇ. 6 ರಷ್ಟು ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಆದೇಶಿಸಿದೆ. ಇದರಿಂದಾಗಿ ಅನಿಲದ ಬೆಲೆ ಎರಡು ವರ್ಷದ ಗರಿಷ್ಠ ಮಟ್ಟಕ್ಕೆ ತಲಪಲಿದೆ. ಅಲ್ಲದೆ ಸಿಎನ್‍ಜಿ ಹಾಗೂ ಅಡುಗೆ ಅನಿಲದ ಬೆಲೆಗಳು ಹೆಚ್ಚಾಗಲಿದೆ. ಸ್ಥಳೀಯವಾಗಿ ಉತ್ಪಾದಿಸಲಾದ ನೈಸರ್ಗಿಕ ಅನಿಲದ ಬೆಲೆ ಕಳೆದ ಆರು ತಿಂಗಳಿನಿಂದ ಮಿಲಿಯನ್ ಬ್ರಿಟಿಷ್ ಥರ್ಮಲ್ ಯುನಿಟ್ ಒಂದಕ್ಕೆ 3.06 ಅಮೇರಿಕನ್ ಡಾಲರ್ ಆಗಿತ್ತು. ಆದರೆ ಬರುವ ಏಪ್ರಿಲ್ 1 ರಿಂದ 2.89 ಅಮೇರಿಕನ್ ಡಾಲರ್ ನಷ್ಟು ಹೆಚ್ಚಳವಾಗಲಿದೆ ಎಂದು ತೈಲ ಸಚಿವಾಲಯದ ಹೇಳಿಕೆ ತಿಳಿಸಿದೆ. ಅನಿಲ ಪೂರೈಕೆ ರಾಷ್ಟ್ರಗಳಾದ ಅಮೇರಿಕಾ, ರಷ್ಯಾ, ಕೆನಡಾದಲ್ಲಿನ ಅನಿಲ ದರಗಳನ್ನು ಆಧರಿಸಿ ನೈಸರ್ಗಿಕ ಅನಿಲ ಬೆಲೆಗಳು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುತ್ತದೆ.

ಮಗನೊಂದಿಗೆ ಪರೀಕ್ಷೆ ಬರೆಯುತ್ತಿರುವ ಅಮ್ಮ

ಲೂಧಿಯಾನ, ಮಾ. 29: ಕೌಟುಂಬಿಕ ಸಮಸ್ಯೆಗಳಿಂದಾಗಿ ಶಾಲೆ ತೊರೆದಿದ್ದ ಗೃಹಿಣಿಯೊಬ್ಬರು ಇದೀಗ ತನ್ನ ಮಗನ ಜತೆಗೆ 10ನೇ ತರಗತಿ ಪರೀಕ್ಷೆ ಬರೆಯುತ್ತಿದ್ದಾರೆ. 44ರ ಹರೆಯದ ರಜನಿ ಬಾಲಾ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ವಾರ್ಡ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯ 10ನೇ ತರಗತಿ ಪರೀಕ್ಷೆಗೆ ಕೂರಲು ಕೆಲ ತಿಂಗಳುಗಳ ರಜೆ ಪಡೆದು ಶಾಲೆಗೆ ಹೋಗಿ ವಿದ್ಯಾರ್ಥಿನಿಯಾಗಿ ಕುಳಿತು ಪಾಠಗಳನ್ನು ಕಲಿತು ಇದೀಗ ತನ್ನ ಪುತ್ರನೊಂದಿಗೆ ಪರೀಕ್ಷೆಗಳನ್ನು ಎದುರಿಸುತ್ತಿದ್ದಾರೆ. ನಾನು 10ನೇ ತರಗತಿ ಓದಿ ಮುಗಿಸಲೇಬೇಕು. ಪರೀಕ್ಷೆ ಪಾಸು ಮಾಡಲೇಬೇಕು ಎಂಬ ಹಠ ನನ್ನಲ್ಲಿತ್ತು. ಆರಂಭದಲ್ಲಿ ನಾನು ಈ ವಯಸ್ಸಿನಲ್ಲಿ ಶಾಲೆಗೆ ಹೋಗಿ ಕೂರುವದಕ್ಕೆ ತುಂಬಾ ಸಂಕೋಚವಾಗಿತ್ತು.

ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಅಂತ್ಯ

ನವದೆಹಲಿ, ಮಾ. 29: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ಕೃಷಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಡನೆ ಮಾತುಕತೆ ನಡೆಸಿದ ಬಳಿಕ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ತಮ್ಮ ಏಳು ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದ ದೂತಾವಾಸ ಹಾಗೂ ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್ ಅಣ್ಣಾ ಹಜಾರೆ ಅವರನ್ನು ಭೇಟಿಯಾಗಿ ಅವರ ಬಹುಪಾಲು ಬೇಡಿಕೆಗಳ ಸಂಬಂಧ ಕಾಳಜಿ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಉಪವಾಸ ಸತ್ಯಾಗ್ರಹದ ಮೊದಲೆರಡು ದಿನ ನೀರಸವಾಗಿದ್ದರೂ ಮೂರನೇ ದಿನ ಅಣ್ಣಾ ಅವರ ಭ್ರಷ್ಟಾಚಾರದ ವಿರುದ್ಧ ಭಾರತದ ಹೋರಾಟಕ್ಕೆ ತಕ್ಕ ಮಟ್ಟಿಗೆ ಉತ್ತಮ ಜನಬೆಂಬಲ ಸಿಕ್ಕಿತ್ತು.

ನ್ಯಾಯಾಂಗದಲ್ಲಿ ಕೇಂದ್ರ ಹಸ್ತಕ್ಷೇಪ ಆರೋಪ

ನವದೆಹಲಿ, ಮಾ. 29: ನ್ಯಾಯಾಂಗ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಹಸ್ತಕ್ಷೇಪ ಮಾಡುತ್ತಿರುವದಕ್ಕೆ ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಾಧೀಶ ಜೆ. ಚಲಮೇಶ್ವರ್ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಕುರಿತು ಚರ್ಚಿಸಲು ಪೂರ್ಣ ಕೋರ್ಟ್ ರಚಿಸುವಂತೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಪತ್ರ ಬರೆದಿದ್ದಾರೆ. ನ್ಯಾ. ಚಲಮೇಶ್ವರ್ ಅವರು ತಾ. 21 ರಂದು ಮುಖ್ಯ ನ್ಯಾಯಮೂರ್ತಿಗೆ 6 ಪುಟಗಳ ಪತ್ರ ಬರೆದಿದ್ದು, ನ್ಯಾಯಾಂಗ ಮತ್ತು ಸರ್ಕಾರದ ನಡುವೆ ಸ್ನೇಹಬಾಂಧವ್ಯವಿದ್ದರೆ ಪ್ರಜಾತಂತ್ರದ ಮರಣಶಾಸನವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ನ್ಯಾ. ಚಲಮೇಶ್ವರ್ ಅವರು ಈ ಪತ್ರವನ್ನು ಸುಪ್ರೀಂ ಕೋರ್ಟ್ ಇತರ 22 ನ್ಯಾಯಾಧೀಶರಿಗೂ ಕಳುಹಿಸಿದ್ದು, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸೂಚನೆಯಂತೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಅವರು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೃಷ್ಣ ಭಟ್ ಅವರ ವಿರುದ್ಧ ತನಿಖೆಗೆ ಆದೇಶಿಸಿರುವದನ್ನು ಪ್ರಶ್ನಿಸಿದ್ದಾರೆ.

6 ವರ್ಷಗಳ ನಂತರ ಮಲಾಲ ಪಾಕ್ ಭೇಟಿ

ಇಸ್ಲಾಮಾಬಾದ್, ಮಾ. 29: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ, ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಆರು ವರ್ಷಗಳ ನಂತರ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಗುರುವಾರ ಪಾಕಿಸ್ತಾನ ಪ್ರಧಾನಿ ಶಾಹಿದ್ ಖಕಾನ್ ಅಬ್ಬಾಸಿ ಅವರನ್ನು ಭೇಟಿಯಾಗಿ ಮಲಾಲ ಮಾತುಕತೆ ನಡೆಸಿದ್ದಾರೆ ಎಂದು ಪ್ರಧಾನಿ ಸಚಿವಾಲಯ ಖಚಿತಪಡಿಸಿದೆ. ಕಳೆದ ಆರು ವರ್ಷಗಳಿಂದ ಲಂಡನ್‍ನಲ್ಲಿ ವಾಸವಿರುವ ಮಲಾಲ ಬುಧವಾರ ತಡರಾತ್ರಿ 1.41ಕ್ಕೆ ಎಮಿರೇಟ್ಸ್ ‘ಇಏ-614’ ವಿಮಾನದಲ್ಲಿ ಬೆನಜಿರ್ ಭುಟ್ಟೋ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಮಲಾಲ ತನ್ನ ಈ ಪ್ರವಾಸ ವೇಳೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಸೇರಿದಂತೆ ಪ್ರಮುಖ ಗಣ್ಯರೊಂದಿಗೆ ಚರ್ಚಿಸುವ ಇರಾದೆ ಹೊಂದಿದ್ದು, `ಮೀಟ್ ದಿ ಮಲಾಲ’ ಕಾರ್ಯಕ್ರಮದಲ್ಲಿಯೂ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ

ಡಾ. ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ತಿದ್ದುಪಡಿ

ಲಖನೌ, ಮಾ. 29: ಡಾ. ಬಿ.ಆರ್. ಅಂಬೇಡ್ಕರ್ ಹೆಸರನ್ನು ಇನ್ನು ಮುಂದೆ ‘ಡಾ. ಭೀಮ್ ರಾವ್ ರಾಮ್‍ಜಿ ಅಂಬೇಡ್ಕರ್’ ಎಂದು ಬಳಸುವಂತೆ ಉತ್ತರ ಪ್ರದೇಶದ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರದ ಎಲ್ಲ ದಾಖಲೆಗಳಲ್ಲಿ ಇನ್ನು ಮುಂದೆ ಪರಿಸ್ಕೃತ ಹೆಸರನ್ನೆ ಬಳಸುವಂತೆ ಸಾರ್ವಜನಿಕ ಆಡಳಿತದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಅವರು ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯ ಪ್ರತಿಗಳು ಅಲಹಾಬಾದ್ ಮತ್ತು ಲಖನೌದಲ್ಲಿನ ಹೈಕೋರ್ಟ್ ಪೀಠದ ರೆಜಿಸ್ಟ್ರಾರ್ ಕಚೇರಿಗಳಿಗೂ ತಲಪಿಸಲಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿಯೇ ಅಂಬೇಡ್ಕರ್ ತಮ್ಮ ಹೆಸರನ್ನು ಡಾ.ಭೀಮ್ ರಾವ್ ರಾಮ್‍ಜಿ ಅಂಬೇಡ್ಕರ್ ಎಂದು ಉಲ್ಲೇಖಿಸಿದ್ದಾರೆಂದು ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅಂಬೇಡ್ಕರ್ ಅವರ ಹೆಸರು ಬದಲಾವಣೆ ಮಾಡುವಂತೆ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯಕ್ ಸಹ ಧ್ವನಿಗೂಡಿಸಿದ್ದರು.

ಜಿಸ್ಯಾಟ್-6ಎ ಯಶಸ್ವಿ ಉಡಾವಣೆ

ಶ್ರೀಹರಿಕೋಟ, ಮಾ. 29: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾರತೀಯ ಸಂವಹನ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬಲಿರುವ ಜಿಸ್ಯಾಟ್-6ಎ ಅನ್ನು ಗುರುವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಇಂದು ಸಂಜೆ 4.56ಕ್ಕೆ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಭೂಸ್ಥಿರ ಉಪಗ್ರಹ ಉಡಾವಣಾ ವಾಹನ (ಜಿಎಸ್‍ಎಲ್ವಿ-ಎಫ್08)ದ ಮೂಲಕ ಜಿಸ್ಯಾಟ್-6ಎ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. ಒಟ್ಟು 17 ನಿಮಿಷಗಳ ಕಾಲ ಮೂರು ಹಂತಗಳಲ್ಲಿ ನಡೆದ ರಾಕೆಟ್ ಉಡಾವಣೆ ಪ್ರಕ್ರಿಯೆ ಕೊನೆಗೆ ಜಿಸ್ಯಾಟ್-6ಎ ಉಪಗ್ರಹವನ್ನು ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಇಸ್ರೊ ನಿರ್ಮಿತ ಎಸ್-ಬ್ಯಾಂಡ್ ಸಂಪರ್ಕಕ್ಕಾಗಿ ಬಳಕೆಯಾಗುವ ಈ ಉಪಗ್ರಹದ ಕಾರ್ಯಾವಧಿ 10 ವರ್ಷ ಎನ್ನಲಾಗಿದೆ. ಈ ವರ್ಷ ಇಸ್ರೊ ಉಡಾಯಿಸುತ್ತಿರುವ 2ನೇ ಉಪಗ್ರಹ ಇದಾಗಿದ್ದು, ಎಸ್- ಬ್ಯಾಂಡ್ ಮಾದರಿಯ ಅತ್ಯಂತ ಶಕ್ತಿಶಾಲಿ ಸಂವಹನ ಉಪಗ್ರಹ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.