ಮಡಿಕೇರಿ, ಮಾ. 29: ಮನೆಯೊಂದರಲ್ಲಿ ಅನಾರೋಗ್ಯದಿಂದ ವ್ಯಕ್ತಿಯನ್ನು ಆರೈಕೆಗೆಂದು ನೇಮಕ ಮಾಡಿಕೊಂಡಿದ್ದ ಆಸಾಮಿಯೋರ್ವ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಯಲ್ಲಿದ್ದ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಮಕ್ಕಂದೂರು ನಿವಾಸಿ ನಾಪಂಡ ರವಿ ಕಾಳಪ್ಪ ಅವರ ತಂದೆ ಮಂದಣ್ಣ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದು, ಅವರನ್ನು ನೋಡಿಕೊಳ್ಳಲು ಮೈಸೂರಿನ ಹೆಲ್ತ್ ಆಂಡ್ ವೆಲ್‍ನೆಸ್ ಹೆಲ್ತ್ ಕೇರ್ ಸರ್ವಿಸಸ್ ಮುಖಾಂತರ ಮೂಲತಃ ಹುಬ್ಬಳ್ಳಿಯವನಾದ ಭೊದೇಶ್ (ಭೂದಪ್ಪ) ಎಂಬಾತನನ್ನು ನೇಮಕ ಮಾಡಿಕೊಂಡು ಕಳೆದ 20 ದಿನಗಳಿಂದ ಮನೆಯಲ್ಲಿ ಇರಿಸಿ ಕೊಂಡಿದ್ದರು. ತಾ. 26ರಂದು ಕಾಳಪ್ಪ ತಮ್ಮ ಮಗಳನ್ನು ನೋಡಿಕೊಂಡು ಬರಲು ಮಂಗಳೂರಿಗೆ ಹೋಗಿದ್ದು, ಅದೇ ದಿನ ಸಂಜೆ ಅವರ ತಾಯಿಯವರು ಮನೆಯಲ್ಲಿನ ಬೀರುವಿನಲ್ಲಿ ಇಟ್ಟಿರುವ ಚಿನ್ನಾಭರಣ ಮತ್ತು ರೂ. 20 ಸಾವಿರ ಹಣವನ್ನು ಭೂದೇಶ್ ಕಳವು ಮಾಡಿಕೊಂಡು ಮನೆಯಿಂದ ಹೋಗಿರುವದಾಗಿ ತಾಯಿಯವರು ತಿಳಿಸಿದ್ದಾರೆ. ಈ ಸಂಬಂಧ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 108/2018 ಕಲಂ 381 ಐ.ಪಿ.ಸಿ. ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಅವರ ನಿರ್ದೇಶನದಂತೆ ಮಡಿಕೇರಿ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಕೆ.ಎಸ್. ಸುಂದರ್‍ರಾಜ್ ಅವರ ಮಾರ್ಗದರ್ಶನದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧಯ್ಯ, ಠಾಣಾಧಿಕಾರಿ ಯತೀಶ್ ಎನ್., (ಪ್ರೊಬೆಷನರಿ) ಪೊಲೀಸ್ ಉಪ ನಿರೀಕ್ಷಕ ಚೇತನ್ ವಿ. ಹಾಗೂ ಸಿಬ್ಬಂದಿಗಳಾದ ಇಬ್ರಾಹಿಂ, ತೀರ್ಥಕುಮಾರ್, ಶಿವರಾಜೇಗೌಡ, ವೀಣಾ, ಚಾಲಕರುಗಳಾದ ಅರುಣ್ ಕುಮಾರ್, ಮನೋಹರ್, ಸುನಿಲ್ ಅವರುಗಳು ಕಾರ್ಯಾಚರಣೆ ನಡೆಸಿ ಇಂದು ಆರೋಪಿ ಭೂದೇಶ್‍ನನ್ನು ಮಡಿಕೇರಿ ನಗರದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿ ಕಳವು ಮಾಡಿದ ಸುಮಾರು 180 ಗ್ರಾಂ. ಚಿನ್ನಾಭರಣ, ಅಂದಾಜು ಬೆಲೆ ರೂ. 5,00,000 ಹಾಗೂ 3,000 ನಗದು ಸೇರಿದಂತೆ ಒಟ್ಟು 5,03,000 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಪ್ರಕರಣ ದಾಖಲಾದ 24 ಗಂಟೆಯೊಳಗೆ ಆರೋಪಿ ಯನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿಯವರುಗಳನ್ನು ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಪ್ರಶಂಸಿಸಿ ನಗದು ಬಹುಮಾನ ಘೋಷಿಸಿದ್ದಾರೆ.