ಮಡಿಕೇರಿ, ಮಾ. 28: ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಅದು ನಮ್ಮ ದೇಶದ ಹೆಮ್ಮೆ. ಅತೀ ಅಪರೂಪದ ಪ್ರಾಣಿ ಪಕ್ಷಿಗಳು ಮತ್ತು ಜೀವ ವೈವಿಧ್ಯತೆಯ ಆವಾಸ ಸ್ಥಾನವಾಗಿರುವ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಕೊಡಗು ಮತ್ತು ಮೈಸೂರು ಜಿಲ್ಲೆಯ ಗಡಿಯಲ್ಲಿದೆ. ದೇಶದಲ್ಲೇ ಅತ್ಯಧಿಕ ಸಂಖ್ಯೆಯಲ್ಲಿ ಹುಲಿಗಳು ಇದೇ ಉದ್ಯಾನವನದಲ್ಲಿರುವದರಿಂದ ಈ ವನ್ಯಧಾಮವನ್ನು ಹುಲಿ ಸಂರಕ್ಷಿತ ಪ್ರದೇಶವೆಂದೂ ಮಾನ್ಯ ಮಾಡಲಾಗಿದೆ. ಈ ಅರಣ್ಯದಲ್ಲಿ ನೂರಾರು ಬಗೆಯ ಪ್ರಾಣಿಗಳು, 270ಕ್ಕೂ ಅಧಿಕ ಬಗೆಯ ಪಕ್ಷಿಗಳು, ಸಸ್ತನಿಗಳು ಸರೀಸೃಪಗಳು ಮತ್ತು ಸಸ್ಯ ಸಂಕುಲಗಳಿವೆ. ಆದ್ದರಿಂದಲೇ ಈ ಸಂರಕ್ಷಿತ ಅರಣ್ಯವನ್ನು ಯುನೆಸ್ಕೋ ತನ್ನ ಪಾರಂಪರಿಕ ಪಟ್ಟಿಗೆ ಸೇರಿಸುವ ಸಂಬಂಧ ಚಿಂತನೆ ನಡೆಸುತ್ತಿದೆ. ಆದರೆ ಇಂತಹ ಉದ್ಯಾನವನದಲ್ಲಿ ನಮ್ಮ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಲೋಚನೆ ಇಲ್ಲದೆ ಕಾರ್ಯಕ್ಕೆ ಕೈ ಹಾಕಿದ್ದಾರೆ. ಉದ್ಯಾನವನದೊಳಗೆ ಜೆಸಿಬಿ ಕೊಂಡೊಯ್ದು ಅನಪೇಕ್ಷಿತವಾಗಿ ಒಣ ಬಿದಿರುಗಳನ್ನು ತೆರವುಗೊಳಿಸಿದ್ದಾರೆ. ಕೆಲ ವರ್ಷಗಳ ಹಿಂದೆ ವನ್ಯಧಾಮದಾದ್ಯಂತ ಬಿದಿರುಗಳು ಹೂಬಿಟ್ಟು ಒಣಗಿ ಅಲ್ಲಲ್ಲೆ ಕುಸಿದಿವೆ. ಅದರಲ್ಲೂ ನಾಗರಹೊಳೆ ವನ್ಯಧಾಮದ ವೈಶಿಷ್ಟ್ಯವೆಂದೇ ಪರಿಗಣಿತವಾಗಿರುವ ಹಡ್ಲು ಪ್ರದೇಶದಲ್ಲಿ ಈ ಬಿದಿರುಗಳು ಒಣಗಿ ಧರಾಶಾಹಿಯಾಗಿವೆ. ಅರಣ್ಯ ಇಲಾಖೆ ಈ ಬಿದಿರುಗಳನ್ನು ಇತ್ತೀಚೆಗೆ ಜೆಸಿಬಿ ಬಳಸಿ ಸಮತಟ್ಟು ಮಾಡಿ ಎಲ್ಲವನ್ನೂ ಅಲ್ಲಲ್ಲಿ ಗುಡ್ಡೆ ಹಾಕಿದೆ. ವನ್ಯಧಾಮದೊಳಗಿನ ಸಿದ್ದಾಪುರ, ಕುಂತೂರು ಮತ್ತು ಚಿಕ್ಕಪ್ಪನಕೆರೆ ಎಂಬಲ್ಲಿ ಹಲವು ಎಕರೆ ಪ್ರದೇಶದಲ್ಲಿ ಅರಣ್ಯವನ್ನು ಈ ರೀತಿ ಜೆಸಿಬಿ ಬಳಸಿ ಕಾಮಗಾರಿ ನಡೆಸಿದೆ. ಆದರೆ ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಬಿದಿರು ಸಂತಾನಕ್ಕೇ ಮಾರಕವಾಗಿದೆ.
ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘನೆ
ಹೀಗೆ ಜೆಸಿಬಿ ಬಳಸಿ ಕಾಮಗಾರಿ ನಡೆಸಿ ಬಿದಿರು ಮೆಳೆಗಳನ್ನು ತೆರವುಗೊಳಿಸಿರುವದು ಸುಪ್ರೀಂಕೋರ್ಟ್ ಆದೇಶದ ಸ್ಪಷ್ಟ ಉಲ್ಲಂಘನೆಯಾಗಿದೆ.
(ಮೊದಲ ಪುಟದಿಂದ) ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಒಂದು ಹುಲ್ಲುಕಡ್ಡಿಯನ್ನು ಅಲ್ಲಾಡಿಸುವಂತಿಲ್ಲ. ಅರಣ್ಯದೊಳಗೆ ಅನಪೇಕ್ಷಿತ ಕೆಲಸ ಕಾರ್ಯಗಳನ್ನು ಮಾಡಿ ಅರಣ್ಯಕ್ಕೆ ಮತ್ತು ಅಲ್ಲಿನ ಜೀವಸಂಕುಲಕ್ಕೆ ಅಡ್ಡಿ ಮಾಡುತ್ತಾರೆ ಎಂಬ ಉದ್ದೇಶದಿಂದಲೇ ಈ ಹಿಂದೆ 2000ನೇ ಇಸವಿಯಲ್ಲಿ ಸುಪ್ರೀಂ ಕೋರ್ಟ್ ಸ್ಪಷ್ಟ ಆದೇಶ ನೀಡಿದೆ. ರಾಷ್ಟ್ರೀಯ ಉದ್ಯಾನವನ ಮತ್ತು ವನ್ಯಧಾಮಗಳಲ್ಲಿ ಸುಪ್ರೀಂ ಕೋರ್ಟ್ ಅನುಮತಿ ಇಲ್ಲದೆ ಯಾವದೇ ಬಗೆಯ ಅನಪೇಕ್ಷಿತ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತಿಲ್ಲ. ಆದರೆ ನಾಗರ ಹೊಳೆಯ ಅರಣ್ಯಾಧಿಕಾರಿಗಳು ಮಾತ್ರ ಈ ತೀರ್ಪನ್ನು ಉಲ್ಲಂಘಿಸಿ ಜೆಸಿಬಿಯಂತಹ ಬೃಹತ್ ಯಂತ್ರಗಳನ್ನು ಕಾಡಿನೊಳಗೆ ನುಗ್ಗಿಸಿ ಈ ಅವೈಜ್ಞಾನಿಕ ಕಾಮಗಾರಿ ನಡೆಸಿದೆ.
ಕಾಮಗಾರಿಯಿಂದಾಗುವ ನಷ್ಟಗಳೇನು?
ನಾಗರಹೊಳೆಯಲ್ಲಿ ಕಂಡು ಬರುವ ಹಡ್ಲು ಪ್ರದೇಶ ಬಹಳ ವಿಶೇಷವಾದುದು. ಇದು ಈ ಅರಣ್ಯದ ನೀರಿನ ಸೆಲೆಯೂ ಆಗಿರುತ್ತದೆ. ಜಿಂಕೆಗಳು ಮೇವು ಮಾಡುವದು ಕೂಡ ಇಲ್ಲಿಯೇ. ಈ ಕಾಮಗಾರಿ ಯಿಂದ ಆಗಿರುವ ಮಹಾ ಪ್ರಮಾದವೆಂದರೆ ಬಿದಿರು ಮೊಳಕೆಗಳ ನಾಶ. ಕೆಲ ವರ್ಷಗಳ ಹಿಂದೆ ಬಿದಿರುಗಳು ಹೂ ಬಿಟ್ಟು ಸಾಮೂಹಿಕವಾಗಿ ನಾಶವಾಗಿವೆ. ಆದರೆ ಇದೀಗ ಆ ಬಿದಿರುಗಳ ಬೀಜಗಳು ಮೊಳಕೆಯೊಡೆಯುತ್ತವೆ. ಈ ಸಂದರ್ಭ ಆ ಮೊಳಕೆಗಳನ್ನು ಪ್ರಾಣಿಗಳು ಮೇಯದಂತೆ ಈ ಒಣ ಬಿದಿರುಗಳೇ ಬೇಲಿಯಂತೆ ತಡೆದು ಸಂರಕ್ಷಿಸುತ್ತವೆ. ಇದು ನೈಸರ್ಗಿಕ ಪ್ರಕ್ರಿಯೆ. ಆದರೆ ಇದೀಗ ಈ ನೈಸರ್ಗಿಕ ಪ್ರಕ್ರಿಯೆಗೆ ಅಧಿಕಾರಿಗಳ ಹಸ್ತಕ್ಷೇಪ ದಿಂದಾಗಿ ತೊಂದರೆಯಾಗಿದೆ. ಜೆಸಿಬಿ ಓಡಾಟದಿಂದ ಬಿದಿರು ಬೀಜಗಳು ನಾಶವಾಗುವದಲ್ಲದೆ ಅಳಿದುಳಿದ ಬೀಜಗಳು ಮೊಳಕೆಯೊಡೆದರೂ ಅವುಗಳನ್ನು ಪ್ರಾಣಿಗಳು ಮೇಯ್ದು ಬಿದಿರು ಸಂತಾನವೇ ಇಲ್ಲಿ ನಾಮಾವಶೇಷವಾಗುವ ಆತಂಕ ಎದುರಾಗಿದೆ. ಇಂತಹ ಚಟುವಟಿಕೆಗಳಿಂದಾಗಿಯೇ ಕಾಡಿನಲ್ಲಿ ಆಹಾರ ನಾಶವಾಗಿ ಆನೆ ಮಾನವ ಸಂಘರ್ಷ ಹೆಚ್ಚಾಗಿದೆ ಎನ್ನುತ್ತಾರೆ ಪರಿಸರವಾದಿಗಳು.
ಮಾತ್ರವಲ್ಲದೆ ಈ ಹಡ್ಲು ಪ್ರದೇಶ ವಿಶ್ವದ ಇತರ ಎಲ್ಲಾ ವನ್ಯಧಾಮಗಳ ಹಡ್ಲುಪ್ರದೇಶಗಳಿಗಿಂತ ಅತಿ ಸೂಕ್ಷ್ಮವಾಗಿದ್ದು ಅಲ್ಲಿ ಯಾವದೇ ಕಾರಣಕ್ಕೂ ಮಾನವನ ಹಸ್ತಕ್ಷೇಪ ಸಲ್ಲದು ಎಂದು ಪರಿಸರವಾದಿಗಳು ಹೇಳುತ್ತಾರೆ. ಆದರೆ ಇದೀಗ ನಾಗರಹೊಳೆ ಅರಣ್ಯಾಧಿಕಾರಿಗಳು ಮಾತ್ರ ಇಲ್ಲಿ ಬೇಕಾಬಿಟ್ಟಿ ಕಾಮಗಾರಿ ನಡೆಸಿ ಸುಪ್ರೀಂಕೋರ್ಟ್ ತೀರ್ಪು ಉಲ್ಲಂಘಿಸಿರುವದೂ ಅಲ್ಲದೆ, ಬಿದಿರು ಸಂಕುಲಕ್ಕೂ ಸಂಚಕಾರ ತಂದಿದ್ದಾರೆ. ಗೋಪಾಲ ಸೋಮಯ್ಯ