ಇಂದು ಕನ್ನಂಬಾಡಿ ಲಕ್ಷ್ಮೀದೇವಿ ಹಬ್ಬ ಮಡಿಕೇರಿ: ಬಾಳೆಲೆ (ಕೊಪ್ಪಲು) ಗ್ರಾಮದ ಶ್ರೀ ಕನ್ನಂಬಾಡಿ ಲಕ್ಷ್ಮೀದೇವಿಯ ವಾರ್ಷಿಕ ಹಬ್ಬ ತಾ. 30 ರಂದು (ಇಂದು) ನಡೆಯಲಿದೆ. ಬೆಳಿಗ್ಗೆ 9 ಕ್ಕೆ ಜಳಕ, ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ನಂತರ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7.30ಕ್ಕೆ ಲಕ್ಷ್ಮೀ ಅಷ್ಟೋತ್ತರ, 8 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ದುರ್ಗಿ ಪೂಜೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.

ನಾಳೆ ಪ್ರತಿಷ್ಠಾ ಮಹೋತ್ಸವ

ಸೋಮವಾರಪೇಟೆ: ಸಮೀಪದ ಯಡವಾರೆ ಗ್ರಾಮದಲ್ಲಿ ಜೀರ್ಣೋದ್ಧಾರಗೊಳ್ಳಲಿರುವ ಶ್ರೀ ಚನ್ನಿಗರಾಯ ಸ್ವಾಮಿ ದೇವಾಲಯದಲ್ಲಿ ಷಡಾಧರ ಪ್ರತಿಷ್ಠಾ ಮಹೋತ್ಸವವು ತಾ. 31 ಹಾಗೂ ಏ.1ರಂದು ಜರುಗಲಿದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಪ್ರತಿಷ್ಠಾಪನಾ ಮಹೋತ್ಸವವನ್ನು ಕೇರಳದ ಕಾಳೇಘಾಟ್ ತಂತ್ರಿಗಳ ನೇತೃತ್ವದಲ್ಲಿ ನಡೆಸಲಾಗುವದು. ಸೋಮವಾರಪೇಟೆಯ ಅರ್ಚಕರಾದ ಜಗದೀಶ್ ಉಡುಪ ಮತ್ತು ತಂಡ ಪೂಜಾ ಕಾರ್ಯಗಳನ್ನು ನಡೆಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಬಾರನ ಅಪ್ಪಾಜಿ ತಿಳಿಸಿದ್ದಾರೆ.

ತಾ. 31 ಸತ್ಯನಾರಾಯಣ ಪೂಜೆ

ಮಡಿಕೇರಿ: ತಾ. 31ರಂದು ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಸಂಜೆ 5ಗಂಟೆಯಿಂದ ಸಾಮೂಹಿಕ ಸತ್ಯ ನಾರಾಯಣ ಪೂಜೆಯನ್ನು ಏರ್ಪಡಿಸಲಾಗಿದ್ದು, ಪೂಜೆಯಲ್ಲಿ ಪಾಲ್ಗೊಳ್ಳುವವರು ಸದರಿ ದಿನದಂದು ಸಂಜೆ 4-30ರೊಳಗಾಗಿ ತಮ್ಮ ಹೆಸರು ನಮೂದಿಸಿಕೊಂಡು ಪೂಜೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿದ್ದಾಟಂಡ ಎಸ್ ತಮ್ಮಯ್ಯ ತಿಳಿಸಿದ್ದಾರೆ.

ಮುತ್ತಪ್ಪ ಉತ್ಸವ

ಸಿದ್ದಾಪುರ: ನೆಲ್ಯಹುದಿಕೇರಿಯ ಶ್ರೀ ಮುತ್ತಪ್ಪ ದೇವಾಲಯದ 25ನೇ ವಾರ್ಷಿಕೋತ್ಸವ ಹಾಗೂ ತೆರೆ ಮಹೋತ್ಸವವು ಏ.7 ಹಾಗೂ 8 ರಂದು ನಡೆಯಲಿದೆ.

ಏ.7 ರಂದು ಸಂಜೆ 5.30 ಗಂಟೆಗೆ ಸೇತುರಾಂ ಚೆಟ್ಟಿಯಾರ್ ಧ್ವಜಾರೋಹಣದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 5.45 ಕ್ಕೆ ಉತ್ಸವವನ್ನು ಕಾಡಮಂಡ ಮುತ್ತಣ್ಣ ಉದ್ಘಾಟಿಸಲಿದ್ದಾರೆ. 6 ಗಂಟೆಗೆ ಮುತ್ತಪ್ಪನ ಮಲೆ ಇಳಿಸುವದು. 6.30 ಕ್ಕೆ ಮುತ್ತಪ್ಪನ ವೆಳ್ಳಾಟಂ, 6.30ಕ್ಕೆ ಕೆ.ಸಿ ಶೇಖರನ್ ಮನೆಯಿಂದ ಮುತ್ತಪ್ಪನ ಕಲಶವನ್ನು ವಾದ್ಯಮೇಳಗಳೊಂದಿಗೆ ದೇವಾಲಯಕ್ಕೆ ಕರೆತರುವದು. 8 ಗಂಟೆಗೆ ಅನ್ನಸಂತರ್ಪಣೆ, 8.30ಕ್ಕೆ ಶಾಸ್ತಪ್ಪನ ವೆಳ್ಳಾಟಂ, 9 ಕ್ಕೆ ಗುಳಿಗನ ವೆಳ್ಳಾಟಂ ನಡೆಯಲಿದೆ.

ಏ.8 ರಂದು ಬೆಳಗಿನ ಜಾವ 3 ಕ್ಕೆ ಭಗವತಿ ವೆಳ್ಳಾಟಂ, 5 ಕ್ಕೆ ಗುಳಿಗನ ತೆರೆ, 5.30 ಕ್ಕೆ ಶಾಸ್ತಪ್ಪನ ತೆರೆ, ಬೆಳಗ್ಗೆ 6 ಕ್ಕೆ ತಿರುವಪ್ಪನ ತೆರೆ, 9 ಕ್ಕೆ ಭಗವತಿ ತೆರೆ ನಡೆಯಲಿದೆ.

ಸೋಮವಾರಪೇಟೆ : ಸಮೀಪದ ತಾಕೇರಿ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಾಲಯದಲ್ಲಿ ಆಯೋಜನೆಗೊಂಡಿದ್ದ ವಾರ್ಷಿಕ ಮಹಾಪೂಜೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ತೆರೆಕಂಡಿತು.

ಎರಡು ದಿನಗಳ ಕಾಲ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗ್ರಾಮಸ್ಥರಲ್ಲದೇ ಸುತ್ತಮುತ್ತಲಿನ ಸಾರ್ವಜನಿಕರು, ಭಕ್ತಾದಿಗಳು ಭಾಗವಹಿಸಿದ್ದರು. ಸುಳ್ಯದ ದೇರೆಬೈಲು ರಾಘವೇಂದ್ರ ಪ್ರಸಾದ್ ಶಾಸ್ತ್ರಿಗಳ ಪೌರೋಹಿತ್ಯದಲ್ಲಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಪೂಜೆ ಬಲಿ ನೆರವೇರಿತು.

ಇದರೊಂದಿಗೆ ದೇವಾಲಯದಲ್ಲಿ ಗಣಪತಿ ಹೋಮ, ದೇವರಿಗೆ ಕಳಶಾಭಿಷೇಕ, ಉತ್ಸವ ಬಲಿ, ಬಟ್ಟಾಲು ಕಾಣಿಕೆ ನಂತರ ಮಹಾಪೂಜೆ ನೆರವೇರಿತು. ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ಪಾಲ್ಗೊಂಡಿದ್ದರು.

ಅನ್ನದಾನ ಏರ್ಪಡಿಸಲಾಗಿತ್ತು. ಪೂಜಾ ಕಾರ್ಯದಲ್ಲಿ ಉಮಾಮಹೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಗಣೇಶ್ ಭಟ್, ಬಿಳಿಗೇರಿ ಈಶ್ವರ ದೇವಾಲಯದ ಅರ್ಚಕ ಪ್ರಶಾಂತ್‍ಭಟ್ ಸಹಕರಿಸಿದರು.

ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ.ಆರ್.ಮುತ್ತಣ್ಣ, ಕಾರ್ಯದರ್ಶಿ ಡಿ.ಎಸ್. ರಾಮಯ್ಯ, ಈಶ್ವರ ದೇವರ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಎಸ್.ಪಿ. ಪೊನ್ನಪ್ಪ, ಕಾರ್ಯದರ್ಶಿ ಅರುಳಗೌಡನ ಸುಮಂತ್, ಖಜಾಂಜಿ ಆದರ್ಶ, ಕಟ್ಟಡ ಸಮಿತಿ ಅಧ್ಯಕ್ಷ ಎಂ.ಪಿ. ಮುತ್ತಣ್ಣ ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ತಾ. 31ರಂದು ಹನುಮ ಜಯಂತಿ

ವೀರಾಜಪೇಟೆ: ವೀರಾಜಪೇಟೆಯ ಚಿಕ್ಕಪೇಟೆಯ ಛತ್ರಕೆರೆ ಬಳಿಯಿರುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಾ.31ರಂದು ಹನುಮ ಜಯಂತಿ ಆಚರಿಸಲಾಗುವದು ಎಂದು ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.

ಹನುಮ ಜಯಂತಿ ಪ್ರಯುಕ್ತ ದೇವಾಲಯದಲ್ಲಿ ಬೆಳಗಿನಿಂದಲೇ ಪೂಜಾ ಕೈಂಕರ್ಯ ನಡೆಯಲಿದ್ದು, ಅಪರಾಹ್ನ 1 ಗಂಟೆಗೆ ಮಹಾಪೂಜಾ ಸೇವಾ ನಂತರ ಅನ್ನದಾನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.