ಮಡಿಕೇರಿ, ಮಾ.29: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಮಹಾವೀರ ಜಯಂತಿಯನ್ನು ನಗರದ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ಆಚರಿಸಲಾಯಿತು.

ಮಹಾವೀರರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಉಪ ಪೊಲೀಸ್ ವರಿಷ್ಠಾಧಿಕಾರಿ ಸುಂದರ್‍ರಾಜ್, ಜೈನ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಪುಷ್ಪರಾಜು, ಅರುಣ್ ಕುಮಾರ್ ಜೈನ್ ಇತರರು ಪುಷ್ಪಾರ್ಚನೆ ಮಾಡಿ, ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಉಪನ್ಯಾಸಕಿ ಪದ್ಮ ಸಂಪತ್‍ಕುಮಾರ್ ಅವರು ಅಹಿಂಸೆ ಪಾಲನೆ ಮಾಡುವದು ಜೈನ ಧರ್ಮದ ಮೂಲವಾಗಿದೆ. ಆ ದಿಸೆಯಲ್ಲಿ ಮಹಾವೀರರ ತತ್ವ, ಆದರ್ಶಗಳನ್ನು ಅಳವಡಿಸಿಕೊಂಡು ಬದುಕು ಸಾಗಿಸಬೇಕಿದೆ ಎಂದು ಅವರು ಹೇಳಿದರು.

ಮತ್ತೊಬ್ಬರಿಗೆ ನೋವು ಮಾಡದಿರುವದೇ ಅಹಿಂಸೆ ಎಂದು ಮನಗಂಡಿದ್ದ ಮಹಾವೀರರು ತಾನು ಬದುಕು, ಇತರರನ್ನು ಬದುಕಿಸು ಎಂಬುದು ಮಹಾವೀರರ ಆಶಯವಾಗಿತ್ತು ಎಂದು ಅವರು ನುಡಿದರು. ಅಹಿಂಸೆ ಎಲ್ಲಾ ಆಶ್ರಮಗಳ ಹೃದಯ, ಎಲ್ಲಾ ಶಾಸ್ತ್ರಗಳ ರಹಸ್ಯ, ಮಂದರ ಪರ್ವತಕ್ಕಿಂತ ಎಲ್ಲರವಾದುದಿಲ್ಲ, ಆಕಾಶಕ್ಕಿಂತ ವಿಶಾಲವಾದುದಿಲ್ಲ. ಹಾಗೆಯೇ ಅಹಿಂಸೆಗೆ ಸಮನಾದದು ಮತ್ತೊಂದಿಲ್ಲ ಎಂದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ ಭಗವಾನ್ ಮಹಾವೀರರ ಸಂದೇಶಗಳನ್ನು ಅಧ್ಯಯನ ಮಾಡುವಂತಾಗಬೇಕು. ಮಹಾವೀರರ ಸಂದೇಶಗಳನ್ನು ಅಳವಡಿಸಿಕೊಂಡಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದು ಅವರು ನುಡಿದರು. ಪೌರಾಯುಕ್ತೆ ಬಿ.ಶುಭ, ಜಿ.ಪಂ.ಸಹಾಯಕ ಕಾರ್ಯದರ್ಶಿ ಬಾಬು, ಮಣಜೂರು ಮಂಜುನಾಥ್, ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಮತ್ತಿತರರು ಇದ್ದರು.