ಮಡಿಕೇರಿ, ಮಾ. 29: ಕವಿ, ಸಾಹಿತಿಗಳನ್ನು ಜಾತಿ, ಭಾಷೆ ಹಾಗೂ ಪ್ರದೇಶದಿಂದ ಬಿಡುಗಡೆ ಮಾಡಿದ್ದಲ್ಲಿ ಅವರು ತಮ್ಮ ವ್ಯಾಪ್ತಿಯನ್ನು ಮೀರಿ ಸಾಧನೆ ಮಾಡಲು ಸಾಧ್ಯವೆಂದು ಸಾಹಿತಿ ಕೆ.ಪಿ. ಬಾಲಸುಬ್ರಮಣ್ಯ ಹೇಳಿದರು.

ನಗರದ ಬಾಲಭವನದಲ್ಲಿ ಸೌಹಾರ್ದ ಕೊಡಗು ಸಂಘಟನೆ ವತಿಯಿಂದ ನಡೆದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಯ-150ನೇ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಮಾತನಾಡಿದರು. ಕವಿ ಕೇವಲ ತನ್ನ ಭಾಷೆಗೆ ಸೀಮಿತವಾಗಿರುತ್ತಾರೋ ಅಂತಹ ಕವಿಗಳು ತಮ್ಮ ಪ್ರದೇಶದ ವ್ಯಾಪ್ತಿಯನ್ನು ಮೀರಿ ಬೆಳೆಯಲು ಸಾಧ್ಯವಿಲ್ಲ. ಆದರಿಂದ ಕವಿಗಳ ಜಾತಿ, ಭಾಷೆ ಹಾಗೂ ಪ್ರದೇಶದಿಂದ ಬಿಡುಗಡೆಯಾಗಬೇಕು ಎಂದರು. ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿಗಳು ವಿಶ್ವಮಾನ್ಯರು. ಈ ಕವಿ ನಮ್ಮವರು ಎಂಬ ಭಾವನೆ ಕೊಡಗಿನವರಲ್ಲಿದೆ. ಅಪ್ಪಚ್ಚ ಕವಿಗಳನ್ನು ಕೂಡ ಜಾತಿ, ಭಾಷೆ ಪ್ರದೇಶಕ್ಕೆ ಸೀಮಿತಗೊಳಿಸಬಾರದು. ಇವುಗಳೆಲ್ಲದರಿಂದ ಅವರನ್ನು ಬಿಡುಗಡೆ ಮಾಡಬೇಕು. ಸಾವನ್ನಪ್ಪಿದ ನಂತರವೂ ಉಳಿಯುವದೇ ನಿಜವಾದ ಜೀವಂತಿಕೆ. 150 ವರ್ಷಗಳ ನಂತರವೂ ಅಪ್ಪಚ್ಚ ಕವಿಗಳನ್ನು ನೆನಪಿಸುತ್ತಿರುವದು ಆ ಕವಿಯ ಶ್ರೇಷ್ಟತೆಗೆ ಸಂದ ಗೌರವ ಎಂದರು.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪಿ.ಕೆ ಪೊನ್ನಪ್ಪ ಮಾತನಾಡಿ, ಜಾತಿ, ಮತದ ಬೇಧ ಭಾವವಿಲ್ಲದೇ ಎಲ್ಲ ರೀತಿಯ ಸಾಹಿತ್ಯದಲ್ಲೂ ತೊಡಗಿಕೊಳ್ಳಬಹುದು ಎಂಬದನ್ನು ತೋರಿಸಿಕೊಟ್ಟವರು ಅಪ್ಪಚ್ಚ ಕವಿ ಎಂದರು. ಇವರನ್ನು ಇಡೀ ದೇಶದ ಕವಿ ಎಂದರೆ ತಪ್ಪಾಗಲಾರದು. ಸಾಹಿತ್ಯಕ್ಕೆ ಜಾತಿ ಹಂಗಿಲ್ಲ. ಹುಟ್ಟಿದ ಜಾತಿಗೆ ಸಾಹಿತ್ಯ ಸೀಮಿತವಲ್ಲ ಎಂಬುದನ್ನು ಅಪ್ಪಚ್ಚಕವಿ ತೋರಿಸಿಕೊಟ್ಟಿದ್ದಾರೆ. 150 ನೇ ವರ್ಷದ ನಂತರವೂ ಕವಿಯನ್ನು ಸ್ಮರಿಸಿಕೊಳ್ಳುವದು ಉತ್ತಮ ಕಾರ್ಯಕ್ರಮ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೌಹಾರ್ದ ಕೊಡಗು ಸಂಘಟನೆಯ ಅಧ್ಯಕ್ಷ ಡಾ. ಇ.ರಾ. ದುರ್ಗಾ ಪ್ರಸಾದ್ ಮಾತನಾಡಿ, ಆಡುಭಾಷೆಯಲ್ಲಿ ಸುಂದರವಾಗಿ ಬರೆಯಬಹುದು ಎಂಬದನ್ನು ನಮಗೆ ತೋರಿಸಿಕೊಟ್ಟವರು ಅಪ್ಪಚ್ಚಕವಿ ಎಂದರು. ಸಮಿತಿಯ ಕೇಶವ ಕಾಮತ್, ಬಿ.ಎನ್ ಮನುಶೆÀಣೈ, ಷಂಶುದ್ದೀನ್ ಮತ್ತಿತರರು ಇದ್ದರು. ಬೇಬಿ ಮ್ಯಾಥ್ಯೂ ಕಾರ್ಯಕ್ರಮ ನಿರೂಪಿಸಿದರು.