ಚೆಟ್ಟಳ್ಳಿ, ಮಾ. 29: ಚೆಟ್ಟಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಹಂದಿ, ಕುರಿ, ಮೀನು ಮಾರಾಟಕ್ಕೆ ಲೈಸನ್ಸ್ ಹಾಗೂ ಮಳಿಗೆಗೆ ಟೆಂಡರ್ ನೀಡುವ ಪ್ರಕ್ರಿಯೆ ನಡೆದಿದ್ದರೂ ಕೋಳಿ ಮಾಂಸ ಮಾರಾಟದ ಲೈಸನ್ಸ್ ಹಣವನ್ನು ಏರಿಸಲಾಗಿದೆ ಎಂಬ ವಿಚಾರವಾಗಿ ಲೈಸನ್ಸ್ ಪಡೆಯಲು ಯಾರೂ ಮುಂದೆಬರದೆ ಮುಂದೂಡಲಾಯಿತು. ಮತ್ತೊಂದು ಟೆಂಡರ್ ಪ್ರಕ್ರಿಯೆಯಲ್ಲಿ ಚುನಾವಣಾ ನೀತಿ ಸಂಹಿತೆಯಿಂದ ಟೆಂಡರ್‍ಗೆ ವಿಘ್ನ ಏರ್ಪಟ್ಟಂತಾಗಿದೆ.
2018-19ನೇ ಸಾಲಿನ ಕೋಳಿ, ಹಂದಿ, ಕುರಿ, ಮೀನು ಮಾರಾಟಕ್ಕೆ ಹಾಗೂ ಮಳಿಗೆಗೆ ಟೆಂಡರ್ ನೀಡುವಂತೆ ಚರ್ಚಿಸಲಾಗಿತ್ತಾದರೂ ಮಾರಾಟಕ್ಕೆ ಲೈಸನ್ಸ್ ನೀಡುವಂತೆ ಪಂಚಾಯಿತಿ ಸಭೆಯಲ್ಲಿಯೇ ತೀರ್ಮಾನಿಸಲಾಯಿತು. ಕೋಳಿ ಮಾಂಸ ಮಾರಾಟಕ್ಕೆ 75 ಸಾವಿರವನ್ನು 1,25,000ಕ್ಕೂ, ಕುರಿ ಮಾಂಸವನ್ನು 15 ಸಾವಿರದಿಂದ 20 ಸಾವಿರಕ್ಕೂ, ಹಂದಿ ಮಾಂಸ ಮಾರಾಟವನ್ನು 20 ಸಾವಿರದಿಂದ 22 ಸಾವಿರಕ್ಕೂ ಹಸಿ ಮೀನು ಮಾರಾಟವನ್ನು 44 ಸಾವಿರ ಪಾವತಿಸಿ ಲೈಸನ್ಸ್ ಪಡೆಯುವಂತೆ ಗ್ರಾಮ ಪಂಚಾಯಿತಿ ಆದೇಶಿಸಿತ್ತು.
ಆದರೆ ಕಳೆದ ವರ್ಷ 4 ಕೋಳಿಮಾಂಸ ಮಾರಾಟ ಮಳಿಗೆ ರೂ. 75 ಸಾವಿರಕ್ಕೆ ಲೈಸನ್ಸ್ ಪಡೆಯಲಾಗಿತ್ತು. ಈ ವರ್ಷ ಪ್ರತೀ ಲೈಸನ್ಸ್‍ಗೆ 1,25,000 ಏರಿಸಿದ್ದರಿಂದ ಲೈಸನ್ಸ್ ಪಡೆಯಲು ಯಾರು ಮುಂದೆ ಬರಲಿಲ್ಲ. ವ್ಯಾಪಾರಸ್ಥರು ಪಂಚಾಯಿತಿಗೆ ಅರ್ಜಿಸಲ್ಲಿಸಿ ಕೋಳಿ ಮಾಂಸ ಮಾರಾಟದ ಲೈಸನ್ಸ್ ಹಣವನ್ನು ಕಡಿಮೆ ಮಾಡುವಂತೆ ಮನವಿ ಮಾಡಿ ನಂತರದ ಪಂಚಾಯಿತಿ ಸಭೆಯಲ್ಲಿ ತೀರ್ಮಾನಿಸಿ 20 ಸಾವಿರ ಕಡಿಮೆ ಮಾಡಿ ರೂ. 1,05,000ಕ್ಕೆ ಕೋಳಿಮಾಂಸ ಮಾರಾಟದ ಲೈಸನ್ಸ್ ನೀಡಲು ತೀರ್ಮಾನಿಸಲಾಯಿತು. ತಾ.28 ರಂದು 11 ಗಂಟೆಗೆ ಪಂಚಾಯಿತಿ ಅಧ್ಯಕ್ಷೆ ಪಿ.ವಿ. ವತ್ಸಲ ಅವರ ಅಧ್ಯಕ್ಷತೆಯಲ್ಲಿ ಮರು ಟೆಂಡರ್ ನಡೆಸಲು ತೀರ್ಮಾನಿಸಲಾಯಿತು. ಆದರೆ ಒಂದು ದಿನದ ಮುಂಚಿತವಾಗಿ ಚುನಾವಣಾ ಆಯೋಗ ಚುನಾವಣೆ ದಿನವನ್ನು ನಿಗದಿಗೊಳಿಸಿದ ಜೊತೆಗೆ ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಟೆಂಡರ್ ನಡೆಸುವ ಪ್ರಕ್ರಿಯೆಗೆ ತಡೆಯಾಯಿತು.
ಹಿಂದಿನ ಲೈಸನ್ಸ್ ಹಾಗೂ ಟೆಂಡರ್ ಪಡೆದದ್ದು ತಾ. 31ಕ್ಕೆ ಕೊನೆಗೊಳ್ಳುವದು. ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಟೆಂಡರ್ ನಡೆಯುವದರಿಂದ ಏಪ್ರ್ರಿಲ್ ಹಾಗೂ ಮೇ ತಿಂಗಳು ಕಳೆದು ಲೈಸನ್ ಹಾಗೂ ಟೆಂಡರ್ ಹಣದ ಪ್ರಕಾರ ತಿಂಗಳಿಗೆ ಬರುವ ಹಣವನ್ನು ಮುಂಗಡವಾಗಿ ಪಾವತಿಸುವಂತೆ ತೀರ್ಮಾನಿಸಲಾಗಿದೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಹೇಳಿದರು.