ಮಡಿಕೇರಿ, ಮಾ. 29: ದಕ್ಷಿಣ ಗಂಗೆ ಹಾಗೂ ಜೀವನದಿ ಹೆಗ್ಗಳಿಕೆಯ ಕೊಡಗಿನ ಜನತೆಯ ಶ್ರದ್ಧೆಯ ಭಾಗವಾಗಿರುವ ಕಾವೇರಿ ನದಿಯ ಪ್ರಸಕ್ತ ಸ್ಥಿತಿಗತಿ ಬಗ್ಗೆ ಕೇಂದ್ರ ಹಸಿರು ನ್ಯಾಯಪೀಠಕ್ಕೆ ದೂರು ಸಲ್ಲಿಸುವ ಮೂಲಕ ನದಿ ಸಂರಕ್ಷಣೆಯೊಂದಿಗೆ ಮಾಲಿನ್ಯ ತಡೆಗೆ ಕೋರಲಾಗುವದು ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ತಿಳಿಸಿದ್ದಾರೆ.

ಅಲ್ಲದೆ ನದಿಗೆ ಹರಿದು ಬರುವ ಕೊಳಕು ತಡೆಗಟ್ಟಲು ಅಗತ್ಯ ಕ್ರಮಕ್ಕಾಗಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರೊಂದಿಗೆ ಮಾತುಕತೆ ನಡೆಸುವದಾಗಿ ಭರವಸೆ ನೀಡಿದ್ದಾರೆ.

ಮುಂದಿನ ಏಪ್ರಿಲ್ 8 ರಿಂದ 15ರ ತನಕ ಯುವ ಬ್ರಿಗೇಡ್‍ನಿಂದ ಕೊಡಗಿನಲ್ಲಿ ಶ್ರಮದಾನದೊಂದಿಗೆ ಕಾವೇರಿ ಸ್ವಚ್ಛತಾ ಆಂದೋಲನ ಕೈಗೊಳ್ಳುವ ಸಂಬಂಧ ನದಿ ಪಾತ್ರ ಗಳನ್ನು ಖುದ್ದು ವೀಕ್ಷಿಸಿದ ಸಂದರ್ಭ ಅವರು ಮೇಲಿನ ಇಂಗಿತ ವ್ಯಕ್ತಪಡಿಸಿ ದರು. ಸಿದ್ದಾಪುರ, ನೆಲ್ಲಿಹುದಿಕೇರಿ ನಡುವೆ ಸಂಪರ್ಕ ಸೇತುವೆ ಬಳಿ ಕಾವೇರಿಯನ್ನು ಸಂಪೂರ್ಣ ಕೊಳಕಿನಿಂದ ಮಲಿನಗೊಳಿಸಿರುವ ದೃಶ್ಯ ಕಂಡು ಸೂಲಿಬೆಲೆ ತೀವ್ರ ಆತಂಕ ವ್ಯಕ್ತಪಡಿಸಿದರು.

ಅಲ್ಲಿನ ಯುವಕರ ಗುಂಪೊಂದು ಕಾವೇರಿ ಮಲಿನಗೊಳ್ಳುತ್ತಿರುವ ದೃಶ್ಯವನ್ನು ಖುದ್ದಾಗಿ ಚಕ್ರವರ್ತಿ ಸೂಲಿಬೆಲೆ ಗಮನಕ್ಕೆ ತಂದರು. ಈ ವೇಳೆ ಮಾತನಾಡಿದ ಅವರು ಯುವ ಬ್ರಿಗೇಡ್ ಈ ಸಿದ್ದಾಪುರ, ನೆಲ್ಲಿಹುದಿಕೇರಿಯ ವ್ಯಾಪ್ತಿಯಲ್ಲಿ ಆದ್ಯತೆ ಮೇರೆಗೆ ಶ್ರಮದಾನ ನಡೆಯಲಿದ್ದು, ಕೊಳಕು ನದಿ ಸೇರಿದಂತೆ ಎಲ್ಲಾ ಕ್ರಮಕ್ಕೆ ಪ್ರಯತ್ನಿಸಲಾಗುವದು ಎಂದು ಮಾರ್ನುಡಿದರು.

ಕೊಡಗಿನಲ್ಲಿ ಗೋಹತ್ಯೆ ಸಂದರ್ಭವೂ ಸೇರಿದಂತೆ ಕಾವೇರಿ ನದಿಗೆ ಮೀನು, ಕೋಳಿ ಇತ್ಯಾದಿಗಳ ಹೊಲಸು ಸೇರುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಸರಕಾರ ಮತ್ತು ಸಂಬಂಧಪಟ್ಟವರ ಗಮನ ಸೆಳೆದು ಪರ್ಯಾಯ ವ್ಯವಸ್ಥೆಗೆ ಚಿಂತನೆ ಹರಿಸಲಾಗುವದು ಎಂದರು.

ಅನಿಲ ಸಂಸ್ಕರಣೆ: ಕರಾವಳಿಯಲ್ಲಿ ಮೀನಿನ ತ್ಯಾಜ್ಯವನ್ನು ಬಳಸಿಕೊಂಡು ಅಡುಗೆ ಅನಿಲ ಉತ್ಪಾದಿಸುವ ಪ್ರಯತ್ನ ಯಶಸ್ವಿಯಾಗಿರುವದಾಗಿ ಪ್ರಸ್ತಾಪಿಸಿದ ಅವರು, ಕೊಡಗಿನಲ್ಲಿ ಇಂತಹ ಪ್ರಯೋಗದ ಕುರಿತು ಯುವ ಬ್ರಿಗೇಡ್ ಪ್ರಯತ್ನ ನಡೆಸುವದಾಗಿ ಸಿದ್ದಾಪುರದ ಯುವಕರಿಗೆ ಭರವಸೆ ನೀಡಿದರು.

ಆ ದಿಕ್ಕಿನಲ್ಲಿ ಏ. 8 ರಿಂದ ಜಾಗೃತಿ ಅಭಿಯಾನ ವೇಳೆ ಕೊಡಗಿನ ಎಲ್ಲ ಯುವಕರು, ಸ್ತ್ರೀಶಕ್ತಿ, ಮಹಿಳಾ ಪ್ರತಿನಿಧಿಗಳೊಂದಿಗೆ ರಾಜಕೀಯ ಮತ್ತು ಜಾತಿ, ಮತ ಮರೆತು ಖುದ್ದು ಮಾತುಕತೆಯೊಂದಿಗೆ ಕಾವೇರಿಯ ಪಾವಿತ್ರ್ಯ ಕಾಪಾಡಲು ಪ್ರಯತ್ನ ನಡೆಸಲಾಗುವದು ಎಂದು ಖಚಿತಪಡಿಸಿದರು.