ಕೂಡಿಗೆ, ಮಾ. 29 : ಕೊಡಗು ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿಯಿಂದ ಕಳೆದ 15 ವರ್ಷಗಳಿಂದ ರೈತರಿಗೆ ಬೇಸಿಗೆ ಬೆಳೆಗೆ ನೀರುಕೊಡುವ ಯೋಜನೆ ಇದುವರೆಗೂ ಪೂರೈಕೆಯಾಗದೆ ಮರೀಚಿಕೆಯಾಗಿಯೇ ಉಳಿದಿದೆ.

ಮಳೆಗಾಲದಲ್ಲಿ ನೀರು ಸಂಗ್ರಹವಾದ ಸಂದರ್ಭ ಬೇಸಿಗೆ ಬೆಳೆಗೆ ನೀರು ಕೊಡುವ ಯೋಜನೆಯನ್ನು ಕಾರ್ಯಗತ ಮಾಡದೆ ಅಧಿಕಾರಿಗಳು ಮೇಲಾದೇಶ ಬಂತೆಂಬ ಕಾರಣದಿಂದ ನದಿಗೆ ನೀರನ್ನು ಹರಿಸಿ, ನಾಲೆಗಳ ಮೂಲಕ ರೈತರಿಗೆ ಎರಡನೇ ಬೆಳೆ ಮಾಡಲು ನೀರು ಹರಿಸದೆ ಅಣೆಕಟ್ಟೆಯಲ್ಲಿ ನೀರಿಲ್ಲ ಎಂಬ ಕುಂಟು ನೆಪಗಳನ್ನು ಹೇಳುತ್ತಾ, ಇದುವರೆಗೂ ನೀರನ್ನು ಒದಗಿಸುವ ಕಾರ್ಯಕ್ಕೆ ಯಾರು ಕೈ ಹಾಕಿಲ್ಲ.

ಈ ಸಾಲಿನಲ್ಲಿ ಇದುವರೆಗೂ ಮಳೆಬಾರದ ಕಾರಣ ಹಾಗೂ ಬಿಸಿಲಿನ ಧಗೆ ಹೆಚ್ಚಾಗಿ ಇದ್ದ ನೀರು ಸಹ ಆವಿಯಾಯಿತು ಎಂಬಂತೆ ಕಾಣುತ್ತಿದ್ದು, ಇದೀಗ ಅಣೆಕಟ್ಟೆಯ ಹಿನ್ನೀರು ಬರಿದಾದ ಕೆರೆಯಂತೆ ಕಾಣುತ್ತಿದೆ.

ಈಗ ಹಾರಂಗಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 2809.66 ಅಡಿ ಇದ್ದು, ಇದೀಗ 1.077 ಟಿಎಂಸಿ ನೀರು ಇದೆ. ಅಣೆಕಟ್ಟೆಯ ಭದ್ರತೆಯ ದೃಷ್ಟಿಯಲ್ಲಿ 0.25 ಟಿಎಂಸಿ ಇರಬೇಕು. ಮುಂದಾಲೋಚನೆಯ ಕ್ರಮವಾಗಿ ರೈತರಿಗೆ ನೀರು ಒದಗಿಸುವ, ರೈತರ ಬೆಳೆಗಳನ್ನು ಬೆಳೆದು ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳುವ ಯೋಜನೆಗಳತ್ತ ಸಂಬಂಧಪಟ್ಟ ಅಧಿಕಾರಿಗಳು ಚಿಂತನೆ ಮಾಡುವದಿಲ್ಲ ಎಂದು ಶ್ರೀ ರಾಮಲಿಂಗೇಶ್ವರ ನೀರು ಬಳಕೆದಾರರ ಸಂಘದ ಅಧ್ಯಕ್ಷ ಐ.ಎಸ್. ಗಣೇಶ್ ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ದೂರಿದರು. ಕಾವೇರಿ ನೀರಾವರಿ ನಿಗಮದ ಮೇಲ್ಮಟ್ಟದ ಅಧಿಕಾರಿಗಳಿಗೆ ಈ ಬಗ್ಗೆ ಗಮನ ತಂದರೂ ಯಾವದೇ ರೀತಿಯ ಪ್ರಯೋಜನವಾಗುತ್ತಿಲ್ಲ. ಅಲ್ಲದೆ, ಬೇಸಿಗೆ ಬೆಳೆಗೆ ನಾಲೆಗಳ ಮೂಲಕ ನೀರನ್ನು ಹರಿಸದೇ ಈ ಭಾಗದ ರೈತರುಗಳಿಗೆ ಎರಡನೇ ಬೆಳೆ ಬೆಳಯಲು ಸಹಕರಿಸುತ್ತಿಲ್ಲ ಎಂದು ಆರೋಪಿಸಿದರು.

ಈಗಾಗಲೇ ದಿನದಿಂದ ದಿನಕ್ಕೆ ಬಿಸಿಲು ಹೆಚ್ಚುತ್ತಿದ್ದು, ನೀರಿನ ಮಟ್ಟವು ಕುಸಿಯುತ್ತಿರುವದರಿಂದ ಈ ವ್ಯಾಪ್ತಿಯ ನಾಲ್ಕು ಗ್ರಾಮ ಪಂಚಾಯಿತಿಯ 56 ಗ್ರಾಮಗಳ ದನ-ಕರುಗಳಿಗೆ ಕುಡಿಯುಲು ನೀರಿನ ವ್ಯವಸ್ಥೆ ಮಾಡಬೇಕು, ವಿದ್ಯುತ್ ಘಟಕದ ಮೂಲಕ ನದಿಗೆ ಇಂದು 175 ಕ್ಯೂಸೆಕ್ ನೀರು ಹರಿಸುತ್ತಿದ್ದು, ಅದರಂತೆ ಸ್ಪಲ್ಪ ಪ್ರಮಾಣದಲ್ಲಿ ನಾಲೆಗಳ ಮೂಲಕ ನೀರನ್ನು ಹರಿಸಬೇಕೆಂದು ಒತ್ತಾಯಿಸಿದ್ದಾರೆ.

-ಕೆ.ಕೆ.ನಾಗರಾಜಶೆಟ್ಟಿ.