ಮಡಿಕೇರಿ, ಮಾ. 29: ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಪಾಲನೆ ದೃಷ್ಟಿಯಿಂದ ಶೀಘ್ರವೇ ಕೊಡಗಿನ ಗಡಿಗಳಲ್ಲಿ ಪ್ಯಾರಾಮಿಲಿಟರಿ ನಿಯೋಜಿಸಲಾಗುವದು ಎಂದು ವಿಶ್ವಸನೀಯ ಮೂಲಗಳಿಂದ ಗೊತ್ತಾಗಿದೆ. ಅಲ್ಲಿಯ ತನಕ ತಕ್ಷಣದಿಂದ ಕೊಡಗು ಪೊಲೀಸರು ರಾಜ್ಯ ಗಡಿ ಪ್ರದೇಶ ಕುಟ್ಟ, ಮಾಕುಟ್ಟ, ಕರಿಕೆ ವ್ಯಾಪ್ತಿಯಲ್ಲಿ ವ್ಯಾಪಕ ಕಣ್ಗಾವಲು ಇರಿಸಿದ್ದಾರೆ.

ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಗಡಿ ದ್ವಾರಗಳಾದ ಕೊಡಗಿನ ಶಿರಂಗಾಲ, ಆನೆ ಚೌಕೂರು, ಬಾಣಾವರ, ಸಂಪಾಜೆ, ಮಾಲ್ದಾರೆ, ಕೊಪ್ಪ, ನಿಲುವಾಗಿಲು, ಶಾಂತಿಪುರ ಮುಂತಾದೆಡೆಗಳಲ್ಲಿ ಪೊಲೀಸರು ನಿಯೋಜನೆಗೊಂಡಿದ್ದಾರೆ. ಅಲ್ಲದೆ ಅಂತರರಾಜ್ಯ ಗಡಿ ಕರಿಕೆ, ಮಾಕುಟ್ಟ, ಕುಟ್ಟದಲ್ಲಿ ಹೊರರಾಜ್ಯಗಳಿಂದ ಜಿಲ್ಲೆಗೆ ಬರುವ ವಾಹನಗಳು ಹಾಗೂ ವ್ಯಕ್ತಿಗಳ ಬಗ್ಗೆ ಹೆಚ್ಚಿನ ಭದ್ರತೆಯೊಂದಿಗೆ ನಿಗಾ ವಹಿಸಲಾಗುತ್ತಿದೆ ಎಂದು ಮೂಲಗಳಿಂದ ಗೊತ್ತಾಗಿದೆ.

ಈ ದಿಸೆಯಲ್ಲಿ ಕೊಡಗಿಗೆ ಏಪ್ರಿಲ್ 8 ರಂದು ಪ್ಯಾರಾ ಮಿಲಿಟರಿ ತುಕಡಿ ಆಗಮಿಸಲಿರುವದಾಗಿಯೂ, ಅಲ್ಲಿಯ ತನಕ ಸ್ಥಳೀಯ ಪೊಲೀಸರು ದಿನದ 24 ಗಂಟೆಯೂ ಕಾವಲು ನಡೆಸಲಿದ್ದಾರೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಖಚಿತಪಡಿಸಿದ್ದಾರೆ.

ಕುಶಾಲನಗರ: ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಕೊಪ್ಪ ಬಳಿ ವಾಹನಗಳ ತಪಾಸಣೆಗಾಗಿ ಮೈಸೂರು ಜಿಲ್ಲಾಡಳಿತ ವಿಶೇಷ ವಿಚಕ್ಷಣಾ ತಂಡವನ್ನು ನಿಯೋಜಿಸಿದೆ. ಕೊಡಗು ಜಿಲ್ಲೆ ಕಡೆಯಿಂದ ಮೈಸೂರು ಕಡೆಗೆ ಪ್ರವೇಶಿಸುವ ಎಲ್ಲಾ ವಾಹನಗಳ ಕಟ್ಟನಿಟ್ಟಿನ ತಪಾಸಣೆ ಕಾರ್ಯಾಚರಣೆಗೆ 6 ಮಂದಿಯ ತಂಡ ನಿಯೋಜಿಸಲಾಗಿದ್ದು ದಿನದ 24 ಗಂಟೆಗಳ ಕಾಲ 3 ಪಹರೆಗಳಲ್ಲಿ ಕಾರ್ಯ ನಿರ್ವಹಿಸಲಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಗಮನ ಹರಿಸುವದು ಈ ತಂಡದ ಪ್ರಮುಖ ಕೆಲಸವಾಗಿದ್ದು ನಿಗದಿತ ಮೊತ್ತಕ್ಕಿಂತ ಹೆಚ್ಚಿನ ದಾಖಲೆ ರಹಿತ ಹಣ ಸಾಗಿಸುವದು, ಮದ್ಯ ಮತ್ತಿತರ ವಸ್ತುಗಳ ಸಾಗಾಟ ಸಂದರ್ಭ ತನಿಖೆಗೊಳಪಡಿಸುವದು ಈ ತಂಡದ ಪ್ರಮುಖ ಕಾರ್ಯವಾಗಿದೆ ಎಂದು ತಂಡದ ಅಧಿಕಾರಿ ಶಿವಯೋಗ ತಿಳಿಸಿದ್ದಾರೆ.

ಓರ್ವ ಅಧಿಕಾರಿ ಸೇರಿದಂತೆ ಮೂವರು ಪೊಲೀಸರು, ಓರ್ವ ಡಿ ಗ್ರೂಪ್ ನೌಕರ ಮತ್ತು ವೀಡಿಯೋಗ್ರಾಫರ್ ತಂಡದಲ್ಲಿರುತ್ತಾರೆ ಎಂದು ಅವರು ಮಾಹಿತಿ ಒದಗಿಸಿದರು. ಮೈಸೂರು ಕಡೆಯಿಂದ ಕೊಡಗು ಜಿಲ್ಲೆಗೆ ಪ್ರವೇಶಿಸುವ ವಾಹನಗಳನ್ನು ಕೊಡಗು ಜಿಲ್ಲೆಗೆ ಒಳಪಟ್ಟ ಅಧಿಕಾರಿಗಳ ತಂಡ ಕೊಪ್ಪ ಗಡಿಭಾಗದಲ್ಲಿ ತಪಾಸಣೆ ಕೈಗೊಳ್ಳಲಿದೆ.

ಕರಿಕೆ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ತನಿಖೆ ಚುರುಕು ಗೊಂಡಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ರಾಜ್ಯ ಚುನಾವಣಾ ಆಯೋಗ ಚುನಾವಣಾ ನೀತಿಸಂಹಿತೆ ಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾಧಿಕಾರಿಗಳೂ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಪಿ.ಐ.ಶ್ರೀ ವಿದ್ಯಾ ಅಧಿಕಾರಿಗಳ ತುರ್ತು ಸಭೆನಡೆಸಿ ಓರ್ವ ಸೆಕ್ಟರ್ ಮ್ಯಾಜಿಸ್ಟ್ರೇಟ್, ಸಹಾಯಕ ಅಧಿಕಾರಿ ಸೇರಿದಂತೆ ಮೂರು ತಂಡಗಳಾಗಿ ಗಡಿಭಾಗದಲ್ಲಿ ನೇಮಿಸಿದ್ದಾರೆ. ಅಲ್ಲದೆ ಇವರಿಗೆ ಸಹಾಯಕರಾಗಿ ಅಬ್ಕಾರಿ, ಪೋಲಿಸ್ ಸಿಬ್ಬಂದಿ ಗಳನ್ನು ಕೂಡ ಬಳಸಿಕೊಳ್ಳಲಾಗುತ್ತಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ವಾಹನಗಳಲ್ಲಿ ದಾಖಲೆ ರಹಿತ ಹಣ, ಮದ್ಯ, ಉಡುಗೊರೆ, ಬಂಟಿಂಗ್ಸ್, ಪ್ಲೆಕ್ಸ್‍ಗಳನ್ನು ಸಾಗಾಟ ಮಾಡಿದಲ್ಲಿ ಮುಟ್ಟುಗೋಲು ಹಾಕಿಕೊಂಡು ಪೋಲಿಸ್ ಠಾಣೆಗಳಲ್ಲಿ ಪ್ರಕರಣ ದಾಖಲಿಸಲಾಗುವದು ಎಂದು ಸ್ಥಳದಲ್ಲಿ ಕರ್ತವ್ಯ ನಿರತ ಸೆಕ್ಟರ್ ಮ್ಯಾಜಿಸ್ಟ್ರೇಟ್‘ಶಕ್ತಿ' ಗೆ ಮಾಹಿತಿ ನೀಡಿದ್ದಾರೆ.