ಮಡಿಕೇರಿ, ಮಾ. 29: ಈ ಬಾರಿಯ ಚುನಾವಣಾ ಸಂದರ್ಭ ವಿದ್ಯುನ್ಮಾನ ಯಂತ್ರ ಬಳಸಿ ಮತ ಚಲಾಯಿಸಿದಾಗ, ಪಕ್ಕದಲ್ಲಿರುವ ಯಂತ್ರದಲ್ಲಿ ನಿಮ್ಮ ಮತ ಯಾರಿಗೆ ಎಂಬ ಚಿತ್ರ ನಿಮ್ಮ ಕಣ್ಣ ಮುಂದೆ ಮೂಡಿ ಬರಲಿದೆ.ವಿ.ವಿ. ಪ್ಲಾಟ್ ಎಂಬ ಮುದ್ರಣ ವ್ಯವಸ್ಥೆಯೂ ಇರುವ ಈ ಯಂತ್ರದಲ್ಲಿ ನೀವು ಮತ ಚಲಾಯಿಸಿದ 7 ಸೆಕೆಂಡ್‍ಗಳ ಕಾಲ ನಿಮ್ಮ ಮತ ಯಾರಿಗೆ ಬಿದ್ದಿದೆ ಎಂಬ ಸಂದೇಶ ಬರಲಿದೆ. ಅಭ್ಯರ್ಥಿಗಳ ಹೆಸರು ಬದಲಿಗೆ ಅವರುಗಳಿಗೆ ನೀಡುವ ಸಂಖ್ಯೆ ಪರದೆ ಮೇಲೆ ಮೂಡಿ ಬರುತ್ತದೆ. 7 ಸೆಕೆಂಡ್‍ಗಳ ಬಳಿಕ ಅದನ್ನೇ ಮುದ್ರಿಸುವ ಚೀಟಿಯೊಂದು ಯಂತ್ರದಲ್ಲೇ ಸೀಲಾಗಿರುವ ಡಬ್ಬಿಯೊಳಗೆ ಬೀಳುತ್ತದೆ.

ಯಾರಿಗೆ ಮತ ಹಾಕಿದ್ದೇನೆ ಎಂದು ತಿಳಿದುಕೊಳ್ಳುವ ಹಕ್ಕು ಮತದಾರನಿಗೆ ಇರಬೇಕು ಎಂದು ಮತದಾರರೊಬ್ಬರು ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದ ಪರಿಣಾಮ ಅದರ ಆದೇಶದಂತೆ ಈ ಆವಿಷ್ಕಾರ ನೂತನವಾಗಿ ಬಂದಿದೆ.

ವಿದ್ಯುನ್ಮಾನ ಮತ ಯಂತ್ರಕ್ಕೆ ಅಳವಡಿಕೆಯಾಗುವ ವಿ.ವಿ. ಪ್ಲಾಟ್ (ಗಿoಣeಡಿ ಗಿeಡಿiಜಿiಛಿಚಿಣioಟಿ Pಚಿಠಿeಡಿ ಂuಜiಣ ಖಿಡಿಚಿiಟ) ಸಂಸ್ಥೆ ಃಇಐ ತಯಾರಿಸಿದ್ದು, ಪ್ರತಿ ಮತ ಯಂತ್ರದೊಂದಿಗೆ ಈ ಬಾರಿ ಅದನ್ನು ಅಳವಡಿಸಲಾಗುತ್ತದೆ. ಮತದಾನ ದಂದು ಒಂದು ಗಂಟೆ ಮುಂಚಿತವಾಗಿ ರಾಜಕೀಯ ಪಕ್ಷಗಳ ಅಧಿಕೃತ ಏಜೆಂಟರಿಗೆ ಯಂತ್ರದ ಅಣಕು ಮತದಾನ ಪ್ರದರ್ಶನ ನೀಡಿ, ಕಾರ್ಯವೈಖರಿಯನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ. ಆನಂತರ ಯಂತ್ರದಲ್ಲಿರುವ ಡಬ್ಬಿಗೆ ಸೀಲ್ ಮಾಡಿ ಮತದಾನ ಆರಂಭವಾಗುತ್ತದೆ.

ಎಷ್ಟು ಜನ ಮತದಾನ ಮಾಡುತ್ತಾರೋ ಅಷ್ಟು ಚೀಟಿಗಳು ಮುದ್ರಣಗೊಂಡು ಆ ಯಂತ್ರದೊಳಗೆ ಬೀಳುತ್ತವೆ.

ಮತ ಎಣಿಕೆ ಸಂದರ್ಭ ಈ ಯಂತ್ರಗಳನ್ನು ಮತ ಎಣಿಕಾ ಕೇಂದ್ರಕ್ಕೆ ತರದೆ ಸ್ಟ್ರಾಂಗ್

(ಮೊದಲ ಪುಟದಿಂದ) ರೂಂನಲ್ಲಿ ಇರಿಸಲಾಗುತ್ತದೆ. ಪರೀಕ್ಷೆ ಮಾಡುವ ಸಲುವಾಗಿ ಚುನಾವಣಾಧಿಕಾರಿ ಯಾವದೋ ಒಂದು ಯಂತ್ರವನ್ನು ಎಲ್ಲರ ಸಮ್ಮುಖದಲ್ಲಿ ಪರಿಶೀಲಿಸುತ್ತಾರೆ. ಮತಯಂತ್ರದಲ್ಲಿ ಕೆಲವೇ ನಿಮಿಷಗಳಲ್ಲಿ ಮತದಾನದ ಎಲ್ಲ ವಿವರಗಳೂ ಹೊರ ಬೀಳಲಿದ್ದು, ಯಾವದೇ ಸಂಶಯ ಬಂದಲ್ಲಿ ವಿವಿ ಪ್ಲಾಟ್ ಯಂತ್ರವನ್ನು ತಂದು ಮುದ್ರಿತ ಚೀಟಿಗಳನ್ನು ಎಣಸಿ ಮತ ಎಣಿಕೆ ಮಾಡಲಾಗುತ್ತದೆ.

ಎಲ್ಲ ಮತಯಂತ್ರಗಳ ಮತಗಳನ್ನು ಒಟ್ಟಾರೆ ಕೂಡಿಸುವ ತಂತ್ರಜ್ಞಾನದ ಬಗ್ಗೆಯೂ ಆಲೋಚಿಸಲಾಗುತ್ತಿದೆ.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷದವರು ಮತ್ತು ಮಾಧ್ಯಮಗಳಿಗೆ ಪ್ರತ್ಯೇಕ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲಾಧಿಕಾರಿ ಶ್ರೀವಿದ್ಯಾ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ಎಂ. ಸತೀಶ್ ಮೇಲಿನ ವಿವರ ನೀಡಿದರು.

ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಆಯೋಗದ ಆದೇಶ ಬಂದ ನಂತರ ತರಬೇತಿ ನೀಡಲಾಗುವದೆಂದು ಶ್ರೀವಿದ್ಯಾ ತಿಳಿಸಿದರು.

ಚುನಾವಣಾ ದಿನಾಂಕದ ಮೊದಲ ದಿನ ಈ ಎಲ್ಲ ಯಂತ್ರಗಳನ್ನು ಜಿಪಿಎಸ್ ಅಳವಡಿಸಿರುವ ವಾಹನಗಳಲ್ಲೇ ಮತದಾನ ಕೇಂದ್ರಗಳಿಗೆ ಸಾಗಿಸಲಾಗುವದು ಎಂದು ಅಧಿಕಾರಿಗಳು ವಿವರಿಸಿದರು. ಜಿಲ್ಲೆಗೆ 530 ಮತಗಟ್ಟೆಗಳಿಗಾಗಿ ಹಾಗೂ ಹೆಚ್ಚುವರಿಯಾಗಿಯೂ ಯಂತ್ರಗಳ ವಿತರಣೆಯಾಗಿದೆ ಎಂದು ಸತೀಶ್ ಮಾಹಿತಿ ನೀಡಿದರು.

ಮತದಾರರ ಪಟ್ಟಿ: ಈಗಲೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಅವಕಾಶವಿದ್ದು, ಮತದಾರರು ಹೆಚ್ಚಿನ ಆಸಕ್ತಿ ತೋರುವಂತೆ ಕರೆ ನೀಡಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಎಲ್ಲೆಡೆ ಸದ್ಯದಲ್ಲೇ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವದು ಎಂದರು.

ನೀತಿ ಸಂಹಿತೆ: ರಾಜಕೀಯ ವ್ಯಕ್ತಿಗಳು ಯಾವದೇ ವ್ಯಕ್ತಿಯ ವೈಯಕ್ತಿಕ ನಿಂದನೆ, ಜಾತಿ ಧರ್ಮವನ್ನು ಉಲ್ಲೇಖಿಸಿ ಟೀಕೆಯಂತಹ ಮಾತುಗಳನ್ನಾಡಿದಲ್ಲಿ ಈ ಬಗ್ಗೆ ಕ್ರಮಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರಲ್ಲದೆ, ಈ ಬಗ್ಗೆ ಮಾಧ್ಯಮದವರೂ ಜಾಗೃತರಾಗಿರುವಂತೆ ಸೂಚಿಸಿದರು. ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳ ಪ್ರತಿಯೊಂದನ್ನು ಮಾಧ್ಯಮ ಸಮಿತಿಗೆ ಮುದ್ರಿತ ಅರ್ಜಿ ಭರ್ತಿ ಮಾಡುವದರೊಂದಿಗೆ ಸಲ್ಲಿಸಿ ಅವರ ಅನುಮತಿ ಪಡೆದು ಪ್ರಕಟಿಸಬೇಕೆಂದು ಸೂಚಿಸಿದರು.