ಮಡಿಕೇರಿ, ಮಾ. 29: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಇತ್ತೀಚಿನ ವರ್ಷಗಳನ್ನು ಗಮನಿಸಿದರೆ ದುಬಾರೆಯ ದ್ವೀಪ ಪ್ರದೇಶ ಸದಾ ಹೊರಗಿನಿಂದ ಬರುವ ಜನತೆಯಿಂದ ಗಿಜಿಗುಟ್ಟುತ್ತಿತ್ತು. ವಿಶೇಷವಾಗಿ ರಜಾದಿನಗಳಲ್ಲಿ ದೂರದ ಊರಿನಿಂದ ಪ್ರವಾಸ ಬರುತ್ತಿದ್ದ ಶಾಲಾ- ಕಾಲೇಜು ಮಕ್ಕಳು ಜಲಕ್ರೀಡೆಯಲ್ಲಿ ಮೈಮರೆಯುತ್ತಿದ್ದ ದೃಶ್ಯ ಕಣ್ಣು ಕಟ್ಟುತ್ತಿತ್ತು.ಕೊಡಗಿನ ಜೀವನದಿ ಕಾವೇರಿಯ ಮಡಿಲಿನಲ್ಲಿ ಮಿಂದೆದ್ದು, ನಲಿಯುವ ಸಾಮಾನ್ಯ ದೃಶ್ಯ ಒಂದೆಡೆಯಾದರೆ, ಗುಡ್ಡೆಹೊಸೂರುವಿನಿಂದ ನಂಜರಾಯಪಟ್ಟಣ ತನಕ ನಾಲ್ಕಾರು ಕಡೆಗಳಲ್ಲಿ ರ್ಯಾಫ್ಟಿಂಗ್ ಮೂಲಕ ಸಾಹಸ ಮೆರೆಯುತ್ತಿದ್ದ ರೋಮಾಂಚಕಾರಿ ಕ್ಷಣ ಎದುರಾಗುತ್ತಿತ್ತು.

ಇನ್ನು ನಿಗದಿತ ಸಮಯದಲ್ಲಿ ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ; ಅತ್ತ ಬರುವ ಪ್ರವಾಸಿಗರು ಕಾವೇರಿಯ ಹರಿವನ್ನು ಮೋಟಾರು ಬೋಟ್‍ಗಳಿಂದ ದಾಟಿ ಆ ದುಬಾರೆ ಸಾಕಾನೆ ಶಿಬಿರದಲ್ಲಿ ಗಜಗಳ ಮೇಲಾಟವನ್ನು ಕಣ್ತುಂಬಿಕೊಂಡು ಹರ್ಷಿಸುತ್ತಿದ್ದರು.

ಸಾಕಾನೆ ಶಿಬಿರದಲ್ಲಿ ಖಾಯಂ ಬದುಕು ಸವೆಸುತ್ತಿರುವ, ಸಾಕಾನೆಗಳನ್ನು ನಿತ್ಯವೂ ನೋಡಿಕೊಳ್ಳುತ್ತಿರುವ ಮಾವುತರು, ಕಾವಾಡಿಗಳು ಮತ್ತು ಈ ವೃತ್ತಿ ನಿರತ ಆದಿವಾಸಿಗಳ ಕುಟುಂಬದ ಚಿಣ್ಣರು ಪ್ರವಾಸಿಗರಿಗೆ ಮುದ ನೀಡುತ್ತಾ, ಒಂದಿಷ್ಟು ಪುಡಿಗಾಸು ಗಿಟ್ಟಿಸಿಕೊಂಡು ಆ ಮುಖಾಂತರವೂ ತೃಪ್ತಿ ಕಾಣುತ್ತಿದ್ದರು.

ಸ್ತಬ್ಧಗೊಂಡ ದೃಶ್ಯ: ಇದೀಗ ದುಬಾರೆಯ ಕಾವೇರಿ ತಟ ಒಂದು ರೀತಿ ಸ್ತಬ್ಧಗೊಂಡಿದೆ. ಕಳೆದ ಒಂದು ತಿಂಗಳಿನಿಂದ ಇಲ್ಲಿ ರ್ಯಾಫ್ಟಿಂಗ್ ನಿಷೇಧಿಸಲ್ಪಟ್ಟಿದೆ. ರ್ಯಾಫ್ಟಿಂಗ್ ನಿಷೇಧದ ಬೆನ್ನಲ್ಲೇ ನದಿಯೊಡಲಿನಲ್ಲಿ ಕಾಣುತ್ತಿದ್ದ ‘ರ್ಯಾಫ್ಟ್’ಗಳು ಅಲ್ಲಿಂದ ಕಣ್ಮರೆಯಾಗಿವೆ. ಇದೇ ಸಂದರ್ಭ ದುಬಾರೆ ದ್ವೀಪದತ್ತ ತೆರಳುವ ರಸ್ತೆ ಕಾಮಗಾರಿಯು ನಡೆಯುತ್ತಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಕೂಡ ನಿಷೇಧವಿದೆ.

ಪರಿಣಾಮ ದುಬಾರೆಗೆ ಬರುವ ಪ್ರವಾಸಿಗರ ಸಂಖ್ಯೆ ಸಹಜವಾಗಿಯೇ ಇಳಿಮುಖಗೊಂಡಂತಿದೆ. ಈ ನದಿ ತಟದುದ್ದಕ್ಕೂ ರ್ಯಾಫ್ಟಿಂಗ್‍ನೊಂದಿಗೆ ವ್ಯಾಪಾರೋದ್ಯಮ ಕಟ್ಟಿಕೊಂಡಿದ್ದ ಮಳಿಗೆಗಳು- ಹೊಟೇಲ್‍ಗಳ ಸಹಿತ ಬೀದಿ ವ್ಯಾಪಾರ ಕೂಡ ಬಣಗುಟ್ಟುವಂತಾಗಿದೆ.

ಸಹಜವಾಗಿಯೇ ನದಿ ಮೂಲದ ನೀರು ಕಡಿಮೆಯಾಗಿರುವ ಪರಿಣಾಮ, ಅರಣ್ಯ ಇಲಾಖೆಯ ಮೋಟಾರ್ ಬೋಟ್‍ಗಳ ಮೂಲಕ ದುಬಾರೆ ಸಾಕಾನೆ ಶಿಬಿರಕ್ಕೆ ನದಿ ಮೂಲಕ ದಾಟುತ್ತಿದ್ದ ಬೆರಳೆಣಿಕೆ ಪ್ರವಾಸಿ ಮಂದಿ ಬಂಡೆಗಳ ನಡುವೆ ಕಾಲ್ನಡಿಗೆಯಲ್ಲಿ ಸರಾಗ ದಾಟಿ ಹೋಗುವ ದೃಶ್ಯ ಗೋಚರಿಸತೊಡಗಿದೆ.

ಈಗಾಗಲೇ ಏಪ್ರಿಲ್ ಅಂತ್ಯದ ತನಕ ಜಿಲ್ಲಾಧಿಕಾರಿಗಳು ಮತ್ತೆ ದುಬಾರೆಯಲ್ಲಿ ರ್ಯಾಫ್ಟಿಂಗ್ ಚಟುವಟಿಕೆ ನಿಷೇಧಿಸಿ ಆದೇಶ ಹೊರಡಿಸಿರುವ ಪರಿಣಾಮ, ಒಂದೊಮ್ಮೆ ಪ್ರವಾಸಿಗಳಿಂದ ಗಿಜಿಗುಡುತ್ತಿದ್ದ ಈ ಪ್ರವಾಸಿ ಕೇಂದ್ರ ಬಿಸಿಲಿನ ಸುಡುತಾಪದ ನಡುವೆ ಬಣಗುಟ್ಟುವಂತಾಗಿರುವದು ವಾಸ್ತವ. ಹೀಗಾಗಿ ಇಲ್ಲಿ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಕಳೆದ ಸುಮಾರು ಎರಡು ದಶಕಗಳಿಂದ ಬದುಕು ಕಟ್ಟಿಕೊಂಡಿದ್ದವರು ಕಂಗಾಲಾಗಿದ್ದಾರೆ.

ಇನ್ನೊಂದೆಡೆ ಈ ಭಾಗದಲ್ಲಿ ಸ್ವಂತ ಜಮೀನು ಹೊಂದಿರುವವರು ಇದೀಗ ರ್ಯಾಫ್ಟಿಂಗ್ ನಿಷೇಧಿಸಿರುವ ಪರಿಣಾಮ, ಅಲ್ಲಲ್ಲಿ ಹೋಂ ಸ್ಟೇ, ರಸ್ತೆ ಬದಿ ವಾಹನ ನಿಲುಗಡೆ ತಾಣ, ಮರಗಿಡಗಳ ನಡುವೆ ಮಕ್ಕಳಿಗೆ ಸೆಳೆಯುವ ವಿಭಿನ್ನ ಕ್ರೀಡಾ ಚಟುವಟಿಕೆ... ಇತ್ಯಾದಿ ಹೊಸ ಪ್ರಯೋಗಗಳನ್ನು ರೂಪಿಸಲು ಮುಂದಾಗಿರುವ ದೃಶ್ಯ ಗೋಚರಿಸತೊಡಗಿದೆ.

ಕಾಡಾನೆ ಭೀತಿ: ಈ ಎಲ್ಲಾ ಬೆಳವಣಿಗೆ ನಡುವೆ ದುಬಾರೆ ಸಾಕಾನೆ ಶಿಬಿರಕ್ಕೆ ಹೊರಗಿನಿಂದ ಕಾಡಾನೆಗಳು ನುಸುಳಿರುವ ಭೀತಿಯಿಂದಾಗಿ ಅತ್ತ ಪ್ರವಾಸಿಗರು ತೆರಳಲು ಭಯಪಡುವಂತಾಗಿದೆ. ಹೊಸ ವರ್ಷದ ಯುಗಾದಿಯ ಒಂದೆರಡು ದಿನ ಕಾವೇರಿ ನಾಡಿನಲ್ಲಿ ಉತ್ತಮ ಮಳೆಯಾದ ಬೆನ್ನಲ್ಲೇ; ಬಿಸಿಲಿನ ತಾಪ ತೀವ್ರಗೊಂಡು ನದಿಯೊಡಲು ಬತ್ತುತ್ತಿರುವ ಪರಿ ಪ್ರವಾಸಿಗರೊಂದಿಗೆ ಕೊಡಗಿನ ನಿವಾಸಿಗಳು ಕೂಡ ಎಲ್ಲೆಡೆ ಕಂಗೆಡುವಂತೆ ಮಾಡಿರುವದು ವಾಸ್ತವ.