ಕುಶಾಲನಗರ, ಮಾ. 29: ಬಲಿದಾನ ಇಲ್ಲದೆ ಸಾಮಾಜಿಕ ಪರಿವರ್ತನೆ ಅಸಾಧ್ಯ ಎಂದು ಹಿಂದು ಜಾಗರಣಾ ವೇದಿಕೆ ಪ್ರಮುಖ ಜಗದೀಶ್ ಕಾರಂತ್ ಅಭಿಪ್ರಾಯ ವ್ಯಕ್ತಪಡಿಸಿದರು.ಗುಡ್ಡೆಹೊಸೂರು ಹಾರಂಗಿ ರಸ್ತೆಯ ಸಮೀಪ ಹತ್ಯೆಗೊಳಗಾದ ಪ್ರವೀಣ್ ಪೂಜಾರಿ ಅವರ ಕುಟುಂಬಕ್ಕೆ ನೂತನ ಮನೆ ನಿರ್ಮಿಸಿ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಾಮಾಜಿಕ ಸಂಘರ್ಷಗಳ ನಡುವೆ ಬಲಿದಾನ ಎನ್ನುವದು ಅನಿವಾರ್ಯ. ಹುತಾತ್ಮರ ಕುಟುಂಬ ಸದಸ್ಯರ ರಕ್ಷಣೆ ಮಾಡುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸಂಘ ಪರಿವಾರ ಈ ನಿಟ್ಟಿನಲ್ಲಿ ಸಮಾಜ ಸದೃಢಗೊಳಿಸುವ ಕೆಲಸ ಮಾಡುತ್ತಿದೆ. ಬಲಿಷ್ಠ ರಾಷ್ಟ್ರ ಕಟ್ಟುವ ಸಂದರ್ಭ ಮತ್ತಷ್ಟು ಬಲಿದಾನಕ್ಕೆ ಸಿದ್ದರಾಗಬೇಕು ಎಂದು ಕರೆ ನೀಡಿದ ಜಗದೀಶ್ ಕಾರಂತ್, ಭಾರತ ದೇಶ ಸಂಘರ್ಷದತ್ತ ಸಾಗುತ್ತಿರುವದು ದುರಂತ ವಿಷಯವಾಗಿದೆ ಎಂದರು. ಆದರೆ ಯಾವದೇ ಸಂದರ್ಭ ಸಮಾಜ ಕಂಗಾಲಾಗದೆ ಸಶಕ್ತ ಸಮಾಜ ನಿರ್ಮಾಣದ ಕಲ್ಪನೆ ಹೊಂದಬೇಕಾಗಿದೆ ಎಂದರು.
ಈ ಸಂದರ್ಭ ರೂ. 8 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಮನೆಯಲ್ಲಿ ಪೂಜಾ ಕಾರ್ಯಕ್ರಮ ಜರುಗಿತು. ನಂತರ ಸಂಘಸಂಸ್ಥೆಗಳ ಪ್ರಮುಖರು ಪ್ರವೀಣ್ ಪೂಜಾರಿ ತಂದೆ ಚಂದಪ್ಪ ಪೂಜಾರಿ, ಸಹೋದರಿ ಸುನಿತಾ ಹಾಗೂ ಕುಟುಂಬ ಸದಸ್ಯರಿಗೆ ಶುಭ ಕೋರಿದರು.
ಈ ಸಂದರ್ಭ ಹಿಂಜಾವೆಯ ಜಿಲ್ಲಾ ಪ್ರಮುಖರಾದ ಚಕ್ಕೆರ ಮನು, ಕರ್ನಾಟಕ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಕೆ.ಟಿ. ಉಲ್ಲಾಸ್, ಕೆ.ಕೆ. ದಿನೇಶ್, ಮಂಜುನಾಥ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಬಿ.ಬಿ. ಭಾರತೀಶ್, ಪ್ರಮುಖ ಜೀವನ್ ಮತ್ತಿತರರು ಇದ್ದರು.